

ಬೆಂಗಳೂರು: ರಾಜ್ಯದಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜ ಕೊರತೆ ಇಲ್ಲ. ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಕೃಷಿ ಸಚಿವ ಎಚ್. ಚಲುವರಾಯಸ್ವಾಮಿ ಭರವಸೆ ನೀಡಿದ್ದಾರೆ.
ಏಪ್ರಿಲ್‌ನಿಂದ ಜುಲೈ 21ರ ವರೆಗೆ 6.80 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಬೇಡಿಕೆ ಇದ್ದು, 8.50 ಲಕ್ಷ ಮೆ.ಟನ್ ಸರಬರಾಜಾಗಿದೆ. ಈ ಪೈಕಿ 6.55 ಲಕ್ಷ ಮೆ.ಟನ್ ಮಾರಾಟವಾಗಿದ್ದು, 1.94 ಲಕ್ಷ ಮೆ. ಟನ್ ಗೋದಾಮಿನಲ್ಲಿ ದಾಸ್ತಾನಿದೆ ಎಂದು ಮಾಹಿತಿ ನೀಡಿದ್ದಾರೆ.
ಏಪ್ರಿಲ್‌ನಿಂದ ಜುಲೈ 21ರ ವರೆಗೆ 3.02 ಲಕ್ಷ ಮೆ.ಟನ್ ಡಿಎಪಿ ರಸಗೊಬ್ಬರಕ್ಕೆ ಬೇಡಿಕೆ ಇತ್ತು. 2.89 ಲಕ್ಷ ಮೆ.ಟನ್ ರಸಗೊಬ್ಬರ ಪೂರೈಕೆಯಾಗಿದ್ದು, ಈ ಪೈಕಿ 2.07 ಮೆ. ಟನ್ ಮಾರಾಟವಾಗಿದೆ. ಇನ್ನೂ 81 ಮೆ.ಟನ್ ಡಿಎಪಿ ಉಳಿದಿದ್ದು, ರೈತರು ಸಮೀಪದ ಅಂಗಡಿಗಳಲ್ಲಿ ಖರೀದಿಸಬಹುದು ಎಂದು ತಿಳಿಸಿದ್ದಾರೆ.
6.47 ಲಕ್ಷ ಮೆ. ಟನ್ ಕಾಂಪ್ಲೆಕ್ಸ್ ರಸಗೊಬ್ಬರ ಬೇಡಿಕೆ ಇದ್ದು, 12 ಲಕ್ಷ ಮೆ.ಟನ್ ಸರಬರಾಜಾಗಿದೆ. ಈ ಪೈಕಿ 7.39 ಲಕ್ಷ ಮೆ.ಟನ್ ಮಾರಾಟವಾಗಿದ್ದು, 4.62 ಲಕ್ಷ ಮೆ.ಟನ್ ಉಳಿದಿದೆ. ಆದರಿಂದ ರಾಜ್ಯದಲ್ಲಿ ರಸಗೊಬ್ಬರವಾಗಲಿ ಅಥವಾ ಬಿತ್ತನೆ ಬೀಜವಾಗಲಿ ಕೊರತೆ ಇಲ್ಲ ಎಂದಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1,799 ಮೆ.ಟನ್, ಚಿಕ್ಕಬಳ್ಳಾಪುರದಲ್ಲಿ 2979 ಮೆ.ಟನ್. ರಾಮನಗರದಲ್ಲಿ 3128 ಮೆ.ಟನ್, ಮಂಡ್ಯದಲ್ಲಿ 7065 ಮೆ.ಟನ್, ದಾವಣಗೆರೆಯಲ್ಲಿ 7389 ಮೆ.ಟನ್ ಸೇರಿ ಎಲ್ಲ ಜಿಲ್ಲೆಯಲ್ಲಿ ಯೂರಿಯಾ ದಾಸ್ತಾನು ಮಾಡಲಾಗಿದೆ. ಬೆಳಗಾವಿಯಲ್ಲಿ 10,622 ಮೆ.ಟನ್, ಬೀದರ್‌ನಲ್ಲಿ 2,444 ಮೆ.ಟನ್, ಚಿಕ್ಕಬಳ್ಳಾಪುರದಲ್ಲಿ 1,937 ಮೆ.ಟನ್, ತುಮಕೂರಿನಲ್ಲಿ 1,710 ಮೆ.ಟನ್, ಮಂಡ್ಯದಲ್ಲಿ 1,701 ಮೆ.ಟನ್ ಸೇರಿ ವಿವಿಧ ಜಿಲ್ಲೆಯಲ್ಲಿ ಡಿಎಪಿ ದಾಸ್ತಾನು ಇರುವುದಾಗಿ ಮಾಹಿತಿ ನೀಡಿದ್ದಾರೆ.