

ಕೋಲಾರ: ಜಲ ಮೂಲಗಳನ್ನು ರಸಿಕೊಳ್ಳದ ಇದ್ದುದರಿಂದ ಇಂದು ನೀರಿಗಾಗಿ ಹಾಹಾಕಾರ ಎದುರಿಸುವ ಪರಿಸ್ಥಿತಿ ಎದುರಾಗಿದೆ. ಲಭ್ಯವಿರುವ ನೀರನ್ನು ಮಿತ ಬಳಕೆ ಮಾಡಬೇಕು, ವ್ಯರ್ಥ ಮಾಡಿದರೆ ಅಪಾಯ ತಪ್ಪಿದ್ದಲ್ಲ ಎಂದು ಸಣ್ಣ ನೀರಾವರಿ ಇಲಾಖೆ ಸಚಿವ ಎನ್.ಎಸ್.ಬೋಸರಾಜು ಎಚ್ಚರಿಸಿದರು.
ನಗರ ಹೊರವಲಯದ ತೋಟಗಾರಿಕೆ ಮಹಾವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಟಲ್ ಭೂಜಲ ಯೋಜನೆ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಜಲ ಶಕ್ತಿ ಸಚಿವಾಲಯ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಸಂರಕ್ಷಣಾ ಇಲಾಖೆ, ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಶುಕ್ರವಾರ ಆಯೋಜಿಸಿದ್ದ ಸಹಿ ಫಸಲ್ ಕೃಷಿಯಲ್ಲಿ ನೀರಿನ ಬಳಕೆ ದಕ್ಷತೆ ಹೆಚ್ಚಿಸುವ ಕುರಿತು ಆಯೋಜಿಸಿದ್ದ ಜಿಲ್ಲಾಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಕೋಲಾರ ಜಿಲ್ಲೆಯು ಬರಪಸ್ಥಿತಿಯ ಹಣೆಪಟ್ಟಿ ಕಟ್ಟಿಕೊಂಡಿತ್ತು, ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರವು ಕೆ.ಸಿ.ವ್ಯಾಲಿ ಯೋಜನೆ ಜಾರಿಗೆ ತಂದು ಪರಿಸ್ಥಿತಿ ನಿಯಂತ್ರಿಸಲಾಗುತ್ತಿದೆ. ಇದರಿಂದ ಅಂತರ್ಜಲಮಟ್ಟ ಏರಿಕೆಯಾಗಿದೆ. ಆದರೂ ಅಂತರ್ಜಲ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಇದು ನಿರಂತರವಾಗಿ ಮುಂದುವರಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ಬೆಂಗಳೂರು ನಗರದಲ್ಲಿನ ತ್ಯಾಜ್ಯ ನೀರು ತಮಿಳುನಾಡಿನ ಮೆಟ್ಟೂರು ಡ್ಯಾಂ ಸೇರುತ್ತಿತ್ತು, ಸಂಸ್ಕರಿಸಿ ಕೆ.ಸಿ.ವ್ಯಾಲಿ ಯೋಜನೆ ಮೂಲಕ ಜಿಲ್ಲೆಯ ಕೆರೆಗಳಿಗೆ ಹರಿಸಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರವು ಸಾವಿರಾರು ಕೋಟಿ ರೂ. ನೀಡಲಾಗುತ್ತಿದ್ದು, ಜನರ ಭಾಗವಹಿಸುವಿಕೆಯಿಂದ ಮಾತ್ರವೇ ಯೋಜನೆ ಯಶಸ್ವಿಯಾಗಲಿದೆ ಎಂದರು.
* ರಾಜ್ಯಕ್ಕೆ 645 ಕೋಟಿ ರೂ. ಬಿಡುಗಡೆ
ದೇಶದ 7 ರಾಜ್ಯಗಳಲ್ಲಿ ಅಂತರ್ಜಲಮಟ್ಟ ಆತಂಕಕಾರಿಯಾಗಿ ತಳಮಟ್ಟಕ್ಕೆ ತಲುಪಿತ್ತು. ಈ ವೇಳೆ ಕರ್ನಾಟಕವನ್ನು ಆಯ್ಕೆ ಮಾಡಿ 14 ಜಿಲ್ಲೆಗಳ 41 ತಾಲೂಕುಗಳಲ್ಲಿ ಅಟಲ್ ಭೂಜಲ ಯೋಜನೆ ಪ್ರಾರಂಭಿಸಲಾಗುತ್ತಿದೆ. ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ 645 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಎಲ್ಲ ಇಲಾಖೆಗಳು ಕೆಲಸ ಆರಂಭಿಸಬೇಕಿದೆ. ಅನುದಾನವು ಸದುದ್ದೇಶಕ್ಕೆ ಬಳಕೆಯಾಗಬೇಕು ಎಂದು ಬೋಸರಾಜು ಎಚ್ಚರಿಸಿದರು.
