ಎಲ್ಲ ಕೇಸಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ತ ದಲಿತನಾದ ಮಾತ್ರಕ್ಕೆ ಕಾಯ್ದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ..

high court
Published on

ಬೆಂಗಳೂರು: ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರು ದಾಖಲಿಸುವ ಎಲ್ಲ ಪ್ರಕರಣಗಳಲ್ಲೂ ಅಟ್ರಾಸಿಟಿ ಕಾಯ್ದೆ ಸೆಕ್ಷನ್​ಗಳಡಿ ಎಫ್​ಐಆರ್ ದಾಖಲಿಸುವುದು ಬೇಡ. ಪ್ರಕರಣದ ಸತ್ಯಾಸತ್ಯತೆಯ ಆಧಾರದ ಮೇಲೆ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಬೇಕು ಎಂದು ಹೈಕೋರ್ಟ್ ಮಹತ್ವದ ತೀರ್ಪು ಕೊಟ್ಟಿದೆ. ಎಸ್​ಸಿ/ಎಸ್​ಟಿಗೆ ಸೇರಿದವರು ಸಂತ್ರಸ್ತರಾಗಿರುವ ಎಲ್ಲ ಅಪರಾಧ ಪ್ರಕರಣಗಳಲ್ಲೂ ಆರೋಪಿಯ ವಿರುದ್ಧ ಎಸ್​ಸಿ, ಎಸ್​ಟಿ (ದೌರ್ಜನ್ಯ ತಡೆ) ಕಾಯ್ದೆ ಹೇರಲು ಸಾಧ್ಯವಿಲ್ಲ. ಜಾತೀಯ ದಾಳಿ ನಡೆಸುವ ಉದ್ದೇಶವಿಲ್ಲದ ಕೃತ್ಯಗಳು ಸಂಭವಿಸಿದಾಗ ಆರೋಪಿಯ ವಿರುದ್ಧ ಆ ಘಟನೆಯ ಹಿನ್ನೆಲೆ ಆಧರಿಸಿಯಷ್ಟೇ ಐಪಿಸಿ ಸೆಕ್ಷನ್​ಗಳ ಅನುಸಾರ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಶ್ರೀಸಂಗಂ ಪ್ರಿಯ ಎಂಬುವರು ದಾಖಲಿಸಿದ್ದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 172, 173 (ಉದ್ದೇಶಪೂರ್ವಕವಾಗಿ ಕೋರ್ಟ್ ಸಮನ್ಸ್ ಸ್ವೀಕಾರಕ್ಕೆ ನಕಾರ) ಹಾಗೂ ಎಸ್​ಸಿ, ಎಸ್​ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 3(1) (ಎಫ್), 3(1)(ಜಿ) ಅಡಿ ಪೊಲೀಸರು ತಮ್ಮ ವಿರುದ್ಧ ದಾಖಲಿಸಿದ್ದ ಎಫ್​ಐಆರ್ ರದ್ದುಪಡಿಸಲು ಕೋರಿ ಲೋಕನಾಥ್ ಎಂಬುವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಪೀಠ ಈ ಆದೇಶ ನೀಡಿದೆ. ಜತೆಗೆ, ಅರ್ಜಿದಾರರ ವಿರುದ್ಧ ಬೆಂಗಳೂರಿನ 70ನೇ ಹೆಚ್ಚುವರಿ (ಎಸ್​ಸಿ,ಎಸ್​ಟಿ ಕಾಯ್ದೆ ಅಡಿ ದಾಖಲಾಗುವ ಪ್ರಕರಣ ವಿಚಾರಣೆಗೆಂದೇ ಇರುವ ವಿಶೇಷ ನ್ಯಾಯಾಲಯ) ಸಿಟಿ ಮತ್ತು ಸೆಷನ್ಸ್ ಕೋರ್ಟ್​ನಲ್ಲಿ ನಡೆಯುತ್ತಿದ್ದ ವಿಚಾರಣೆಯನ್ನೂ ರದ್ದುಪಡಿಸಿದೆ.

