

ಶಿವಮೊಗ್ಗ: ಕೆರೆ ಕಟ್ಟಲು ಸಾಧ್ಯವಾಗಿದ್ದರೂ ಅವುಗಳನ್ನು ಉಳಿಸಿಕೊಂಡು ಹೋಗುವಷ್ಟು ಪುಣ್ಯವಾದ ಕೆಲಸ ಮತ್ತೊಂದಿಲ್ಲ ಎಂದು ಹಸಿರು ತಂತ್ರಜ್ಞಾನ ಸಲಹೆಗಾರ ಡಾ. ಎಲ್.ಕೆ.ಶ್ರೀಪತಿ ಹೇಳಿದರು.
ವಿದ್ಯಾನಗರದ ಚೈತನ್ಯಸೌಧದಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಜಿಲ್ಲಾ ಜನಜಾಗೃತಿ ವೇದಿಕೆ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ನಮ್ಮೂರ ನಮ್ಮ ಕೆರೆ ಕಾರ್ಯಕ್ರಮದಡಿ ಪುನಶ್ಚೇತನಗೊಳಿಸಿದ ಕೆರೆ ಸಮಿತಿ ಪದಾಧಿಕಾರಿಕಾರಿಗಳ ಪ್ರೇರಣಾ ಸಭೆಯಲ್ಲಿ ಮಾತನಾಡಿದ ಅವರು, ನೀರಾವರಿ ಸೌಲಭ್ಯ ಒಳಗೊಂಡಿರದೇ ಇದ್ದಲ್ಲಿ ಅಂತಹ ಕೆರೆಗಳನ್ನು ಅನುಪಯುಕ್ತ ಎಂದು ಘೋಷಣೆ ಮಾಡಲಾಗುತ್ತಿದೆ. ಆದರೆ ನೀರಾವರಿ ಸೌಲಭ್ಯ ಇಲ್ಲದ ಕಾರಣಕ್ಕೆ ಅನುಪಯುಕ್ತ ಕೆರೆಗಳೆಂದು ಘೋಷಣೆ ಮಾಡುವಂತಿಲ್ಲ ಎಂದರು.
ಅಂತರ್ಜಲ ಎಷ್ಟು ಪ್ರಮಾಣದಲ್ಲಿ ಎತ್ತುತ್ತಿದ್ದರೋ ಅಷ್ಟೇ ಪ್ರಮಾಣದಲ್ಲಿ ಮರುಪೂರಣ ಆಗಬೇಕು. ಇಲ್ಲವಾದರೆ ಮುಂದೊಂದು ದಿನ ಸುಸ್ಥಿರ ಎನ್ನಿಸುವುದಿಲ್ಲ. ಕೆರೆಗಳು ಕೇವಲ ನೀರಾವರಿಗೆ ಮಾತ್ರ ಉಪಯೋಗವಿಲ್ಲ. ನಿತ್ಯ ಬಳಕೆಗೆ, ಜಾನುವಾರುಗಳಿಗೆ, ಬರ ಮತ್ತು ನೆರೆ ನಿರ್ವಹಣೆಗೆ, ತಾಪಮಾನ ನಿಯಂತ್ರಣಕ್ಕೆ ಕೆರೆಗಳ ಅಗತ್ಯವಾಗಿದೆ ಎಂದರು. ಒತ್ತುವರಿ, ನೀರು ಬರುವ ಕಾಲುವೆ ಮುಚ್ಚುವುದು, ಏರಿ ಕುಸಿಯುವುದು, ಕೋಡಿ ಕಾಲುವೆ ಮುಚ್ಚುವುದು, ಗುಣಮಟ್ಟ ಕುಸಿಯುವುದು(ಮಾಲಿನ್ಯ), ಹೂಳು ತುಂಬುವುದು ಕೆರೆಗಳ ಅವನತಿಗೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದರು. ಯೋಜನೆ ನಿರ್ದೇಶಕ ಆನಂದ್ ಸುವರ್ಣ, ಚಿತ್ರದುರ್ಗದ ಪ್ರಾದೇಶಿಕ ನಿರ್ದೇಶಕಿ ಬಿ.ಗೀತಾ, ಜಿಲ್ಲಾ ನಿರ್ದೇಶಕ ಜೆ.ಚಂದ್ರಶೇಖರ್, ದೊಡ್ಡ ದಾನವಂದಿ ಊರ ಅಭಿವೃದ್ಧಿ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರತ್ನಾ, ಜಿಲ್ಲಾ ಇಂಜಿನಿಯರ್ ಗಣಪತಿ ಭಟ್, ಸಹಾಯಕ ನಿರ್ದೇಶಕರಾದ ರೂಪಾ, ಉಮೇಶ್ ಸೇರಿದಂತೆ 21 ಕೆರೆಗಳ ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.