ಶಿವದೀಕ್ಷೆಗಿಂತ ದೊಡ್ಡ ದೀಕ್ಷೆ ಬೇರೊಂದಿಲ್ಲ: ಓಂಕಾರ ಸ್ವಾಮೀಜಿ

20-RNR-11
Published on

ರಾಣೆಬೆನ್ನೂರ: ಪ್ರಪಂಚದಲ್ಲಿ ಶಿವದೀಕ್ಷೆಗಿಂತ ದೊಡ್ಡ ದೀಕ್ಷೆ ಬೇರೊಂದಿಲ್ಲ. ಶಿವದೀಕ್ಷೆ ತೆಗೆದುಕೊಂಡವರಿಗೆ ಲೌಕಿಕ ಬದುಕಿನಲ್ಲಿ ದೈವಿಗುಣ ಹೆಚ್ಚಾಗಲಿದೆ. ಇವತ್ತು ನೀವೆಲ್ಲ ಧರ್ಮಾರಚಣೆ ಮೂಲಕ ಲಿಂಗದೀಕ್ಷೆ ಪಡೆದುಕೊಂಡಿದ್ದರಿಂದ ನೀವೆಲ್ಲ ದೇವತಾ ಮನುಷ್ಯರೇ. ಇನ್ನು ಮುಂದೆ ಧರ್ಮ ಪರಿಪಾಲನೆ ಮಾಡಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಆವರಗೊಳ್ಳ ಪುರವರ್ಗಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ದೊಡ್ಡಪೇಟೆಯ ಹಿರೇಮಠದ ಪಂಚಾಚಾರ್ಯ ಆವರಗೊಳ್ಳ ಗುರುಕಾರಣ್ಯಮಂಗಲ ಮಂದಿರದಲ್ಲಿ ಭಾನುವಾರ ಜಂಗಮ ನೌಕರರ ವೇದಿಕೆ ಹಾಗೂ ಜಂಗಮ ಸಮಾಜದಿಂದ ಏರ್ಪಡಿಸಿದ್ದ ಜಂಗಮ ವಟುಗಳಿಗೆ ಶಿವದೀಕ್ಷಾ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ವೀರಶೈವ ಸಂಪ್ರದಾಯದಂತೆ ಜಂಗಮವಟುಗಳಿಗೆ ನೀಡುವ ಶಿವದೀಕ್ಷೆ (ಅಯ್ಯಾಚಾರ) ಪದ್ದತಿಯನ್ನು ಜಂಗಮ ಕುಲಬಾಂಧವರು ಉಳಿಸಿಕೊಂಡು ಹೋಗಬೇಕು. ಪೂರ್ವಜರ ಆಚಾರ, ವಿಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಧರ್ಮ ರಕ್ಷಣೆಗೆ ಮುಂದಾಗಬೇಕು. ಲಿಂಗಪೂಜೆ ಮಾಡುವ ಮೂಲಕ ತಮ್ಮ ಅಂತರಂಗವನ್ನು ಶುದ್ದವಾಗಿಟ್ಟುಕೊಳ್ಳಬೇಕು. ಮಣ್ಣಿಗೆ ಸಂಸ್ಕಾರ ಕೊಟ್ಟಲ್ಲಿ ಮಡಿಕೆಯಾಗಿ, ಲೋಹಕ್ಕೆ ಸಂಸ್ಕಾರ ನೀಡಿದ್ದಲ್ಲಿ ಆಭರಣವಾಗಿ, ನೀರಿಗೆ ಸಂಸ್ಕಾರ ನೀಡಿದಲ್ಲಿ ತೀರ್ಥವಾಗುತ್ತದೆ. ಹಾಗೆಯೆ ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಮನೆಯಲ್ಲಿ ಮನದಲ್ಲಿ ಜ್ಯೋತಿ ಬೆಳಗುವಂತಾಗಬೇಕು. ಬದುಕಿನಲ್ಲಿ ಸತ್ಯಶುದ್ದ ಕಾಯಕ ಇರಬೇಕು ಎಂದರು.

ವರ್ತಕ ಜಗದೀಶ ಅಜ್ಜೋಡಿಮಠ ಕಾರ್ಯಕ್ರಮ ಉದ್ಘಾಟಿಸಿದರು. ವಿವಿಧಡೆಯಿಂದ ಆಗಮಿಸಿದ 52 ಜಂಗಮ ವಟುಗಳಿಗೆ ಶಿವದೀಕ್ಷೆ ನೀಡಲಾಯಿತು. ರಾಚಯ್ಯ ಹಿರೇಮಠ ಅವರ ಪುರೋಹಿತರ ತಂಡ ಶಾಸೋಕ್ತವಾಗಿ ಶಿವದೀಕ್ಷೆ ಕಾರ್ಯಕ್ರಮ ನಡೆಸಿಕೊಟ್ಟಿತು.

ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್​ ಸದಸ್ಯ ಪ್ರಶಾಂತ ದುಗ್ಗತ್ತಿಮಠ, ವಿ.ಎಂ. ಕೊಗನೂರಮಠ, ವಾಗೀಶ ಮಳೇಮಠ, ವೀರಬಸಯ್ಯ ಹಿರೇಮಠ ಮಾತನಾಡಿದರು.

ಪ್ರಮುಖರಾದ ವೀರೇಶ ಬಾಳಿಹಳ್ಳಿಮಠ, ಶಿವಯೋಗಿ ಹಿರೇಮಠ, ಜಯದೇವಯ್ಯ ಹನಗೋಡಿಮಠ, ಸುಜನ್​ ಸಾಲಿಮಠ, ರವಿಕುಮಾರ ಪಾಟೀಲ, ಎಸ್​.ಸಿ. ಷಡಕ್ಷರಿಮಠ, ಕೊಟ್ರೇಶ ಅಜ್ಜೋಡಿಮಠ, ಜಗದೀಶ ಮಳೇಮಠ, ವಾಗೀಶ ನೀರಲಗಿಮಠ, ಎಂ.ಕೆ. ಸಾಲಿಮಠ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net