ಅರ್ಜಿದಾರರ ವಾದವೇನು?: ಅರ್ಜಿದಾರ ಲೋಕನಾಥ್ ಪರ ವಾದ ಮಂಡಿಸಿದ ವಕೀಲ ವಿ.ಬಿ. ಶಿವಕುಮಾರ್, ಅರ್ಜಿದಾರರು ಹಾಗೂ ಪ್ರತಿವಾದಿ ಶ್ರೀಸಂಗಂ ಪ್ರಿಯ ನಡುವೆ ಜಮೀನು ವ್ಯಾಜ್ಯವಿದ್ದು, ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಅರ್ಜಿದಾರರು ತಮ್ಮ ಆಸ್ತಿ ರಕ್ಷಿಸಿಕೊಳ್ಳಲು ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಹೀಗಿರುವಾಗ, ಶ್ರೀಸಂಗಂ ಪ್ರಿಯ ಅರ್ಜಿದಾರರ ವಿರುದ್ಧ ಎಸ್​ಸಿ, ಎಸ್​ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಸುಳ್ಳು ದೂರು ದಾಖಲಿಸಿದ್ದಾರೆ. ಇದೊಂದು ಸಂಪೂರ್ಣವಾಗಿ ಸಿವಿಲ್ ಸ್ವರೂಪದ ಪ್ರಕರಣವಾಗಿದ್ದು, ಅರ್ಜಿದಾರರಿಗೆ ತಮ್ಮ ಆಸ್ತಿ ರಕ್ಷಿಸಿಕೊಳ್ಳುವ ಎಲ್ಲ ಹಕ್ಕುಗಳೂ ಇವೆ. ಲೋಕನಾಥ್ ವಿರುದ್ಧದ ಎಫ್​ಐಆರ್ ಗಮನಿಸಿದರೆ, ಅವರ ವಿರುದ್ಧ ಮಾಡಲಾಗಿರುವ ಯಾವ ಆರೋಪಗಳೂ ಅನ್ವಯಿಸುವುದೇ ಇಲ್ಲ. ಅರ್ಜಿದಾರರ ವಿರುದ್ಧ ದಾಖಲಾಗಿರುವ ಎಫ್​ಐಆರ್ ಹಾಗೂ ದೋಷಾರೋಪ ಪಟ್ಟಿಗಳು ಕಾನೂನು ಬಾಹಿರವಾಗಿವೆ. ಆದ್ದರಿಂದ, ಅವರ ವಿರುದ್ಧದ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿದ್ದರು.

ಪ್ರಕರಣ ರದ್ದು: ಎಸ್​ಸಿ, ಎಸ್​ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 3(1)(ಎಫ್) ನಲ್ಲಿ ಹೇಳಿರುವಂತೆ ಕಲಂ ‘ಎಫ್’ ಅನ್ವಯಿಸಬೇಕೆಂದರೆ, ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ ವ್ಯಕ್ತಿಯ ಜಮೀನನ್ನು ಆ ವರ್ಗಕ್ಕೆ ಸೇರದ ಮತ್ತೊಬ್ಬ ವ್ಯಕ್ತಿ ಅತಿಕ್ರಮಿಸಿಕೊಂಡಿರಬೇಕು ಅಥವಾ ಕೃಷಿ ಚಟವಟಿಕೆಗೆ ಬಳಸಿಕೊಂಡಿರಬೇಕು. ಆದರೆ, ಈ ಪ್ರಕರಣದ ದೋಷಾರೋಪ ಪಟ್ಟಿಯಲ್ಲಿ ಈ ಅಂಶಗಳಿಲ್ಲ. ಜತೆಗೆ ಸೆಕ್ಷನ್ 3(1)(ಜಿ) ಅನ್ವಯಿಸಬಹುದಾದ ಅಂಶಗಳೂ ಇಲ್ಲ. ಪ್ರಕರಣವನ್ನು ಗಮನಿಸಿದರೆ, ಇದು ಅಕ್ಕಪಕ್ಕದ ಜಮೀನುಗಳ ಇಬ್ಬರು ಮಾಲೀಕರ ನಡುವಿನ ವ್ಯಾಜ್ಯವಾಗಿದೆ. ಇಂಥ ವ್ಯಾಜ್ಯದಲ್ಲಿ ಸಿವಿಲ್ ಕೋರ್ಟ್ ಮಾತ್ರವೇ ಸೂಕ್ತ ನಿರ್ಧಾರ ಕೈಗೊಳ್ಳಬಹುದಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಎಸ್​ಸಿ, ಎಸ್​ಟಿ ಕಾಯ್ದೆಯ ಸೆಕ್ಷನ್ 3(1)(ಎಫ್) ಹಾಗೂ 3(1)(ಜಿ)ಗಳು ಅನ್ವಯವಾಗುತ್ತದೆ ಎಂಬುದು ದೋಷಾರೋಪ ಪಟ್ಟಿಯಲ್ಲಿ ಸಾಬೀತಾಗಿಲ್ಲ. ಹೀಗಿರುವಾಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧ ಐಪಿಸಿ ಸೆಕ್ಷನ್ 172 ಹಾಗೂ 173 ಅಡಿಯ ಆರೋಪಗಳ ಸಂಬಂಧ ವಿಚಾರಣೆ ನಡೆಸುವುದು ಕೋರ್ಟ್ ಪ್ರಕ್ರಿಯೆಯ ದುರುಪಯೋಗವೆನಿಸಿಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅರ್ಜಿದಾರರ ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿದ್ದ ಪ್ರಕ್ರಿಯೆ ರದ್ದುಪಡಿಸಿ ಆದೇಶಿಸಿದೆ.

