ಎನ್​ಇಪಿಯಲ್ಲಿ ಗೊಂದಲವಿಲ್ಲ; ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಸ್ಪಷ್ಟೋಕ್ತಿ

NEP
ನೂತನ ಶಿಕ್ಷಣ ನೀತಿ ಕುರಿತ ಸಂವಾದದಲ್ಲಿ ವಿವಿಧ ಪತ್ರಿಕೆಗಳ ಸಂಪಾದಕರೊಂದಿಗೆ ಸಚಿವ ಡಾ.ಅಶ್ವತ್ಥನಾರಾಯಣ, ಇಲಾಖೆ ಆಯುಕ್ತ ಪಿ. ಪ್ರದೀಪ್.
Published on

ಬೆಂಗಳೂರು: ನೂತನ ಶಿಕ್ಷಣ ನೀತಿ(ಎನ್​ಇಪಿ) ಜಾರಿ ವಿಚಾರದಲ್ಲಿ ದೇಶದಲ್ಲಿ ನಾವೇ ಮೊದಲಿಗರು. ಹಾಗೆಂದು ಬೀಗುತ್ತಿಲ್ಲ, ಅನುಷ್ಠಾನಕ್ಕೆ ಸಕಲ ರೀತಿಯಲ್ಲಿ ಸಜ್ಜಾಗಿದ್ದೇವೆ. ಹಂತಹಂತವಾಗಿ ಅನುಷ್ಠಾನ ಮಾಡುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಆಯೋಜನೆಗೊಂಡಿದ್ದ ವಿವಿಧ ಪತ್ರಿಕೆಗಳ ಸಂಪಾದಕರೊಂದಿಗಿನ ಸಂವಾದದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಸಚಿವರು ಹಾಗೂ ಇಲಾಖೆ ಆಯುಕ್ತ ಪಿ. ಪ್ರದೀಪ್ ಹಲವು ಗೊಂದಲಗಳಿಗೆ ತೆರೆ ಎಳೆದು ಸ್ಪಷ್ಟತೆ ಮೂಡಿಸಿದರು. 34 ವರ್ಷದ ಬಳಿಕ ನೂತನ ಶಿಕ್ಷಣ ನೀತಿ ಜಾರಿಗೆ ತರಲಾಗುತ್ತಿದೆ. 2020ರಲ್ಲಿ ಶಿಕ್ಷಣ ನೀತಿಯನ್ನು ಒಪ್ಪಿ, 2021ರಿಂದಲೇ ಅನುಷ್ಠಾನ ಮಾಡಲು ನಿರ್ಧರಿಸಲಾಗಿತ್ತು. ಆ ಪ್ರಕಾರ ಅನುಷ್ಠಾನ ಪ್ರಕ್ರಿಯೆ ಆರಂಭವಾಗಿದೆ. ರಾಜ್ಯ ಸರ್ಕಾರ ತರಾತುರಿ ಮಾಡುತ್ತಿಲ್ಲ ಎಂದು ಸಚಿವರು ತಿಳಿಸಿದರು. ಹೊಸ ಶಿಕ್ಷಣ ನೀತಿ ಜಾರಿಗೆ ಮುನ್ನ ಶಾಸನ ಸಭೆಯಲ್ಲಿ ಆಗಬೇಕಾದ ಕಾನೂನು ರಚನೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಕಳೆದ ಐದು ವರ್ಷದಿಂದ ಹೊಸ ಶಿಕ್ಷಣ ನೀತಿಗೆ ತಯಾರಿ ನಡೆಸಲಾಗಿದೆ. ಎಲ್ಲ ಪಕ್ಷದ ಶಾಸಕರು, ಶಿಕ್ಷಣ ಕ್ಷೇತ್ರದ ಪ್ರತಿನಿಧಿಗಳೊಂದಿಗೆ ಚರ್ಚೆ ಮಾಡಲಾಗಿದೆ. ಯಾವುದೇ ಅಡೆತಡೆ ಆಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ಹಂತದ ಪದವಿವರೆಗೆ ರಾಷ್ಟ್ರೀಯ ಶಿಕ್ಷಣ ನೀತಿಯಂತೆಯೇ ಪ್ರವೇಶ ಆರಂಭವಾಗಿದೆ. ಪ್ರಥಮ ಹಾಗೂ ದ್ವಿತೀಯ ವರ್ಷ ಒಂದು ವಿಷಯ ಕನ್ನಡ ಕಡ್ಡಾಯ. ಮೊದಲ ವರ್ಷ ಪದವಿ ಕೋರ್ಸ್​ನ ಪರಿಷ್ಕೃತ ಪಠ್ಯಕ್ರಮವು ಸೆಪ್ಟೆಂಬರ್ ಮೊದಲ ವಾರದ ವೇಳೆಗೆ ಸಿದ್ಧವಾಗಲಿದೆ ಎಂದು ಸಚಿವ ಡಾ.ಅಶ್ವತ್ಥನಾರಾಯಣ ಹೇಳಿದರು. ಪಠ್ಯವನ್ನು ನಿರ್ಧರಿಸಲು ನಾವು ವಿವಿಗಳಿಗೆ ಸ್ವಾಯತ್ತತೆಯನ್ನು ನೀಡುತ್ತಿದ್ದೇವೆ ಎಂದರು.

