ಭ್ರಷ್ಟಾಚಾರದಲ್ಲಿ ತೊಡಗುವವರಿಗೆ ಕ್ಷೇತ್ರದಲ್ಲಿ ಜಾಗವಿಲ್ಲ

9blrp1
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಫಲಾನುಭವಿಗಳಿಗೆ ಟ್ರ್ಯಾಕ್ಟರ್‌ಗಳೊಂದಿಗೆ ವಿವಿಧ ಸೌಲಭ್ಯಗಳನ್ನು ಶಾಸಕ ಎಚ್.ಕೆ.ಸುರೇಶ್ ವಿತರಿಸಿದರು. ಬಸವರಾಜು, ಸುರೇಶ್, ಸುವರ್ಣಾ, ಮೋಹನ್, ಧರ್ಮೇಗೌಡ ಇದ್ದರು.
Published on

ಬೇಲೂರು: ಸಹೋದ್ಯೋಗಿಗಳಿಗೆ ಕಿರುಕುಳ ನೀಡುವ ಹಾಗೂ ಸಿಬ್ಬಂದಿಯಿಂದ ಹಣ ವಸೂಲಿ ಮೂಲಕ ಭ್ರಷ್ಟಾಚಾರದಲ್ಲಿ ತೊಡಗುವ ಅಧಿಕಾರಿಗಳಿಗೆ ಬೇಲೂರು ಕ್ಷೇತ್ರದಲ್ಲಿ ಜಾಗವಿಲ್ಲ. ಅವರು ಬೇಕಿದ್ದಲ್ಲಿ ಹೊರ ಹೋಗಬಹುದು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ತಾಲೂಕಿನ ಕೊನ್ನೇರ್ಲು ತೋಟಗಾರಿಕಾ ಸಸ್ಯ ಕ್ಷೇತ್ರ ಅವರಣ ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಮಂಗಳವಾರ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಿ ಮಾತನಾಡಿದ ಅವರು, ಶಾಸಕನಾಗಿ ನಾನು ಆಯ್ಕೆಯಾದ ನಂತರ ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಮೂಲಕ ಜನರ ಸೇವೆ ಮಾಡಲು ಬಂದಿದ್ದೇನೆ. ಉತ್ತಮವಾಗಿ ಕೆಲಸ ಮಾಡುವ ಅಧಿಕಾರಿ ಸಿಬ್ಬಂದಿಗೆ ಬೆಂಬಲಿಸುತ್ತೇನೆ. ಅಲ್ಲದೆ ಭ್ರಷ್ಟಾಚಾರ ಮಾಡಿಯೂ ಉಡಾಫೆಯಿಂದ ವರ್ತಿಸುವ ಅಧಿಕಾರಿಗಳಿಗೆ ಎಂದಿಗೂ ಮಣೆ ಹಾಕುವುದಿಲ್ಲ. ನಾನು ಜನರಿಂದ ಆಯ್ಕೆಯಾಗಿ ಬಂದವನು. ಜನರಿಗಾಗಿ ಕೆಲಸ ಮಾಡುತ್ತೇನೆಯೇ ಹೊರತು, ಅಧಿಕಾರಿಗಳ ಪರ ಕೆಲಸ ಮಾಡುವುದಿಲ್ಲ ಎಂದರು.

ತೋಟಗಾರಿಕೆ, ಕೃಷಿ ಎರಡೂ ಇಲಾಖೆಗಳು ರೈತರಿಗೆ ಹತ್ತಿರವಾದ ಇಲಾಖೆಗಳಾಗಿದ್ದು, ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಫಲಾನುಭವಿಗಳ ಮನೆಯ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಅದರಂತೆ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸತೀಶ್, ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇಂತಹ ಅಧಿಕಾರಿಗಳಿಗೆ ಮೆಚ್ಚುಗೆ ಜತೆಗೆ ಬೆಂಬಲಿಸಲು ನನಗೆ ಯಾವುದೇ ಸಂಕೋಚವಿಲ್ಲ. ಇದೇ ರೀತಿ ಎಲ್ಲ ಇಲಾಖೆ ಅಧಿಕಾರಿಗಳು ಬಡವರ, ರೈತರ, ಸಾರ್ವಜನಿಕರ ಕೆಲಸಗಳನ್ನು ಮಾಡುವ ಮೂಲಕ ಉತ್ತಮ ಹೆಸರು ತರಬೇಕು ಎಂದರು.

ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸತೀಶ್ ಮಾತನಾಡಿ, ಈಗಾಗಲೇ ಶಾಸಕ ಸುರೇಶ್ ಅವರ ಮಾರ್ಗದರ್ಶನ ಮತ್ತು ಸೂಚನೆಯಂತೆ ಬೇಲೂರು ತಾಲೂಕಿನ ರೈತರಿಗೆ ನೀಡುವುದಕ್ಕಾಗಿ 1 ಲಕ್ಷ ಕಾಳು ಮೆಣಸಿನ ಸಸಿಗಳನ್ನು ಬೆಳೆಸಲಾಗಿದೆ. 70 ಸಾವಿರ ಸಸಿಗಳನ್ನು ಜೇಷ್ಠತೆ ಆಧಾರದಲ್ಲಿ ವಿತರಿಸಲಾಗುವುದು. ಇದರೊಂದಿಗೆ ಶಾಸಕರ ಪರಿಶ್ರಮದಿಂದ 20 ಟ್ರ್ಯಾಕ್ಟರ್‌ಗಳು ಬಂದಿದ್ದು ಟ್ರ್ಯಾಕ್ಟರ್‌ಗಳ ಜತೆಯಲ್ಲೇ 250 ರೈತರಿಗೆ ಕಾಳುಮೆಣಸಿನ ಗಿಡಗಳನ್ನು ಹಾಗೂ ದಾಳಿಂಬೆ ಬೆಳೆಗೆ ನೆರಳು ಪರದೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ ಶಾಸಕರ ಸಮ್ಮುಖದಲ್ಲಿ ವಿತರಿಸುತ್ತಿದ್ದೇವೆ. ರೈತರು ನೇರವಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಸರ್ಕಾರದ ಯೋಜನೆಗಳನ್ನು ಸಧ್ಬಳಕೆ ಮಾಡಿಕೊಳ್ಳಬೇಕು ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ಸಂಜಯ್ ಕೌರಿ, ರೈತ ಮುಖಂಡರಾದ ಬಸವರಾಜು, ಸುರೇಶ್, ರಮೇಶ್ ಸುವರ್ಣಾ, ಮೋಹನ್, ಧರ್ಮೇಗೌಡ, ಸಂಗಪ್ಪ ಸೇರಿದಂತೆ ಫಲಾನುಭವಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net