ಕೆಎಚ್‌ಬಿಯಲ್ಲಿ ಅಕ್ರಮ ನಡೆದಿಲ್ಲ

ShivalingeGowda
Published on

ಬೆಂಗಳೂರು: ಕರ್ನಾಟಕ ಗೃಹ ಮಂಡಳಿಯಲ್ಲಿ (ಕೆಎಚ್‌ಬಿ) ಯಾವುದೇ ಅಕ್ರಮ ನಡೆದಿಲ್ಲ. ಯಲಹಂಕ ಉಪನಗರದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸೈಟ್ ಕಬಳಿಕೆ ಪ್ರಕರಣ ಸಂಬಂಧ 2020ರಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅಮಾನತು ಮಾಡಿ ಕೇಸ್ ದಾಖಲಿಸಲಾಗಿದೆ ಎಂದು ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಸ್ಪಷ್ಟನೆ ನೀಡಿದ್ದಾರೆ.

ಯಲಹಂಕ ಉಪನಗರ ಎ ಸೆಕ್ಟರ್ ಬಡಾವಣೆಯಲ್ಲಿ ಕೆಎಚ್‌ಬಿಗೆ ಸೇರಿದ 271ನೇ ಎಂಐಜಿ ಖಾಲಿ ಸೈಟ್‌ಗೆ 1986ರಲ್ಲಿ ಸತೀಶ್ ಹರಿಣಿ ಎಂಬಾಕೆ ನಕಲಿ ದಾಖಲೆ ಸೃಷ್ಟಿಸಿ ಗೋವಿಂದಯ್ಯ ಎಂಬುವರಿಗೆ 1995ರ ಆಗಸ್ಟ್‌ನಲ್ಲಿ ಜಿಪಿಎ ಮಾಡಿದ್ದರು. ಗೋವಿಂದಯ್ಯ, ಬಿಬಿಎಂಪಿಯಲ್ಲಿ ಖಾತೆ ಪಡೆಯಲು ಕೆಎಚ್‌ಬಿಗೆ ಎನ್‌ಒಸಿ ಕೋರಿ 2023ರಲ್ಲಿ ಅರ್ಜಿ ಸಲ್ಲಿಸಿದ್ದರು. ಪರಿಶೀಲನೆ ವೇಳೆ 2020ರಲ್ಲಿ ಅಂದಿನ ಎಇಇ ಸೈಯದ್ ಅಗ್ಸರ್ ಕ್ರಯ ಪತ್ರ ಮಾಡಿಕೊಟ್ಟಿದ್ದರು.

ತಕ್ಷಣ ಎಇಇಯನ್ನು ಅಮಾನತು ಮಾಡಲಾಗಿದೆ. 2023ರಲ್ಲಿ ಕ್ರಯಪತ್ರ ರದ್ಧುಪಡಿಸಿ ಕೆಎಚ್‌ಬಿ ಹೆಸರಿನಲ್ಲಿ ಖಾತಾ ವರ್ಗಾವಣೆ ಮಾಡಲಾಗಿದೆ. ಇತ್ತೀಚೆಗೆ ಆ ಖಾಲಿ ಸೈಟ್ ಹರಾಜಿಗೆ ಹೋದಾಗ ಗೋವಿಂದಯ್ಯ, ಹೈಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಇಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಕೋರ್ಟ್ ಗಮನಕ್ಕೆ ಎಲ್ಲ ಮಾಹಿತಿ ತಂದು ತಡೆಯಾಜ್ಞೆ ತೆರವು ಮಾಡಿಸುತ್ತೇವೆ ಎಂದು ಅಧ್ಯಕ್ಷರು ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net