ಸೈದ್ಧಾಂತಿಕ ನಿಲುವು ಪ್ರದರ್ಶನದಿಂದ ಯಾವ ಉಪಯೋಗವೂ ಇಲ್ಲ

akshara
ಕರ್ನಾಟಕ ಸಂಘದಿಂದ ಕೆ.ವಿ.ಅಕ್ಷರ ಅವರಿಗೆ ನವಿಲುಗರಿ ಪುರಸ್ಕಾರ ಪ್ರದಾನ ಮಾಡಲಾಯಿತು. ಪ್ರೊ. ಬಿ.ಎಂ.ಕುಮಾರಸ್ವಾಮಿ, ಪ್ರೊ. ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ, ವಿನಯ್, ಕರ್ನಾಟಕ ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರು, ನಿಕಟಪೂರ್ವ ಅಧ್ಯಕ್ಷರು ಇದ್ದರು.
Published on

ಶಿವಮೊಗ್ಗ: ಎಡವೂ ಅಲ್ಲದ, ಬಲವೂ ಅಲ್ಲದ ಹಾಗೂ ಎರಡರೊಡನೆಯೂ ಸಂಘರ್ಷ ಇರಿಸಿಕೊಳ್ಳದ ನನಗೆ ಎರಡೂ ಪಂಥದಲ್ಲಿ ಗೆಳೆಯರಿದ್ದಾರೆ. ಬುದುಕಿನಲ್ಲಿ ಸೈದ್ಧಾಂತಿಕ ನಿಲುವು ಪ್ರದರ್ಶನ ಮಾಡುವುದರಲ್ಲಿ ಯಾವುದೇ ಉಪಯೋಗವಿಲ್ಲ ಎಂದು ಹೆಗ್ಗೋಡು ನೀನಾಸಂ ನಿರ್ದೇಶಕ, ರಂಗಕರ್ಮಿ ಕೆ.ವಿ.ಅಕ್ಷರ ತಿಳಿಸಿದರು.

ಕರ್ನಾಟಕ ಸಂಘದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನವಿಲುಗರಿ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಜನರು ಆರೋಗ್ಯ ಸಮಸ್ಯೆಯಾದಾಗ ಆಯುರ್ವೇದವನ್ನು, ಕೆಲವೊಮ್ಮೆ ಅಲೋಪಥಿಯನ್ನೂ ಪಡೆಯುತ್ತಾರೆ. ಹೀಗಾಗಿ ಸೈದ್ಧಾಂತಿಕ ನಿಲುವಿನ ಪ್ರದರ್ಶನದ ಬದಲು ಆ ಕ್ಷಣದ ಅಗತ್ಯಕ್ಕೆ ತಕ್ಕಂತೆ ತೀರ್ಮಾನಿಸಬೇಕು ಎಂದರು.

ನಮ್ಮ ತಂದೆಯ ಕಾರಣದಿಂದ ಚಿಕ್ಕ ವಯಸ್ಸಿನಲ್ಲೇ ಅನೇಕ ಹಿರಿಯ ಸಾಹಿತಿಗಳ ಒಡನಾಟ ಸಿಕ್ಕಿತ್ತು. ತುಂಬಾ ಆಸಕ್ತಿಯಿಂದ ಶಂಕರಾಚಾರ್ಯರ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದೆ. ಈ ಕಾಲದ ಅನೇಕ ತತ್ವಜ್ಞಾನಿಗಳು ಶಂಕರರಿಂದಲೇ ಸ್ಫೂರ್ತಿ ಪಡೆದಿದ್ದಾರೆ. ತತ್ವಜ್ಞಾನದಲ್ಲಿ ನನಗೆ ಆಸಕ್ತಿ ಮೂಡಲು ಶಂಕರಾಚಾರ್ಯರೇ ಕಾರಣ ಎಂದು ಹೇಳಿದರು.

