

ವಿಜಯಪುರ: ಕಾನೂನು ತಜ್ಞರ ಸಲಹೆ ಮೇರೆಗೆ ಆಲಮಟ್ಟಿಯ ಲಾಲ ಬಹಾದ್ದೂರ ಶಾಸ್ತ್ರಿ ಜಲಾಶಯವನ್ನು ಒಂದು ಮೀಟರ್ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಉಪಮುಖ್ಯಮಂತ್ರಿಯೂ ಆಗಿರುವ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರಿಗೆ ಮನವಿ ಮಾಡುವುದಾಗಿ ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.
ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ಅವರು ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳ ಶಾಸಕರ ಸಭೆ ಕರೆದಿದ್ದರು. ಅಲ್ಲಿ ಅಣೆಕಟ್ಟೆ ಎತ್ತರವನ್ನು ಕೇವಲ ಒಂದು ಮೀಟರ್ ಎತ್ತರ ಹೆಚ್ಚಿಸಲು ಯಾವುದೇ ತೊಂದರೆ ಇಲ್ಲವೆಂದು ಸರ್ಕಾರದ ಕಾನೂನು ತಜ್ಞ ಮೋಹನ ಕಾತರಕಿ ಅವರು ತಿಳಿಸಿದ್ದಾರೆ. ಈ ಒಂದು ಮಿಟರ್ ಎತ್ತರ ಹೆಚ್ಚಿಸುವುದರಿಂದ ಜಿಲ್ಲೆಗೆ ಅಂದಾಜು 30 ಟಿಎಂಸಿ ನೀರಿನ ಲಭ್ಯತೆಯಾಗಲಿದೆ. ಇದರಿಂದ ಜಿಲ್ಲೆಯ ನೀರಾವರಿ ಕ್ಷೇತ್ರ ಹೆಚ್ಚಳವಾಗಲಿದೆ. ಈ ನಿಟ್ಟಿನಲ್ಲಿ ಮೇ 23ರಂದು ಕೊಲ್ಹಾರದಲ್ಲಿ ನಡೆಯಲಿರುವ ಮೊಸರು ನಾಡೋತ್ಸವ-2025ರಲ್ಲಿ ಪಾಲ್ಗೊಳ್ಳಲು ಆಗಮಿಸುವ ಡಿ.ಕೆ. ಶಿವಕುಮಾರ ಅವರಲ್ಲಿ ಮನವಿ ಮಾಡುವುದಾಗಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಬಚಾವತ್ ಆಯೋಗದ ತೀರ್ಪಿನ ಪ್ರಕಾರ ಜಿಲ್ಲೆಗೆ 80 ಟಿಎಂಸಿ ನೀರು ಹಂಚಿಕೆಯಾಗಬೇಕು. ಈವರೆಗೂ ಆ ನೀರು ಉಪಯೋಗಿಸಿಕೊಳ್ಳಲು ಆಗಿಲ್ಲ. ಆಲಮಟ್ಟಿ ಅಣೆಕಟ್ಟೆ ಎತ್ತ 524ಕ್ಕೆ ಹೆಚ್ಚಿಸಲು ಅನ್ಯ ರಾಜ್ಯಗಳು ತಗಾದೆ ತೆಗೆಯುತ್ತಿವೆ. ಆಂದ್ರ ಮತ್ತು ತೆಲಂಗಾಣದ ನಡುವಿನ ಜಗಳದಿಂದಾಗಿ ವಿಜಯಪುರ ಜಿಲ್ಲೆಗೆ ಅನ್ಯಾಯವಾಗುತ್ತಿದೆ. ಮಹಾರಾಷ್ಟ್ರಕ್ಕೆ ಯಾವುದೇ ಹಾನಿಯಾಗದಿದ್ದರೂ ಅನವಶ್ಯಕವಾಗಿ ತಗಾದೆ ತೆಗೆಯುತ್ತಿದೆ. ಅಣೆಕಟ್ಟೆಯ ಒಂದು ಮೀಟರ್ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಲ್ಲವೆಂದು ಕಾನೂನು ತಜ್ಞರು ತಿಳಿಸಿದ್ದಾರೆ. ಅಲ್ಲದೇ, ರಾಜ್ಯದ ಸಂಸದರು ಸಹ ಕೇಂದ್ರದ ಮೇಲೆ ಒತ್ತಡ ಹಾಕಿ ವ್ಯಾಜ್ಯ ಬಗೆ ಹರಿಸುತ್ತಿಲ್ಲವೆಂದು ಶಿವಾನಂದ ಪಾಟೀಲ ಬೇಸರ ವ್ಯಕ್ತಪಡಿಸಿದರು.
ಅಣೆಕಟ್ಟೆ ಎತ್ತರ ಹೆಚ್ಚಿಸಲು ಭೂಸ್ವಾಧೀನ ಪ್ರಕ್ರಿಯೆಗೆ ಅಂದಾಜು 25 ಸಾವರ ಕೋಟಿ ರೂಪಾಯಿ ಅನುದಾನದ ಅವಶ್ಯಕತೆ ಇದೆ. ಕೃಷ್ಣಾ ಜಲಾಂದೋಲನ ಸಂಕಲ್ಪ ಯಾತ್ರೆಯಲ್ಲಿ ನೀಡಿದ ವಾಗ್ದಾನದಂತೆ ಹಂತ ಹಂತವಾಗಿ ಅನುದಾನ ಒದಗಿಸಲಾಗುವುದು ಎಂದ ಸಚಿವ ಶಿವಾನಂದ ಪಾಟೀಲರು, ಬಾಗಲಕೋಟೆಯ ಮುಳುಗಡೆ ಪ್ರದೇಶಕ್ಕೆ ಸಿಗುತ್ತಿರುವ ಆದ್ಯತೆ ವಿಜಯಪುರ ಜಿಲ್ಲೆಗೆ ಸಿಗುತ್ತಿಲ್ಲ. ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗೆ ಸಿಗಬೇಕಾದ ನೀರಿನ ಲಭ್ಯತೆ ಕಾಲಕ್ಕೆ ಸರಿಯಾಗಿ ಸಿಗುತ್ತಿದೆ. ಆದರೆ, ವಿಜಯಪುರ ಜಿಲ್ಲೆಗೆ ಸಿಗಬೇಕಾದ ನೀರು ಸಿಗುತ್ತಿಲ್ಲ. ಹೀಗಾಗಿ ಈ ಭಾಗದ ಜನಪ್ರತಿನಿಧಿಗಳು ಹಾಗೂ ರೈತರು ಒಟ್ಟಾಗಿ ಡಿಸಿಎಂ ಡಿ.ಕೆ. ಶಿವಕುಮಾರ ಅವರನ್ನು ಒತ್ತಾಯಿಸುವುದಾಗಿ ಸಚಿವರು ತಿಳಿಸಿದರು.