

ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ರಾಜಮೌಳಿ ಸಿನಿಮಾ ಮಾಡುತ್ತಾರಾ? ಇತ್ತೀಚೆಗಷ್ಟೆ ‘ಆರ್ಆರ್ಆರ್’ ನಿರ್ದೇಶಕ ನೀಡಿದ್ದ ಹೇಳಿಕೆ ಹೀಗೊಂದು ಪ್ರಶ್ನೆಗೆ ಕಾರಣವಾಗಿದೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಅವರೇ ಮಗನ ಎಲ್ಲ ಸಿನಿಮಾಗಳಿಗೂ ಕಥೆ, ಚಿತ್ರಕಥೆ ಬರೆಯುವುದು ಗೊತ್ತೇ ಇದೆ. ಇದೀಗ ವಿಜಯೇಂದ್ರ ಪ್ರಸಾದ್, ಆರ್ಎಸ್ಎಸ್ ಬಗ್ಗೆ ಕಥೆ ಮಾಡಿಕೊಂಡಿದ್ದು, ಅದರ ಬಗ್ಗೆ ರಾಜಮೌಳಿ ಮಾತನಾಡಿದ್ದಾರೆ.
‘ಆರ್ಎಸ್ಎಸ್ ಬಗ್ಗೆ ಗೊತ್ತು. ಆದರೆ, ಅದು ಹೇಗೆ ಪ್ರಾರಂಭವಾಯಿತು? ಸಂಘದ ನಂಬಿಕೆಗಳೇನು ಎಂಬುದರ ಬಗ್ಗೆ ಹೆಚ್ಚು ಮಾಹಿತಿ ಇರಲಿಲ್ಲ. ಅಪ್ಪ, ಆರ್ಎಸ್ಎಸ್ ಬಗ್ಗೆ ಭಾವನಾತ್ಮಕ ಕಥೆ ಮಾಡಿಕೊಂಡಿದ್ದಾರೆ. ಆ ಕಥೆಯನ್ನು ಓದುವಾಗ ನಾನೂ ಹಲವು ಬಾರಿ ಕಣ್ಣೀರಾಗಿದ್ದೇನೆ. ಕಥೆಯಲ್ಲಿನ ಭಾವನಾತ್ಮಕ ಸನ್ನಿವೇಶಗಳ ಅಷ್ಟು ಚೆನ್ನಾಗಿವೆ. ಆರ್ಎಸ್ಎಸ್ ಕುರಿತ ಚಿತ್ರವನ್ನು ನಾನು ನಿರ್ದೇಶಿಸುತ್ತೀನಾ ಎಂಬುದನ್ನು ಈಗಲೇ ಹೇಳಲಾಗುವುದಿಲ್ಲ.
ಏಕೆಂದರೆ, ಅಪ್ಪ ಆ ಕಥೆಯನ್ನು ಬೇರೆ ನಿರ್ದೇಶಕರಿಗೆ, ನಿರ್ವಪಕರಿಗೆ, ತಂಡಕ್ಕೆ ಮಾಡಿದ್ದಾರಾ ಗೊತ್ತಿಲ್ಲ. ನನ್ನ ಬಳಿ ಅದಕ್ಕೆ ಸರಿಯಾದ ಉತ್ತರವಿಲ್ಲ. ಆದರೆ, ಆ ಸಿನಿಮಾ ನಿರ್ದೇಶಿಸಲು ಅವಕಾಶ ಸಿಕ್ಕರೆ ನನಗದು ಗೌರವದ ವಿಷಯ. ಅ ಕಥೆ ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಾ, ಸಕಾರಾತ್ಮಕ ಪರಿಣಾಮ ಬೀರುತ್ತಾ ಗೊತ್ತಿಲ್ಲ. ಇದೇ ಮೊದಲ ಬಾರಿಗೆ ಒಂದು ಕಥೆಯ ಬಗ್ಗೆ ನನಗೆ ಆ ಸ್ಪಷ್ಟತೆ ದೊರೆತಿಲ್ಲ’ ಎಂದು ಹೇಳಿಕೊಂಡಿದ್ದಾರೆ ನಿರ್ದೇಶಕ ರಾಜಮೌಳಿ. -ಏಜೆನ್ಸೀಸ್