

ಶಿವಮೊಗ್ಗ: ಇತಿಹಾಸದಲ್ಲಿ ತರ್ಕ, ಜಿಜ್ಞಾಸೆಗಳಿಗೆ ಜಾಗವಿಲ್ಲ. ಹಿಡಿಸದ ವಿಷಯಗಳಿಗೆ ಬೇರೆಯದ್ದನ್ನು ತೂರಿಸಿದರೆ ಅದು ಇತಿಹಾಸ ಎನಿಸಿಕೊಳ್ಳುವುದಿಲ್ಲ ಎಂದು ಇತಿಹಾಸ ತಜ್ಞ ಡಾ. ಲಕ್ಷ್ಮೀಶ್ ಹೆಗಡೆ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗಾಯತ್ರಿ ಪ್ರತಿಷ್ಠಾನ ಹಾಗೂ ಜಿಲ್ಲಾ ಬ್ರಾಹ್ಮಣ ಮಹಾಸಭಾ ಆಶ್ರಯದ ಕಲಾ ಮತ್ತು ಜ್ಞಾನ ದಸರಾದಲ್ಲಿ ಉಪನ್ಯಾಸ ನೀಡಿದ ಅವರು, ಇಂದು ರಾಜಕೀಯ ಮತ್ತು ಜಾತಿ ಆಧಾರದ ಮೇಲೆ ಇತಿಹಾಸ ನೋಡಲಾಗುತ್ತಿದೆ. ಆದರೆ ರಾಜರು, ಕಲಾವಿದರಿಗೆ ಜಾತಿ ಇಲ್ಲ. ಹಾಗಾಗಿ ಎಲ್ಲರೂ ಜಾತಿ ಎಂಬ ಸ್ವಾರ್ಥದಿಂದ ಹೊರಗೆ ಬರಬೇಕು ಎಂದರು. ಸಮಕಾಲೀನ ಆಕರಗಳ ಆಧಾರದ ಮೇಲೆ ಇತಿಹಾಸ ಇರುತ್ತದೆ. ಆಧಾರಗಳು ಇತಿಹಾಸಕ್ಕೆ ಮೂಲವೇ ವಿನಃ ಇತಿಹಾಸವನ್ನು ಯಾವ ರೀತಿ ಸ್ವೀಕರಿಸಬೇಕೋ ಆ ರೀತಿ ಸ್ವೀಕರಿಸುತ್ತಿಲ್ಲ. ಕದಂಬರ ಕಾಲದ ಅಧ್ಯಾತ್ಮ, ತಂತ್ರಜ್ಞಾನವೂ ಇತಿಹಾಸ. ಇತಿಹಾಸಕಾರರಲ್ಲಿ ಚಿಕಿತ್ಸಕ ಮನಸ್ಥಿತಿ ಇರಬೇಕು. ತಾಳಗುಂದ ಅಭಿವೃದ್ಧಿ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಭವಿಷ್ಯದಲ್ಲಿ ಇತಿಹಾಸದ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಆಗಬೇಕು ಎಂದರು. ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಸಿ.ನಟರಾಜ್ ಭಾಗವತ್ ಮಾತನಾಡಿದರು. ನಿವೃತ್ತ ಉಪನ್ಯಾಸಕ ಎ.ಜೆ.ರಾಮಚಂದ್ರ ಜ್ಞಾನ ದಸರಾ ಉದ್ಘಾಟಿಸಿದರು. ಶಾಸಕ ಎಸ್.ಎನ್.ಚನ್ನಬಸಪ್ಪ, ಗಾಯತ್ರಿ ಪ್ರತಿಷ್ಠಾನ ಅಧ್ಯಕ್ಷ ನಾರಾಯಣ ರಾವ್, ಪಾಲಿಕೆ ಮಾಜಿ ಸದಸ್ಯೆ ಸುರೇಖಾ ಮುರಳೀಧರ್, ಪಾಲಿಕೆ ಅಧಿಕಾರಿ ವಸಂತಕುಮಾರಿ ಉಪಸ್ಥಿತರಿದ್ದರು.
ಮಯೂರ ಶರ್ಮ ಬನವಾಸಿಯನ್ನು ರಾಜಧಾನಿ ಮಾಡಿಕೊಂಡು ಆಳ್ವಿಕೆ ಮಾಡಿದ್ದ. ಶಿಕಾರಿಪುರ ತಾಲೂಕಿನ ತಾಳಗುಂದ ಅವರ ಜನ್ಮಸ್ಥಳ. ತಾಳಗುಂದದ ಸಿಂಹ ಕಟಾಂಜನ ಶಾಸನವು ಹಲ್ಮಿಡಿ ಶಾಸನಕ್ಕಿಂತ ಅತ್ಯಂತ ಪುರಾತನವಾದುದು. ಪುರಾತತ್ವ ಇಲಾಖೆಯ ಅನುಮತಿ ಪಡೆದು ತಾಳಗುಂದ ದೇವಸ್ಥಾನದ ಸುತ್ತಮುತ್ತ ಉತ್ಖನನ ಮಾಡಿದರೆ ಮಯೂರ ಶರ್ಮನ ಬಗ್ಗೆ ಮತ್ತಷ್ಟು ಪುರಾವೆಗಳು ಸಿಗುವ ಸಾಧ್ಯತೆ ಇದೆ. - ಬಿ.ವೈ.ರಾಘವೇಂದ್ರ, ಲೋಕಸಭಾ ಸದಸ್ಯ