ಡಿಜೆ ಹಳ್ಳಿ ಗಲಭೆಗೆ ಕಾರಣವೇನು? ಪೊಲೀಸ್​ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ?

DJ Halli
Published on

ಬೆಂಗಳೂರ: ಡಿಜೆ ಹಳ್ಳಿ ಗಲಭೆ ಪ್ರಕರಣದ ಹಿಂದೆ ರಾಜಕೀಯ ದುರುದ್ದೇಶದ ಹೊಗೆಯಾಡುತ್ತಿದ್ದು, ಪಾಲಿಕೆ ಚುನಾವಣೆ ತಯಾರಿ ಹಿನ್ನೆಲೆಯಲ್ಲಿ ಗಲಭೆ ಸೃಷ್ಟಿಸಿದ್ರಾ ಎಂಬ ಶಂಕೆ ವ್ಯಕ್ತವಾಗುತ್ತಿದೆ.

ಅಖಂಡ ಶ್ರೀನಿವಾಸ್ ಅಳಿಯ ಆರೋಪಿ ನವೀನ್ ಪಾಲಿಕೆ ಚುನಾವಣೆ ತಯಾರಿ ನಡೆಸುತ್ತಿದ್ದರೂ ಎನ್ನಲಾಗಿದೆ. ಕಾವಲುಭೈರಸಂದ್ರ ವಾರ್ಡ್​ನಿಂದ ಸ್ಪರ್ಧಿಸಲು ಯೋಜನೆ ರೂಪಿಸಿದ್ದರು ಎನ್ನಲಾಗಿದೆ. ಹೀಗಾಗಿ ಮತಕ್ಕಾಗಿ ಒಂದು ಕೋಮಿನ ಓಲೈಕೆ ಮಾಡಲು ನವೀನ್​ ಅವಹೇಳನಕಾರಿ ಫೇಸ್​ಬುಕ್ ಪೋಸ್ಟ್ ಮಾಡಿದ್ದಾನೆ ಎನ್ನಲಾಗಿದೆ.

ಇನ್ನೊಂದೆಡೆ ಕಾರ್ಪೋರೇಟರ್ ಸ್ಥಾನಕ್ಕೆ ಸ್ಪರ್ಧಿಸಲು ತಯಾರಿಸಿ ನಡೆಸಿರುವ ಮುಜಾಮುಲಿಮ್​ ಪಾಷ ನವೀನ್​ನನ್ನು ಸರ್ವನಾಶ ಮಾಡಲು ಗಲಾಟೆಹೆ ಕುಮ್ಮಕ್ಕೂ ನೀಡಿದ್ದಾನೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ಗಲಭೆ ಸೃಷ್ಟಿಸಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಈಗಾಗಲೇ ಆರೋಪಿ ನವೀನ್​ ಹಾಗೂ ಮುಜಾಮಿಲ್​ ಪಾಷಾರನ್ನು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ 100ಕ್ಕೂ ಅಧಿಕ ಮಂದಿಯನ್ನು ಗಲಾಟೆಗೆ ಕರೆತಂದಿದ್ದ ಇನ್ನೊಬ್ಬ ಆರೋಪಿ ಅಯಾಜ್​ನನ್ನು ಬಂಧಿಸಲಾಗಿದೆ. ಗಲಭೆ ವೇಳೆ 100 ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಲಭೆ ನಿಯಂತ್ರಿಸಲು ನಡೆದ ಗೋಲಿಬಾರ್​ನಲ್ಲಿ ಇಬ್ಬರು ಮೂವರು ಸಾವಿಗೀಡಾಗಿದ್ದು, 80 ಕ್ಕೂ ಹೆಚ್ಚು ಪೊಲೀಸರಿಗೆ ಗಾಯಗಳಾಗಿವೆ. ಸಾಕಷ್ಟು ವಾಹನಗಳು ಜಖಂಗೊಂಡಿದ್ದು, ಗಲಭೆಯಲ್ಲಿ ಬೆಂಕಿಯನ್ನು ಇಡಲಾಗಿದೆ. ಸಾರ್ವಜನಿಕರು ಸಹ ತೊಂದರೆಯನ್ನು ಅನುಭವಿಸಿದ್ದಾರೆ.

ಘಟನೆ ಹಿನ್ನೆಲೆ ಏನು?

ಶಾಸಕ ಅಖಂಡ ಶ್ರೀನಿವಾಸ್​ ಅಳಿಯ ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಂ ಧರ್ಮದ ಸ್ಥಾಪಕರಾದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿರುವ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಗಲಭೆ ನಡೆದಿದೆ. ಇದೀಗ ಪ್ರಕರಣಕ್ಕೆ ರಾಜಕೀಯ ದುರುದ್ದೇಶ ತಳುಕು ಹಾಕಿಕೊಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net