ಕಾರು ತಾಗಿದ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ

Upp_Fight
Published on

ಬೆಂಗಳೂರು: ನಗರದಲ್ಲಿ ರೋಡ್ ರೇಜ್ ಪ್ರಕರಣ ಮುಂದುವರಿದಿದ್ದು ಕಾರು ತಾಗಿದ ವಿಚಾರಕ್ಕೆ ಇಬ್ಬರು ಚಾಲಕರ ಮಧ್ಯೆ ಜಗಳವಾಗಿ ನಡುರಸ್ತೆಯಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ.
ಸೆ. ೫ ರಂದು ವೈಟ್‌ಫೀಲ್ಡ್‌ನ ಐಟಿಪಿಎಲ್ ಮುಖ್ಯರಸ್ತೆಯಲ್ಲಿ ಗಲಾಟೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಸಾಮಾಜಿಕ ಜಾಲತಾಣವಾದ ಎಕ್ಸ್‌ನ ಸಿಟಿಜನ್ಸ್ ಮೂಮೆಂಟ್ಸ್, ಈಸ್ಟ್ ಬೆಂಗಳೂರು ಖಾತೆಯಲ್ಲಿ ವಿಡಿಯೋ ಸಮೇತ ಟ್ವೀಟ್ ಮಾಡಿ, ನಡೆದ ಘಟನೆಯನ್ನು ವಿವರಿಸಲಾಗಿದೆ.
ಧನುಶ್ ಎಂಬುವರು ಬಿಗ್ ಬಜಾರ್ ಸ್ಟಾಪ್ ಬಳಿ ಕಾರಿನಲ್ಲಿ ಹೋಗುತ್ತಿದ್ದರು. ಹೆಚ್ಚಿನ ಟ್ರಾಫಿಕ್ ನಡುವೆಯೇ ಧನುಶ್ ಅವರು ಎದುರಿಗಿದ್ದ ಕಾರನ್ನು ಓವರ್ ಟೆಕ್ ಮಾಡಲು ಮುಂದಾಗಿದ್ದಾರೆ. ಆದರೆ, ಕಾರು ಚಾಲಕ ಇವರಿಗೆ ದಾರಿ ಬಿಡಲಿಲ್ಲ. ಕೊನೆಗೆ ಧನುಶ್ ಕಾರನ್ನು ಅನ್ನು ಓವರ್ ಟೆಕ್ ಮಾಡಿ ಮುಂದೆ ಹೋಗಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಧನುಶ್ ಅವರನ್ನೇ ಹಿಂಬಾಲಿಸಿಕೊಂಡು ಬಂದ ಕಾರು ಚಾಲಕ ಓವರ್ ಟೆಕ್ ಮಾಡಿ ಧನುಶ್ ಅವರನ್ನು ಅಡ್ಡ ಹಾಕಿದ್ದಾನೆ.
ಕಾರಿನಿಂದ ಇಳಿದು ಧನುಶ್ ಅವರ ಬಳಿಗೆ ಬಂದು, ನಿನ್ನ ಕಾರು ನನ್ನ ಕಾರಿಗೆ ಟಚ್ ಆಗಿದೆ ಎಂದು ಜಗಳ ತೆಗೆದಿದ್ದಾನೆ. ಆಗ ಧನುಶ್ ಪೊಲೀಸ್ ಠಾಣೆಗೆ ಹೋಗೋಣ ನಡಿ ಎಂದಿದ್ದಾರೆ. ಧನುಶ್ ಅವರ ಮಾತು ಆಲಿಸದ ಕಾರು ಚಾಲಕ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೇ ಕಾರಿನಿಂದ ಇಳಿಯುವಂತೆ ಒತ್ತಾಯಿಸಿದ್ದಾನೆ. ಬಳಿಕ ಧನುಶ್ ಅವರ ಕಾರಿನ ಕಿಟಕಿಯ ಮೂಲಕ ಒಳಗೆ ಕೈ ಹಾಕಿ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾನೆ. ಆಗ ಧನುಶ್ ಪೆಪ್ಪರ್ ಸ್ಪ್ರೇನಿಂದ ಕಾರು ಚಾಲಕನಿಗೆ ಸ್ಪ್ರೇ ಮಾಡಿದ್ದಾರೆ. ಬಳಿಕ, ಕಾರು ಚಾಲಕ ತನ್ನ ಕಾರಿನಲ್ಲಿದ್ದ ಸ್ಕ್ರೂ ಡೈವ್ ತಂದು ಕಿಟಕಿಯ ಗ್ಲಾಸ್, ಕಾರಿನ ಬಾನೆಟ್, ಮಿರರ್ ಡ್ಯಾಮೇಜ್ ಮಾಡಿದ್ದಾನೆ. ಘಟನೆಯ ಎಲ್ಲ ದೃಶ್ಯಗಳು ಧನುಶ್ ಅವರ ಕಾರಿನಲ್ಲಿರುವ ಡ್ಯಾಶ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರಕರಣ ಸಂಬಂಧ ನಗರ ಪೊಲೀಸರು ಪ್ರತಿಕ್ರಿಯಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net