ತೋಟಗಾರಿಕೆ, ಹಾಲು, ಕೃಷಿಯಲ್ಲಿ ಅಭಿವೃದ್ಧಿ ಆಗುತ್ತಿದ್ದು, ನೀರಿನ ಸಮಸ್ಯೆ ನೀಗಿಸಲು ಅಟಲ್ ಭೂಜಲ ಯೋಜನೆ ಪ್ರಸ್ತುತ ಅತ್ಯವಶ್ಯವಾಗಿದೆ. ತರಬೇತಿಯಲ್ಲಿ ಕಾಟಾಚಾರಕ್ಕೆ ಭಾಗವಹಿಸದೆ ವಿಚಾರ ತಿಳಿದುಕೊಂಡು ಅನುಕೂಲ ಕಲ್ಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
* ಜಲ ಮೂಲಗಳ ನಾಶ ಸಲ್ಲದು
ಅಂತರ್ಜಲದಿಂದಾಗಿ ಗೃಹಬಳಕೆ, ಕೈಗಾರಿಕೆ, ಕೃಷಿಗೆ ಉಪಯೋಗವಾಗಲಿದೆ. ಸದ್ಯ ರಾಜ್ಯ, ರಾಷ್ಟ್ರದಲ್ಲಿ ಉತ್ತಮ ಮಳೆಯಾಗಿರುವ ಜತೆಗೆ ಅನಾಹುತಗಳೂ ಜರುಗಿವೆ. ಮಳೆಯಾಧಾರಿತ ನೀರನ್ನು ವಿವಿಧ ಯೋಜನೆಗಳ ಮೂಲಕ ಇಂಗಿಸುವ ಕೆಲಸ ಮಾಡಬೇಕು. ಆಗ ಉತ್ತಮ ಉಪಯೋಗಗಳು ಆಗುತ್ತವೆ. ಜಲ ಮೂಲಗಳನ್ನು ನಾಶ ಮಾಡಿ ಕಟ್ಟಡಗಳನ್ನು ನಿರ್ಮಾಣ ಮಾಡಿದರೆ ಪ್ರಾಣ ಹಾನಿಗಳು ಸಂಭವಿಸುತ್ತವೆ ಎಂಬುದಕ್ಕೆ ಬೆಂಗಳೂರಿನಲ್ಲಿ ಕಟ್ಟಡಗಳು ಕುಸಿದಿರುವುದು ಸಾ ಎಂದು ಸಚಿವರು ತಿಳಿಸಿದರು.
* ಮಣ್ಣಿನ ಆರೋಗ್ಯ ಸರಿಪಡಿಸಬೇಕು
ಆಹಾರಕ್ಕೆ ಕೊರತೆಯಿದ್ದ ಸಂದರ್ಭದಲ್ಲಿ ಹಸಿರುಕ್ರಾಂತಿ ಮೂಲಕ ಸುಧಾರಣೆ ಹೊಂದಿದ್ದೇವೆ. ಜತೆಗೆ ಕ್ರಾಂತಿ ಹೆಸರಿನಲ್ಲಿ ಮಣ್ಣಿನ ಆರೋಗ್ಯ, ಉತ್ಪಾದಕತೆ ಹಾಳು ಮಾಡಿದ್ದು ಇದನ್ನು ಪುನ@ ಸರಿಪಡಿಸಬೇಕಿದೆ ಎಂದು ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿವಿ ಉಪಕುಲಪತಿ ಡಾ.ವಿಷ್ಣುವರ್ಧನ್ ತಿಳಿಸಿದರು. ಕೋಲಾರ ಜಿಲ್ಲೆಯಲ್ಲಿ ನೀರಿನ ಅಭಾವ ಹೇಗಿತ್ತು ಎನ್ನುವುದು ಕೆ.ಸಿ.ವ್ಯಾಲಿ ನೀರು ಬರುವುದಕ್ಕಿಂತ ಮೊದಲು ಗೊತ್ತಿತ್ತು. ನೀರಿಗಾಗಿ ಸಾಕಷ್ಟು ಹರಸಾಹಸ ಪಟ್ಟಿದ್ದೇವೆ. ಇದೀಗ ಸುಧಾರಣೆಯಾಗಿದೆ ಎನ್ನುವ ಕಾರಣಕ್ಕೆ ನೀರಿನ ದುರುಪಯೋಗ ಬೇಡ ಎಂದು ಮನವಿ ಮಾಡಿದರು. ಲಭ್ಯವಿರುವ ನೀರಿನಲ್ಲಿ ಶೇ.85 ರಿಂದ 90 ನೀರು ಕೃಷಿಗೆ ಬಳಕೆಯಾಗುತ್ತಿದ್ದರೆ, ಶೇ.5 ಕುಡಿಯಲು ಬಳಸುತ್ತಿದ್ದೇವೆ. ದಿನೇದಿನೆ ಜಲ ಸಂಪನ್ಮೂಲಗಳು ಕ್ಷೀಣಿಸುತ್ತಿದ್ದರೂ ಜನಸಂಖ್ಯೆ ಸ್ಫೋಟಕ್ಕೆ ಆಹಾರ ಒದಗಿಸಲೇಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಜಲ ಮಿಷನ್ ನಿರ್ದೇಶಕ ಅಶೋಕ್, ಅಟಲ್ ಭೂಜಲ ಯೋಜನಾ ಸಂಯೋಜಕ ರಾಘವನ್, ಯೋಜನಾ ನಿರ್ದೇಶಕ ಕಿರಣ್ ಮಸೂತಿ ಇತರರಿದ್ದರು.