ಮಲೆನಾಡಲ್ಲಿ ಬಡ್ಡಿ ದಂಧೆಗಿಲ್ಲ ಅಂಕುಶ

money
Published on

ನವೀನ್ ಬಿಲ್ಗುಣಿ ಶಿವಮೊಗ್ಗ

ಖಾಕಿ ಪಡೆಯ ಎಚ್ಚರಿಕೆ ನಡುವೆಯೂ ಮಲೆನಾಡಲ್ಲಿ ಬಡ್ಡಿ, ಮೀಟರ್ ಬಡ್ಡಿ, ಚಕ್ರ ಬಡ್ಡಿ ದಂಧೆಗೆ ಕಡಿವಾಣ ಬೀಳುತ್ತಿಲ್ಲ. ದಿನ, ವಾರ, ತಿಂಗಳ ಲೆಕ್ಕದಲ್ಲಿ ಮನಸೋಇಚ್ಛೆ ಸುಲಿಗೆ ಮಾಡುತ್ತಿರುವ ಪರಿಣಾಮ ಹಲವರು ಪ್ರಾಣವನ್ನೇ ಕಳೆದುಕೊಳ್ಳುವ ಹಂತಕ್ಕೆ ಬಡ್ಡಿ ವ್ಯವಹಾರ ಬೆಳೆದಿದೆ.

ಲಂಗು ಲಗಾಮು ಇಲ್ಲದೆ ಬಡ್ಡಿ ವ್ಯವಹಾರವನ್ನೇ ಆದಾಯದ ಮೂಲವಾಗಿಸಿಕೊಂಡಿರುವ ಹಲವರು, ಸಾಲ ಪಡೆದವರ ಸುಲಿಗೆಗೆ ನಿಂತಿದ್ದಾರೆ. 3, 5, 10 ಪರ್ಸೆಂಟ್‌ವರೆಗೂ ಬಡ್ಡಿಗೆ ಸಾಲ ದೊರೆಯುತ್ತಿದೆ. ಆನಂತರ ಬಡ್ಡಿ, ಮೀಟರ್ ಬಡ್ಡಿ, ಸುಸ್ತಿ ಬಡ್ಡಿ ಕಟ್ಟಲಾಗದೆ ಮನೆ, ಆಸ್ತಿಯನ್ನೂ ಮಾರಾಟ ಮಾಡಿಕೊಂಡು ಬೀದಿಗೆ ಬರುತ್ತಿದ್ದಾರೆ. ಗೊತ್ತಿದ್ದೋ, ಗೊತ್ತಿಲ್ಲದೆಯೋ ಬಡ್ಡಿ ಸಾಲದ ಜಾಲದಲ್ಲಿ ಸಿಲುಕಿರುವ ಜನರು ಬೆದರಿಕೆ, ಮರ್ಯಾದೆಗೆ ಅಂಜಿ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಶಿವಮೊಗ್ಗ, ಭದ್ರಾವತಿಯಲ್ಲಿ ಅಧಿಕ: ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆ ಜೋರಾಗಿ ನಡೆಯುತ್ತಿದೆ. ಹಣ ಪಡೆದ ಮೇಲೆ ಬಡ್ಡಿ, ಮೀಟರ್ ಬಡ್ಡಿ ಕಟ್ಟಲು ಆಗದೆ ಪರದಾಡುತ್ತಿದ್ದಾರೆ. ಶಿವಮೊಗ್ಗ ಮತ್ತು ಭದ್ರಾವತಿ ನಗರದಲ್ಲಿ ಮೀಟರ್ ಬಡ್ಡಿ ದಂಧೆ ನಡೆಯುತ್ತಿದೆ. ಬಡವರು, ಸಣ್ಣಪುಟ್ಟ ವಾಪಾರಸ್ಥರಿಗೆ ಮೀಟರ್ ಬಡ್ಡಿಯಂತೆ ಹಣ ಕೊಟ್ಟು ಸುಲಿಗೆ ಮಾಡುತ್ತಿದ್ದಾರೆ. ವಿಶೇಷ ಕಾರ್ಯಾಚರಣೆ: ಬಡ್ಡಿ, ಮೀಟರ್ ಬಡ್ಡಿ ದಂಧೆಗೆ ಸಂಬಂಧಿಸಿ ಮೇ ತಿಂಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ಬಡ್ಡಿ ದಂಧೆ ನಡೆಸುತ್ತಿದ್ದವರಿಗೆ ಬಿಸಿ ಮುಟ್ಟಿಸಿದ್ದರು. ಸಹಿ ಮಾಡಿದ್ದ 230 ಖಾಲಿ ಚೆಕ್‌ಗಳು, ದಾಖಲೆಗಳು, ನಗದನ್ನು ವಶಕ್ಕೆ ಪಡೆದಿದ್ದರು. ಗೋಂದಿಚಟ್ನಳ್ಳಿಯ ಆರು ಜನರ ಮನೆ ಮೇಲೆ ದಾಳಿ ನಡೆಸಿ 217 ಚೆಕ್, ಪ್ರಾಮಿಸರಿ ನೋಟ್, ನಿವೇಶನ ಮತ್ತು ವಾಹನ ದಾಖಲಾತಿಗಳನ್ನು ವಶಕ್ಕೆ ಪಡೆದಿದ್ದರು. ಮರುದಿನವೇ ವೆಂಕಟೇಶ್‌ನಗರದ ವ್ಯಕ್ತಿಯೊಬ್ಬರ ಮನೆ ಮೇಲೆ ದಾಳಿ ನಡೆಸಿ 29,750 ರೂ. ನಗದು, 13 ಖಾಲಿ ಚೆಕ್, 55 ಸಾವಿರ ರೂ. ಎಂದು ನಮೂದಾಗಿರುವ ಒಂದು ಚೆಕ್, ಸಹಿ ಇರುವ ಖಾಲಿ ಸ್ಟಾೃಂಪ್ ಪೇಪರ್, ನಿವೇಶನ ದಾಖಲಾತಿ, ಬಡ್ಡಿ ವ್ಯವಹಾರ ನಮೂದಾಗಿರುವ ಏಳು ನೋಟ್ ಪುಸ್ತಕ ವಶಕ್ಕೆ ಪಡೆದಿದ್ದರು. ಸಣ್ಣ ವ್ಯಾಪಾರಿಗಳಿಗೂ ತಪ್ಪದ ಸಂಕಷ್ಟ: ಬೀದಿಬದಿ ವ್ಯಾಪಾರಿಗಳು ಒಳಗೊಂಡಂತೆ ಸಣ್ಣ ವ್ಯಾಪಾರ ನಡೆಸುವವರಿಗೆ ಪಿಎಂ ಸ್ವನಿಧಿ ಸೇರಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಯೋಜನೆಗಳಿವೆ. ಆದರೆ ಸಕಾಲಕ್ಕೆ ಯೋಜನೆಯಿಂದ ಸಾಲ ಸಿಗದ ಕಾರಣ ಸಣ್ಣ ವ್ಯಾಪಾರಿಗಳು ಅನಿವಾರ್ಯವಾಗಿ ಮೀಟರ್ ಬಡ್ಡಿಗೆ ಸಾಲ ಪಡೆದು ಮರುಪಾವತಿಸಲಾಗದೆ ನಾನಾ ಸಂಕಷ್ಟ ಎದುರಿಸುತ್ತಿದ್ದಾರೆ. ಮತ್ತೊಂದೆಡೆ ಆನ್‌ಲೈನ್‌ನಲ್ಲಿ ಸಾಲ ನೀಡುತ್ತಿರುವ ಫೈನಾನ್ಸ್‌ಗಳು ಜನರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿವೆ.