ರಂಗಭೂಮಿ ಮಾಧ್ಯಮ ಸಮಾಜದ ಕಟ್ಟುಪಾಡುಗಳನ್ನು ಒಡೆದು ಹೊರಬರುವ, ದ್ವಂದ್ವಗಳನ್ನು ಮುರಿದು ಹೊಸತನ್ನು ಕಟ್ಟುವ ಪ್ರಕ್ರಿಯೆ. ನಾಟಕ ಕಟ್ಟುವುದು ಹಾಗೂ ಒಂದು ಊರನ್ನು ಕಟ್ಟುವುದು ಎರಡೂ ಒಂದೇ. ನಾಟಕ ಎಂಬುದು ಯೋಗಿಗಳ ಕೆಲಸದಂತೆ ಎಂದು ಅಭಿಪ್ರಾಯಪಟ್ಟರು.

ನಾಟಕದಿಂದ ಪ್ರಪಂಚ ಬದಲಿಸಲು ಸಾಧ್ಯವಾಗದಿರಬಹುದು. ಆದರೆ ನಾವು ಪ್ರಪಂಚವನ್ನು ಅರ್ಥ ಮಾಡಿಕೊಳ್ಳಲು, ವಿವಿಧ ಸಂಬಂಧಗಳನ್ನು ಅರಿಯಲು, ನಮ್ಮನ್ನು ನಾವು ಬದಲಾಯಿಸಿಕೊಳ್ಳಲು ಸಾಧ್ಯ. ಮೊದಲು ನಾವು ಏನು ಮಾಡಬಲ್ಲೆವು? ಏನು ಮಾಡುವುದರಿಂದ ನಮಗೆ ಖುಷಿ ಸಿಗಲಿದೆ? ಎಂಬುದನ್ನು ಅರಿತುಕೊಳ್ಳಬೇಕು. ಬಳಿಕ ಪ್ರಪಂಚ ಬದಲಾಯಿಸುವ ಯೋಚನೆ ಮಾಡಬೇಕು ಎಂದರು.

ಇಂದು ರಂಗಭೂಮಿ, ಸಾಹಿತ್ಯದ ಮುಂದಿನ ಸ್ಥಿತಿ ಬಗ್ಗೆ ಆತಂಕ ಮೂಡುತ್ತದೆ. ಇಂದು ಮೂರು ಸಮಸ್ಯೆಗಳು ಸಂಸ್ಕೃತಿಯ ವಲಯದಲ್ಲಿವೆ. ಮೊದಲನೆಯದಾಗಿ ಸಂಪರ್ಕದ ಸೇತುವೆಗಳು ನಾಶವಾಗುತ್ತಿವೆ. ಹೀಗಾಗಿ ಹೊಸ ಸೇತುವೆಗಳ ನಿರ್ಮಾಣವಾಗಬೇಕು. ಸಾಹಿತಿಗಳು ಹಾಗೂ ಓದುಗನ ನಡುವೆ ಸಂಪರ್ಕ ಸೇತು ಕಡಿದುಹೋಗುತ್ತಿದೆ ಎಂದು ತಿಳಿಸಿದರು.

ಕರ್ನಾಟಕ ಸಂಘದ ಅಧ್ಯಕ್ಷ ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯ ಪ್ರೊ. ಬಿ.ಎಂ.ಕುಮಾರಸ್ವಾಮಿ ಅಭಿನಂದನಾ ಭಾಷಣ ಮಾಡಿದರು. ಕಾರ್ಯದರ್ಶಿ ವಿನಯ್ ಉಪಸ್ಥಿತರಿದ್ದರು. ಅಜೇಯ್ ನೀನಾಸಂ ನೇತೃತ್ವದ ಎಎಸ್‌ಕೆ ಚೆಲುವರಂಗ ತಂಡದವರು ರಂಗಗೀತೆ ಪ್ರಸ್ತುತಪಡಿಸಿದರು. ಕೆ.ವಿ.ಅಕ್ಷರ ಅವರೊಂದಿಗೆ ಶ್ರೋತೃಗಳು ಸಂವಾದ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net