

ಶಿವಮೊಗ್ಗ: ಅನ್ನದಾತರು ಯಾರೊಬ್ಬರ ಮನೆಯ ಜೀತದಾಳುಗಳಲ್ಲ, ಈ ದೇಶದ ಮಾಲೀಕರು. ರೈತ ಸಂಘದಲ್ಲಿ ಯಾವುದೇ ಜಾತಿ ಸಂಘರ್ಷಕ್ಕೆ ಅವಕಾಶವಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಶಾಖೆಯಿಂದ ಆಯೋಜಿಸಿದ್ದ ರೈತ ಸಂಘದ ಸಂಸ್ಥಾಪಕ ಎನ್.ಡಿ.ಸುಂದರೇಶ್ ಅವರ ನೆನಪಿನ ಸಭೆಯಲ್ಲಿ ಮಾತನಾಡಿದ ಅವರು, ರೈತ ದೇಶದ ಬೆನ್ನೆಲುಬು ಆಗಿದ್ದು ದೇಶಕ್ಕೆ ಅನ್ನ ಕೊಟ್ಟು ಎಲ್ಲರನ್ನೂ ಸಾಕಿ ಸಲುಹಿದ ರೈತರು ಜವಾನನಾಗದೇ ದಿವಾನರಾಗಬೇಕು ಎಂದರು.
ರೈತ ಸಂಘ ಆರಂಭದಿಂದಲೂ ತನ್ನದೆಯಾದ ತತ್ವ, ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಬಂದಿದೆ. ರೈತರೆಂದರೆ ಒಂದೇ ಕುಲ, ಜಾತಿ ಧರ್ಮಕ್ಕೆ ಇಲ್ಲಿ ಮನ್ನಣೆ ಇಲ್ಲ. ಈ ನಿಟ್ಟಿನಲ್ಲಿ ನಾವೆಲ್ಲರೂ ನಡೆದು ಬಂದಿದ್ದೇವೆ. 1980ರಲ್ಲಿ ಆರಂಭಗೊಂಡ ರೈತ ಚಳವಳಿಯು ಇಂದಿನವರೆಗೂ ಮುಂದುವರಿದಿದ್ದು ನಲುಗುಂದದಲ್ಲಿ ಗೋಲಿಬಾರ್ ದಿನದಂದು ಆರಂಭಗೊಂಡ ಕಿಡಿ ಇಂದು ರಾಜ್ಯಾದ್ಯಂತ ಹರಡಿದೆ. ಕರ್ನಾಟಕದ ಮೂಲೆ ಮೂಲೆಗಳಲ್ಲಿ ರೈತರನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಎನ್.ಡಿ.ಸುಂದರೇಶ್ ಅವರ ಪತ್ನಿ ಶೋಭಾ ಸುಂದರೇಶ್ ಮಾತನಾಡಿದರು. ಸಂಘದ ರಾಜ್ಯ ಗೌರವಾಧ್ಯಕ್ಷ ಕುರುವ ಗಣೇಶ್, ಪ್ರಮುಖರಾದ ಹೊನ್ನೂರು ಮುನಿಯಪ್ಪ, ತರೀಕೆರೆ ಮಹೇಶ್, ಹುಟ್ಟೂರು ರಾಜು, ಟಿ.ಎಂ.ಚಂದ್ರಪ್ಪ, ಕೊಟ್ಟೂರು ಭರ್ಮಣ್ಣ, ನಜೀರ್ ಸಾಬ್ ಮೂಲಿಮನಿ, ಅಮೀನ್ ಪಾಷಾ ದಿದ್ಗಿ, ಮಲ್ಲನಗೌಡ ಪಾಟೀಲ್ ರಾಮಪುರ, ಲಿಂಗಸೂರು, ಶಂಕರಮ್ಮ, ರಾಧಮ್ಮ, ವೀರಮ್ಮ, ರಾಘವೇಂದ್ರ ಉಪಸ್ಥಿತರಿದ್ದರು.