ಬಡ್ಡಿ, ಮೀಟರ್ ಬಡ್ಡಿ ವಸೂಲಿ ಸಂಬಂಧಿಸಿ ವಿಶೇಷ ಕಾರ್ಯಾಚರಣೆ ನಡೆಸಿ ಸಾಕಷ್ಟು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಖಾಲಿ ಚೆಕ್‌ಗಳು, ಮನೆ ದಾಖಲೆ ಪತ್ರ, ಮತ್ತಿತರ ದಾಖಲಾತಿ ಜಪ್ತಿ ಮಾಡಲಾಗಿದೆ. ಬಡ್ಡಿ ದಂಧೆಗೆ ಸಂಬಂಧಿಸಿ ಜಿಲ್ಲಾ ನೋಂದಣಾಧಿಕಾರಿಗಳಿಂದ ದೂರು ಪಡೆದು ಅನಂತರ ಕ್ರಮ ಕೈಗೊಳ್ಳಬೇಕಿದ್ದು, ಬಡ್ಡಿಗೆ ಕಿರುಕುಳ ನೀಡುತ್ತಿದ್ದರೆ 112ಗೆ ದೂರು ನೀಡುವಂತೆ ಮನವಿ ಮಾಡಲಾಗಿದೆ. ಜಿ.ಕೆ.ಮಿಥುನ್‌ಕುಮಾರ್, ಎಸ್‌ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net