ಸರ್ಟಿಫಿಕೇಟ್?: ಬಹು ಶಿಸ್ತೀಯ ಕಲಿಕೆಯಲ್ಲಿ ವಿದ್ಯಾರ್ಥಿ ಯಾವ ರೀತಿ ಪ್ರಮಾಣ ಪಡೆದುಕೊಳ್ಳುತ್ತಾನೆಂಬ ಗೊಂದಲಕ್ಕೂ ಅಧಿಕಾರಿಗಳು ತೆರೆ ಎಳೆದರು. ಯಾವ ವಿಭಾಗದಲ್ಲಿ ಕೋರ್ ವಿಷಯ ಹೊರತಾಗಿ ಎಲೆಕ್ಟೀವ್ಸ್ (ಆಯ್ಕೆ) ಮಾಡಿಕೊಂಡ ವಿಷಯವನ್ನು ಜತೆಗೆ ಕಲಿತರೂ ಮುಖ್ಯ ಕೋರ್ಸ್​ನ ಪ್ರಮಾಣ ಪತ್ರವನ್ನೇ ವಿದ್ಯಾರ್ಥಿ ಪಡೆದುಕೊಳ್ಳುತ್ತಾನೆ ಎಂದು ಪ್ರದೀಪ್ ವಿವರಿದರು.

ಕನ್ನಡ ಕಲಿಯಬೇಕು: ಉನ್ನತ ಶಿಕ್ಷಣ ಇಲಾಖೆಯಿಂದ ಹೊರಡಿಸಲಾದ ಮಾರ್ಗಸೂಚಿ ಯಂತೆ ಮೊದಲ ಎರಡು ವರ್ಷಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಯುವುದು ಕಡ್ಡಾಯವಾಗಿದೆ. ವಿದ್ಯಾರ್ಥಿಗಳು ಎನ್​ಇಪಿ ಅಡಿ ಎರಡು ಭಾಷೆ ಅಧ್ಯಯನ ಮಾಡಬೇಕಾಗುತ್ತದೆ. ಅದರಲ್ಲಿ ಒಂದು ಭಾಷೆ ಕನ್ನಡ ಎಂದು ಸ್ಪಷ್ಟಪಡಿಸಲಾಗಿದೆ. ಹಾಗಿದ್ದರೆ ಅನ್ಯ ರಾಜ್ಯದವರು ಮತ್ತು ವಿದೇಶಿ ವಿದ್ಯಾರ್ಥಿಗಳು ಏನು ಮಾಡಬೇಕು ಎಂಬ ಗೊಂದಲಕ್ಕೆ ಉನ್ನತ ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್ ತೆರೆ ಎಳೆದರು. ಕನ್ನಡಿಗರಲ್ಲದ ವಿದ್ಯಾರ್ಥಿಗಳು ಫಂಕ್ಷನಲ್ ಕನ್ನಡ ಕಲಿಯಬೇಕಾಗುತ್ತದೆ. ಮೊದಲ ಎರಡು ವರ್ಷಗಳಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಕನ್ನಡವನ್ನು ತಮ್ಮ ಆಯ್ಕೆಯ ಇನ್ನೊಂದು ಭಾಷೆಯೊಂದಿಗೆ ಕಲಿಯಬೇಕು. ಆದರೆ, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಮತ್ತು ಕನ್ನಡೇತರ ವಿದ್ಯಾರ್ಥಿಗಳು ಚಿಂತಿಸಬೇಕಾಗಿಲ್ಲ. ಏಕೆಂದರೆ ಅವರಿಗೆ ಕೇವಲ ಕ್ರಿಯಾತ್ಮಕ ಕನ್ನಡ ಕಲಿತರೆ ಸಾಕು. ಪ್ರಸ್ತುತ ಇಂಜಿನಿಯರಿಂಗ್ ಶಿಕ್ಷಣದಲ್ಲಿ ಕನ್ನಡ ಬಳಕೆಯಂತೆ ಬೇಸಿಕ್ ಕನ್ನಡ ವಿಷಯ ಇರುತ್ತದೆ ಎಂದು ವಿವರಿಸಿದರು.

