ಕೊಲೆ ಎಂಬುದಕ್ಕೆ ಸಾಕ್ಷ್ಯಾಧಾರವಿಲ್ಲ

Sushant Singh Rajaput - Final
Published on

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್​ರನ್ನು ಹತ್ಯೆ ಮಾಡಲಾಗಿದೆ ಎಂಬುದನ್ನು ಸಾಬೀತುಪಡಿಸುವುದಕ್ಕೆ ಇದುವರೆಗೆ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದು ಸಿಬಿಐ ಮೂಲಗಳು ತಿಳಿಸಿವೆ. ಎಲ್ಲ ದೃಷ್ಟಿಕೋನಗಳಿಂದಲೂ ತನಿಖೆ ನಡೆಸುತ್ತಿರುವುದಾಗಿ ತಿಳಿಸಲಾಗಿದೆ.

ಆರೋಪಿ ರಿಯಾ ಚಕ್ರವರ್ತಿ ಪರ ವಕೀಲರು ಈ ಪ್ರಕರಣವನ್ನು 2008ರಲ್ಲಿ ನಡೆದ ಆರುಷಿ ತಲ್ವಾರ್ ಹತ್ಯೆ ಪ್ರಕರಣಕ್ಕೆ ಹೋಲಿಸಿದ್ದಾರೆ. ಆ ಪ್ರಕರಣದಲ್ಲಿ ಆರುಷಿ ಅವರ ತಂದೆ, ತಾಯಿ ಆರೋಪಿ ಸ್ಥಾನದಲ್ಲಿದ್ದರು. ಆದರೆ ನಿಜವಾದ ಅಪರಾಧಿಗಳು ಯಾರು ಎನ್ನುವುದು ಕೊನೆಗೆ ತಿಳಿಯಿತು ಎಂದು ಅವರು ಹೇಳಿದ್ದಾರೆ. ಇದೇ ವೇಳೆ ರಿಯಾ ಚಕ್ರವರ್ತಿ ತಂದೆ ಇಂದ್ರಜಿತ್ ಚಕ್ರವರ್ತಿಯನ್ನು ಮಂಗಳವಾರ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

ರಿಯಾ ಸಹೋದರನಿಗೆ ಗಾಂಜಾ ನೀಡುತ್ತಿದ್ದ ಇಬ್ಬರ ಬಂಧನ ಪ್ರಕರಣದ ಮುಖ್ಯ ಆರೋಪಿ ರಿಯಾ ಚಕ್ರವರ್ತಿ ಅವರ ಸಹೋದರ ಶೌವಿಕ್​ಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಇಬ್ಬರನ್ನು ನಾಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು ಬಂಧಿಸಿದ್ದಾರೆ. ಬಾಂದ್ರಾದ ಅಬ್ದುಲ್ ಬಸೀತ್ ಮತ್ತು ಅಂಧೇರಿಯ ವಿಲಾತ್ರ ಬಂಧಿತ ಆರೋಪಿಗಳು. ಇವರು ಸುಶಾಂತ್ ಅವರ ಮ್ಯಾನೇಜರ್ ಸಮ್ಯೂಲ್ ಮಿರಾಂಡಾಗೆ ಗಾಂಜಾ ನೀಡುತ್ತಿದ್ದರು. ಆತ ಅದನ್ನು ಶೌವಿಕ್​ಗೆ ನೀಡುತ್ತಿದ್ದ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net