ತಾಯಿ ಗೌರವಿಸದವರಿಗೆ ಮುಕ್ತಿಯೇ ಇಲ್ಲ

centrol jail programme
Published on

ಶಿವಮೊಗ್ಗ: ತಾಯಿಯನ್ನು ಯಾವಾಗಲೂ ಗೌರವಾದರಗಳಿಂದ ಕಾಣಬೇಕು. ಆಕೆಯನ್ನು ಗೌರವಿಸದ ವ್ಯಕ್ತಿಗೆ ಮುಕ್ತಿ ಎಂಬುದೇ ಇಲ್ಲ ಎಂದು ಶಿವಮೊಗ್ಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಹೇಳಿದರು.

ಕೇಂದ್ರ ಕಾರಾಗೃಹದ ಗ್ರಂಥಾಲಯ ವಿಭಾಗದಲ್ಲಿ ವಿಶ್ವ ತಾಯಂದಿರ ದಿನಾಚರಣೆ ಹಾಗೂ ಬಂದಿನಿವಾಸಿಗಳ ಪರಿವರ್ತನಾ ಆರಂಭ ಸರಣಿ-2 ಅಂಗವಾಗಿ ಜನ್ಮದಾತೆಯ ಸವಿನೆನಪು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂತೋಷ ಅಥವಾ ದುಃಖವು ನಮ್ಮ ನಮ್ಮ ಕೃತ್ಯಗಳಿಂದಲೇ ಉಂಟಾಗುತ್ತದೆ. ಆದರೆ ಅದರ ಪರಿಣಾಮವನ್ನು ಎಲ್ಲರಿಗಿಂತಲೂ ಮೊದಲು ಎದುರಿಸುವವಳೇ ತಾಯಿ. ನಮ್ಮ ಹಗೆತನ, ದ್ವೇಷ, ಕೋಪತಾಪಗಳಿಂದ ನಾವು ನಮ್ಮ ಹಾಗೂ ಬೇರೆಯವರ ತಾಯಂದಿರಿಗೆ ದ್ರೋಹ ಮಾಡಿದಂತಾಗುತ್ತದೆ ಎಂದರು.

ಶಿವಮೊಗ್ಗದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಪ್ರಾಚಾರ್ಯೆ ಡಾ. ಸಂಧ್ಯಾ ಕಾವೇರಿ ಮಾತನಾಡಿ, ಬದಲಾವಣೆ ಅಥವಾ ಪರಿವರ್ತನೆ ಆಗಬೇಕಾಗಿರುವುದು ನಮ್ಮ ಮನಸ್ಸು ಮತ್ತು ವ್ಯಕ್ತಿತ್ವದಲ್ಲಿ. ಅದನ್ನು ಸಾಧಿಸಬೇಕಾದರೆ ನಾವು ಧನಾತ್ಮಕ ಭಾವನೆ ಹಾಗೂ ಚಿಂತನೆಗಳನ್ನು ಹೊಂದಿರಬೇಕಾಗುತ್ತದೆ ಎಂದರು.

ಮಾನಸಿಕ ಸುಸ್ಥಿತಿಯನ್ನು ಕಾಪಾಡಿಕೊಳ್ಳಲು ಧನಾತ್ಮಕ ಮನೋಭಾವವು ನೆರವಾಗುತ್ತದೆ. ಪ್ರತಿಯೊಬ್ಬ ಸ್ತ್ರೀ ಮತ್ತು ಪುರುಷರಲ್ಲಿ ಮಾತೃತ್ವ ಭಾವನೆ ಸಹಜವಾಗಿಯೇ ಹಾಸುಹೊಕ್ಕಾಗಿರುತ್ತದೆ. ಮಾತೃತ್ವದಿಂದ ನಮ್ಮಲ್ಲಿ ಮೃದುಭಾವ ಹಾಗೂ ಪ್ರೀತಿ ಭಾವನೆಯನ್ನು ಗಟ್ಟಿಗೊಳಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ಪಿ.ರಂಗನಾಥ, ಪ್ರತಿಯೊಬ್ಬರೂ ತಮ್ಮ ಮನಸ್ಸಿನಲ್ಲಿ ದ್ವೇಷ, ಕ್ರೌರ್ಯ ಭಾವನೆಗಳನ್ನು ತುಂಬಿಕೊಂಡಿದ್ದರೆ ಸಮಾಜದಲ್ಲಿ ತಪ್ಪುಗಳು ಹೆಚ್ಚುತ್ತಲೇ ಹೋಗುತ್ತವೆ. ನಮ್ಮ ಹೃದಯದಲ್ಲಿ ಸದಾ ಪ್ರೀತಿ, ಕರುಣೆ, ಸ್ನೇಹ, ಮಾತೃಭಾವನೆ ತುಂಬಿಕೊಂಡಿದ್ದಲ್ಲಿ ತಪ್ಪುಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು ಎಂದು ಹೇಳಿದರು.

ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಹಸೀನಾ ಖಾದ್ರಿ, ಭಾರತೀಯ ಕಾರಾಗೃಹ ಸೇವಾ ಆಯೋಗದ ಶಿವಮೊಗ್ಗ ಧರ್ಮಕ್ಷೇತ್ರದ ಸಮನ್ವಯಾಧಿಕಾರಿ ಸಿಸ್ಟರ್ ಹೆಲನ್ ಮಾತನಾಡಿದರು.

ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕ. ಆರ್.ಪ್ರೀತಿ, ಜೈಲರ್‌ಗಳಾದ ಶ್ರೀಶೈಲ ಎಸ್. ಕಟ್ಟಿಮನಿ, ಸುಷ್ಮಾ ಬಿ. ವಡಗೇರ, ಶರಣಬಸವ ಹಾಗೂ ಅಧಿಕಾರಿ-ಸಿಬ್ಬಂದಿ ಉಪಸ್ಥಿತರಿದ್ದರು.

ಬಂಧಿನಿವಾಸಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ

ತಾಯಂದಿರ ದಿನಾಚರಣೆಯ ಅಂಗವಾಗಿ ಸಂಸ್ಥೆಯ ಬಂಧಿನಿವಾಸಿಗಳಿಂದ ತಾಯಿಯ ಪ್ರೀತಿ-ಮಮತೆ, ತ್ಯಾಗದ ಕುರಿತು ವಿಶೇಷ ಗೀತರೂಪಕ, ಗೀತಗಾಯನ, ಕುಂಚ-ಚಿತ್ರಣ, ನೃತ್ಯ ಮೊದಲಾದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಶಿಕ್ಷಕಿ ಎಸ್.ಎನ್.ಲೀಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಂಧಿನಿವಾಸಿ ಮರಿಸ್ವಾಮಿ ಅನಿಸಿಕೆ ಹಂಚಿಕೊಂಡರು. ಸಂಸ್ಥೆಯ ಶಿಕ್ಷಕ ಗೋಪಾಲಕೃಷ್ಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net