ತಯಾರಿ ಹೇಗಿದೆ?

  • ಎನ್​ಇಪಿ ಬಗ್ಗೆ ಯಾವುದೇ ಗೊಂದಲ ಇದ್ದರೆ ಹೆಲ್ಪ್​ಲೈನ್ ಆರಂಭಿಸಲಾಗಿದೆ. ವೆಬ್​ಸೈಟ್ ಕೂಡ ಸಹಾಯಕ್ಕೆ ಬರಲಿದೆ.
  • ಅನುಷ್ಠಾನದ ಸಿದ್ಧತೆ, ಉಪನ್ಯಾಸಕರ ತರಬೇತಿಗಾಗಿ ಪ್ರತಿ ವಿಶ್ವವಿದ್ಯಾಲಯದಲ್ಲಿ ಕುಲಪತಿ ನೇತೃತ್ವದ ಸಮಿತಿ ರಚನೆಯಾಗುತ್ತಿದೆ.
  • ಮೊದಲ ವರ್ಷದ ಅನುಷ್ಠಾನಕ್ಕಾಗಿ ಪಠ್ಯ ಕ್ರಮದ ಚೌಕಟ್ಟಿನಡಿ ಪಠ್ಯ ರಚನಾ ಕಾರ್ಯ ಬಹುತೇಕ ಕೊನೆಯ ಹಂತಕ್ಕೆ ಬಂದಿದೆ.
  • ಎಲ್ಲ ವಿಶ್ವವಿದ್ಯಾಲಯದ ಪ್ರವೇಶ ಪ್ರಕ್ರಿಯೆಯೂ ಹೊಸ ಶಿಕ್ಷಣ ನೀತಿಯಂತೆ ಇರಲಿದ್ದು, ಕೇಂದ್ರೀಕೃತ ಆನ್​ಲೈನ್ ದಾಖಲಾತಿ ನಡೆಯಲಿದೆ.

ಬೆಳವಣಿಗೆಗಳು...

  • ಉನ್ನತ ಶಿಕ್ಷಣ ಸಂಸ್ಥೆಗಳ ನಡುವೆ ಸಹಯೋಗವನ್ನು ಅನುಮತಿಸಲಾಗಿದೆ. ಒಂದು ಸಂಸ್ಥೆ ಇನ್ನೊಂದು ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಬಹುದು. ಈ ಸಹಯೋಗವು ವಿದ್ಯಾರ್ಥಿಗಳಿಗೆ ಬಹು ಶಿಸ್ತಿನ ವಿಷಯ ಆಯ್ಕೆ ಮಾಡಲು ಸಹಾಯ ಮಾಡಲಿದೆ.
  • ಸಹಯೋಗದಿಂದ ಯಾವುದೇ ಶಿಕ್ಷಣ ಸಂಸ್ಥೆಯು ಇನ್ನೊಂದು ನೆರೆಯ ಸಂಸ್ಥೆಯೊಂದಿಗೆ ಸಹಕರಿಸಿ ತಮ್ಮ ಕಾಲೇಜಿನಲ್ಲಿ ಲಭ್ಯವಿಲ್ಲದ ವಿಷಯದ ಕಲಿಕೆಗೆ ವಿದ್ಯಾರ್ಥಿಗೆ ಅವಕಾಶ ನೀಡಬಹುದು.
  • ವಿದ್ಯಾರ್ಥಿಗಳ ಅಗತ್ಯಗಳನ್ನು ಪೂರೈಸಲು ಕ್ಲಸ್ಟರ್ ಆಫ್ ಕಾಲೇಜ್ ಎಂಬ ಪರಿಕಲ್ಪನೆಯನ್ನು ಪರಿಚಯಿಸಲಾಗುತ್ತಿದ್ದು, ಇದು ಬಹುಶಿಸ್ತೀಯ ಕಲಿಕೆಗೆ ಪ್ರೋತ್ಸಾಹ ನೀಡಲಿದೆ.
  • ಕಲಿಕಾ ಕ್ರಮದಲ್ಲೂ ಹೊಸತನ ಬರಲಿದೆ. ಕ್ರೆಡಿಟ್ ಆಧಾರಿತ ವ್ಯವಸ್ಥೆಯ ಜತೆಗೆ ಡಿಜಿಟಲ್ ಪ್ಲಾಟ್​ಫಾಮರ್್​ಗಳಿಂದ ಶೇ.40 ಉಚಿತವಾಗಿ ಕಲಿಯಲು ಅವಕಾಶ ಮಾಡಿಕೊಡಲಾಗುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net