ಗ್ರಾಮೀಣ ಪತ್ರಕರ್ತರಿಗಿಲ್ಲ ಸೇವಾ ಭದ್ರತೆ

HUN-MAR-6-2(INSURENCE BOND DISTRIBUTION)
ಹುಣಸೂರು ತಾಲೂಕು ಪತ್ರಕರ್ತರ ಸಂಘದ ಸದಸ್ಯರಿಗೆ ವಿಮಾ ಬಾಂಡ್‌ಗಳನ್ನು ಶಾಸಕ ಜಿ.ಡಿ.ಹರೀಶ್‌ಗೌಡ ವಿತರಿಸಿದರು. ಅಧ್ಯಕ್ಷ ಎಚ್.ಆರ್.ಕೃಷ್ಣಕುಮಾರ್, ಪ್ರಧಾನ ಕಾರ್ಯದರ್ಶಿ ನೇರಳಕುಪ್ಪೆ ಮಹದೇವ್, ಯೋಗೀಶ್, ಶಂಕರ್, ಯೋಗಾನಂದ್ ಇತರರಿದ್ದರು.
Published on

ಹುಣಸೂರು : ತಾಲೂಕು ಪತ್ರಕರ್ತರ ಸಂಘದ 35 ಸದಸ್ಯರಿಗೆ ಶಾಸಕ ಜಿ.ಡಿ.ಹರೀಶ್‌ಗೌಡ ತಮ್ಮ ವೈಯಕ್ತಿಕ ಆರ್ಥಿಕ ನೆರವಿನೊಂದಿಗೆ ತಲಾ 22 ಲಕ್ಷ ರೂ.ಗಳ ವಿಮಾ ಬಾಂಡ್‌ಗಳನ್ನು ವಿತರಿಸಿದರು.

ನಗರದ ಪತ್ರಕರ್ತರ ಸಂಘದ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ವಿಮಾಬಾಂಡ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಪತ್ರಕರ್ತರ ಸರ್ವಾಂಗೀಣ ಅಭಿವೃದ್ಧಿಗೆ ಇತ್ತೀಚಿನ ವರ್ಷಗಳಲ್ಲಿ ಸರ್ಕಾರಗಳು ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿವೆ. ಆದರೆ ಗ್ರಾಮೀಣ ಭಾಗದ ಪತ್ರಕರ್ತರಿಗೆ ಅವಶ್ಯ ಮೂಲಸೌಕರ್ಯಗಳು, ಸೇವಾ ಭದ್ರತೆ ಯಾವುದೂ ಸಿಗುತ್ತಿಲ್ಲ. ಇಂತಹ ಕಷ್ಟಕರ ಪರಿಸ್ಥಿತಿಯಲ್ಲೂ ಪತ್ರಕರ್ತರ ಸಮಾಜದ ಅಂಕುಡೊಂಕುಗಳನ್ನು, ಆಳುವವರ ಸರಿ ತಪ್ಪುಗಳನ್ನು ಎತ್ತಿಹಿಡಿದು ಎಚ್ಚರಿಸುವ ಕಾರ್ಯ ನಡೆಸುತ್ತಿದ್ದಾರೆ. ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಸಹಯೋಗದಲ್ಲಿ ತಾಲೂಕಿನ ಪ್ರತಿಯೊಬ್ಬ ಪತ್ರಕರ್ತರಿಗೂ ತಲಾ 22 ಲಕ್ಷ ರೂ.ಗಳ ವಿಮಾಬಾಂಡ್‌ಗಳನ್ನು ವಿತರಿಸಿದ್ದೇನೆ. ನಾನು ಶಾಸಕನಾಗಿ ಅಧಿಕಾರದಲ್ಲಿ ಇರುವವರೆಗೂ ಈ ವಿಮೆಯ ಪ್ರೀಮಿಯಂ ಅನ್ನು ನಾನೇ ಭರಿಸಲಿದ್ದೇನೆ. ಆ ಮೂಲಕ ನನ್ನೂರಿನ ಪತ್ರಕರ್ತರಿಗೆ ಕರ್ತವ್ಯ ನಿರ್ವಹಿಸುವ ವೇಳೆ ನೈತಿಕ ಧೈರ್ಯ ತುಂಬಲು ಹೆಜ್ಜೆ ಇಟ್ಟಿದ್ದೇನೆ. ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಸಹಕಾರ ಸಂಘ ಸ್ಥಾಪನೆಗೆ ಹೆಜ್ಜೆ ಇಟ್ಟಿದ್ದು, ಈಗಾಗಲೇ ನಾನು 5 ಲಕ್ಷ ರೂ.ಗಳ ಠೇವಣಿ ನೀಡಿದ್ದು, ಮುಂದಿನ ದಿನಗಳಲ್ಲೂ ನಿಮ್ಮ ಜತೆ ಬೆಂಬಲವಾಗಿ ನಿಲ್ಲುತ್ತೇನೆ. ಸಂಘದ ಸ್ವಂತ ನಿವೇಶನ ಮತ್ತು ಕಟ್ಟಡಕ್ಕಾಗಿ ಸಿಎ ಸೈಟ್ ಗುರುತಿಸಿ ನೀಡುವ ಬಗ್ಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಎಚ್.ಆರ್.ಕೃಷ್ಣಕುಮಾರ್, ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷ ಧರ್ಮಾಪುರ ನಾರಾಯಣ್, ನಿರ್ದೇಶಕ ದಾ.ರಾ.ಮಹೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ನೇರಳಕುಪ್ಪೆ ಮಹದೇವ್, ಖಜಾಂಚಿ ಯೋಗೀಶ್ ಸೇರಿದಂತೆ ಸಂಘದ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net