

ಬೆಂಗಳೂರು: ನ್ಯಾಯಾಲಯದ ಆದೇಶ ಪಾಲಿಸಿ ನಟ ಕಮಲ್ ಹಾಸನ್ ಕ್ಷಮೆ ಕೇಳುವ ವಿಶ್ವಾಸವಿದೆ. ನಟನ ಬಗ್ಗೆ ಸರ್ಕಾರ ಮೃದು ಧೋರಣೆ ಅನುಸರಿಸುವ ಪ್ರಶ್ನೆಯೇ ಇಲ್ಲವೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ನಿರಾಕರಿಸಿದರು.
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡುವ ಸಂದರ್ಭದಲ್ಲಿ ಡಿಎಂಕೆ ಮಿತ್ರಪಕ್ಷ ಆಗಿರುವ ಕಾರಣ ಕಮಲ್‌ಹಾಸನ್ ವಿಚಾರದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮೃದು ಧೋರಣೆ ತಾಳಿದ್ದಾರೆ ಎಂಬ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕೆಗೆ ಪ್ರತಿಕ್ರಿಯಿಸಿದರು.
ಜಾತಿ, ಭಾಷೆ ಹೆಸರಿನಲ್ಲಿ ರಾಜ್ಯಗಳಿಗೆ ಜಗಳ ಮಾಡಿಸಲು ಆಗುತ್ತದೆಯೆ ?. ಬಿಜೆಪಿಯವರು ಸಮಾಜ ಒಡೆಯುವವರು, ನಾವು ಒಗ್ಗೂಡಿಸಿ ಆಡಳಿತ ಮಾಡುವವರು. ಬಿಜೆಪಿ ಕತ್ತರಿಯಾದರೆ, ಕಾಂಗ್ರೆಸ್ ಸೂಜಿಯಾಗಿದೆ ಎಂದು ತಿರುಗೇಟು ನೀಡಿದರು.
ವಿವಾದದ ಬಗ್ಗೆ ಸಾಹಿತಿಗಳು ಹಾಗೂ ತಜ್ಞರ ಜತೆಗೆ ಚರ್ಚೆ ಮಾಡಿದೆ. ಆಗ ನನಗೆ ತಿಳಿದಿದ್ದು, ನಾವು ದ್ರಾವಿಡ ಭಾಗಕ್ಕೆ ಸೇರಿದವರು. ಇಲ್ಲಿ ಮೇಲು, ಕೀಳು ಎಂಬ ಬೇಧವಿಲ್ಲ. ನಮ್ಮ ಭಾಷೆಗಳು ಒಂದರ ಜತೆ ಮತ್ತೊಂದು ಬೆಸೆದುಕೊಂಡಿವೆ ಎಂದರು.
ನಿತ್ಯ ಅಂದಾಜು ನಮ್ಮ 50 ಸಾವಿರ ಜನರು ಹೊಸೂರಿಗೆ ಹೋಗುತ್ತಾರೆ. ಅಲ್ಲಿರುವವರು ಇಲ್ಲಿ ವಾಸ ಮಾಡುತ್ತಾರೆ. ಏನಾದರೂ ಹೆಚ್ಚುಕಮ್ಮಿಯಾದರೆ ಇದರ ಜವಾಬ್ದಾರಿ ಹೊರುವವರು ಯಾರು ? ಕಮಲ್ ತಪ್ಪು ಮಾತು ಆಡಿದ್ದರೆ ಕ್ಷಮೆ ಕೇಳುತ್ತಾರೆ.
ಆದರೆ ಅದನ್ನೇ ಇಟ್ಟುಕೊಂಡು ವಿಷಯ ಎಲ್ಲೆಲ್ಲಿಗೋ ತೆಗೆದುಕೊಂಡು ಹೋಗಬಾರದು. ಕನ್ನಡಪರ ಸಂಘಟನೆಗಳಿಗೆ ಮನವಿ ಮಾಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಕಮಲ್ ಹಾಸನ್ ಕ್ಷಮೆ ಕೇಳದ ವಿಷಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಖ್ಯಾತ ನಟರಾದ ಕಮಲ್ ಹಾಸನ್ ತಮ್ಮ ತಮಿಳು ಭಾಷೆ ಬಗ್ಗೆ ಅಭಿಮಾನ, ಪ್ರೀತಿ ಹೊಂದಿರಲಿ, ಅದಕ್ಕೆ ಯಾರದೇ ಅಭ್ಯಂತರವಿಲ್ಲ ಎಂದರು.
ಆದರೆ ಕನ್ನಡ ಭಾಷೆಗೆ ಅವಮಾನಿಸಿದ್ದಕ್ಕೆ ಕ್ಷಮೆ ಕೇಳಲೇಬೇಕು. ಮೊಂಡಾಟದಿಂದ ತಮ್ಮ ಗೌರವ, ಘನತೆಗೆ ಚ್ಯುತಿ ತಂದುಕೊಳ್ಳಬಾರದು. ರಾಜ್ಯ ಸರ್ಕಾರ ಈ ವಿಷಯದಲ್ಲಿ ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬ ನಿಲುವಿಗೆ ಅಂಟಿಕೊಂಡಿದೆ ಎಂದು ಬಿ.ವೈ.ವಿಜಯೇಂದ್ರ ಟೀಕಿಸಿದರು.