ಅನುದಾನವಿಲ್ಲ ಸಿಎಂ ವೆಚ್ಚಕ್ಕೆ ಬರವಿಲ್ಲ: ಛಲವಾದಿ ಟೀಕೆ | Challenge to congress

Chalavadi Narayana swamy
Published on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ವಿದೇಶ ಪ್ರವಾಸ, ವೆಚ್ಚಗಳ ಬಗ್ಗೆ ಪ್ರಶ್ನಿಸುವ ಮೊದಲು ಸಿಎಂ ಸಿದ್ದರಾಮಯ್ಯ ಅವರ ನಡೆ ಹಾಗೂ ಖರ್ಚುಗಳ ಮೇಲೆ ಒಂದು ನೈಜ ದೃಷ್ಟಿ ಹಾಕಿ ಎಂದು ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿರುಗೇಟು ನೀಡಿದ್ದಾರೆ.

‘ಜೋಳಿಗೆ ಕೀರನ ದುಬಾರಿ ವಿಸೇಧಿ ಪ್ರವಾಸ !’ ಶೀರ್ಷಿಕೆಯಡಿ ಕರ್ನಾಟಕ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ತನ್ನ ಖಾತೆಯಲ್ಲಿ ಸಂದೇಶ ಹಂಚಿಕೊಂಡು, 11 ವರ್ಷಗಳಲ್ಲಿ 144 ವಿದೇಶ ಪ್ರವಾಸ, 1,846 ಕೋಟಿ ರೂ. ಖರ್ಚು ಎಂದು ಉಲ್ಲೇಖಿಸಿ ಪ್ರಧಾನಿ ಮೋದಿಯವರನ್ನು ಟೀಕಿಸಿದೆ.

ಛಲವಾದಿಯವರು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ರಾಜ್ಯ ಕಾಂಗ್ರೆಸ್‌ಗೆ ಪ್ರತ್ಯುತ್ತರಿಸುವ ಸಂದೇಶ ಹಂಚಿಕೊಂಡು, ಸಿಎಂ ಸಿದ್ದರಾಮಯ್ಯ ಅವರ ಹೆಲಿಕಾಪ್ಟರ್, ಚಾರ್ಟರ್ ವಿಮಾನಗಳ ಪ್ರಯಾಣದ ಖರ್ಚು-ವೆಚ್ಚದ ವಿವರಗಳನ್ನು ಬಹಿರಂಗಪಡಿಸಿದ್ದಾರೆ.

ಖರ್ಚು-ವೆಚ್ಚವೆಷ್ಟು ?

ಸಿಎಂ ಸಿದ್ದರಾಮಯ್ಯ ಅವರ 2023-24ರಲ್ಲಿ ಹೆಲಿಕಾಪ್ಟರ್ ಪ್ರಯಾಣಕ್ಕೆ 12.65 ಕೋಟಿ ರೂ.. 2024-25 (ಜ.15ವರೆಗೆ) 19.35 ಕೋಟಿ ರೂ. ವೆಚ್ಚವಾಗಿದೆ. ಬೆಂಗಳೂರಿನಿಂದ ಕೇವಲ ಒಂದೂವರೆ ಗಂಟೆಗಳ ರಸ್ತೆ ಪ್ರಯಾಣದ ದೂರವಿದ್ದರೂ ಸಿಎಂ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದ್ದಾರೆ. ಮೈಸೂರಿಗೆ ಹೆಲಿಕಾಪ್ಟರ್‌ನಲ್ಲಿ ಒಂದು ಸಲ ಪ್ರಯಾಣದ ವೆಚ್ಚ 10.85 ಲಕ್ಷ ರೂ.ಗಳಾಗುತ್ತದೆ.

ದೆಹಲಿಗೆ ಚಾರ್ಟರ್ ವಿಮಾನ-ಬಿಸಿನೆಸ್ ಕ್ಲಾಸ್‌ನಲ್ಲಿ 70 ಸಾವಿರಗಳಾಗುತ್ತದೆ. ಸಿಎಂ ಅದೇ ದೆಹಲಿ ಪ್ರಯಾಣಕ್ಕೆ 44.40 ಲಕ್ಷ ರೂ. ಖರ್ಚು ಮಾಡಿದ್ದಾರೆ !.

ರಾಜ್ಯದ ಅಭಿವೃದ್ಧಿ, ರೈತರು, ಬಡಜನರ ನೆರವಿಗೆ ಹಣವಿಲ್ಲ. ಅಭಿವೃದ್ಧಿ ಯೋಜನೆಗಳಿಗೆ ಅನುದಾನವಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ ಮುಖ್ಯಮಂತ್ರಿಗಳ ವೈಭವಯುಕ್ತ ಪ್ರಯಾಣಗಳಿಗೆ ಮಾತ್ರ ಯಾವುದೇ ಸಮಸ್ಯೆ ಇಲ್ಲವೇ ಇಲ್ಲ !.

ಮತ್ತೊಬ್ಬರನ್ನು ಪ್ರಶ್ನೆ ಮಾಡುವ ಮುನ್ನ, ನಿಮ್ಮದೇ ಪಕ್ಷದ ಮುಖ್ಯಮಂತ್ರಿಗಳಾದ ಸಿದ್ದರಾನವರು ವಾಯು ಸಂಚಾರಕ್ಕೆ ಮಾಡಿದ ಖರ್ಚಿನ ಬಗ್ಗೆ ಉತ್ತರ ಕೊಡಿ ಎಂದು ರಾಜ್ಯ ಕಾಂಗ್ರೆಸ್‌ಗೆ ಛಲವಾದಿ ನಾರಾಯಣಸ್ವಾಮಿ ಸವಾಲು ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net