ದುರ್ಬಳಕೆ ಆಗಬಾರದೆಂದ ನ್ಯಾಯಾಲಯ

  • ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ ವ್ಯಕ್ತಿ ಸಂತ್ರಸ್ತರಾಗಿರುವ ಎಲ್ಲ ಅಪರಾಧ ಕೃತ್ಯಗಳಲ್ಲೂ ಎಸ್​ಸಿ, ಎಸ್​ಟಿ ಕಾಯ್ದೆಯ ಸೆಕ್ಷನ್ 3 ಹೇರಲು ಅವಕಾಶವಿಲ್ಲ. ಕೃತ್ಯದ ಉದ್ದೇಶ ಜಾತಿ ಆಧಾರಿತ ದಾಳಿ ಅಲ್ಲವೆಂದಾದರೆ, ಆರೋಪಿಯ ವಿರುದ್ಧ ಆ ಕೃತ್ಯದ ಹಿನ್ನೆಲೆ ಪರಿಗಣಿಸಿ ಸೂಕ್ತ ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸಬಹುದು ಅಥವಾ ಘಟನೆಯ ಸತ್ಯಾಸತ್ಯತೆ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ಇತರ ಕಾನೂನುಗಳ ಆಧಾರದಲ್ಲಿ ದೋಷಾರೋಪ ಹೊರಿಸಬಹುದು.
  • ಅಸ್ಪ್ರಶ್ಯತೆ ನಿರ್ಮೂಲನೆ, ಪರಿಶಿಷ್ಟ ಜಾತಿ, ಪಂಗಡದವರ ಮೇಲಿನ ದಾಳಿಗಳಿಂದ ರಕ್ಷಣೆ ಹಾಗೂ ಜಾತಿ ತಾರತಮ್ಯ ತಡೆಯುವ ಉದ್ದೇಶದಿಂದ ಎಸ್​ಸಿ, ಎಸ್​ಟಿ ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ತರಲಾಗಿದೆ.
  • ಆರೋಪಿ ವಿರುದ್ಧ ಕಾಯ್ದೆಯ ಸೆಕ್ಷನ್ 3 ಅನ್ವಯಿಸಲು ಪ್ರಾಥಮಿಕವಾಗಿ ಅಲ್ಲಿ ಜಾತಿ ಆಧಾರಿತ ದಾಳಿಗಳು ಅಥವಾ ಆ ಜಾತಿ ಬಗ್ಗೆ ದ್ವೇಷ ಭಾವನೆಯಿಂದ ಎಸಗಿರುವ ಕೃತ್ಯವಾಗಿರಬೇಕು. ಪ್ರಕರಣದಲ್ಲಿ ಸೆಕ್ಷನ್ 3 ಅನ್ವಯವಾಗುತ್ತದೆ ಎನ್ನುವುದು ತನಿಖೆಯಲ್ಲಿ ಕಂಡು ಬರಬೇಕು.
  • ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರದ ವ್ಯಕ್ತಿಯಿಂದ ಎಸ್​ಸಿ/ಎಸ್​ಟಿ ವರ್ಗಕ್ಕೆ ಸೇರಿದ ವ್ಯಕ್ತಿಯನ್ನು ದಮನಿಸುವ, ಅಪಮಾನಿಸುವ, ಶೋಷಣೆ ಮಾಡುವ ಅಥವಾ ಅಪಹಾಸ್ಯ ಮಾಡುವಂಥ, ಎಸ್​ಸಿ ಎಸ್​ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 3ರ ಅಡಿ ಯಾವುದೇ ಅಪರಾಧ ಎಸಗಿರುವುದನ್ನು ತನಿಖೆಯು ಬಹಿರಂಗಪಡಿಸದಿದ್ದರೂ, ಸಂತ್ರಸ್ತ ವ್ಯಕ್ತಿ ಕೇವಲ ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ್ದಾರೆಂಬ ಕಾರಣಕ್ಕೆ ದೋಷಾರೋಪಪಟ್ಟಿಯಲ್ಲಿ ಸೆಕ್ಷನ್ 3 ಸೇರಿಸಲು ಸಾಧ್ಯವಿಲ್ಲ.
  • ತುಳಿತ, ಜಾತಿನಿಂದನೆಗಳಿಂದ ಪರಿಶಿಷ್ಟ ಜಾತಿ, ಪಂಗಡದವರನ್ನು ರಕ್ಷಿಸುವುದೇ ಕಾಯ್ದೆಯ ಮೂಲ ಉದ್ದೇಶವಾಗಿದ್ದರೂ, ಆ ಕಾಯ್ದೆಯ ದುರ್ಬಳಕೆಗೆ ಅವಕಾಶ ನೀಡಬಾರದು. ಆದ್ದರಿಂದ, ಇಂಥ ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸುವಾಗ ತನಿಖಾಧಿಕಾರಿಗಳು ವಿವೇಚನೆಯಿಂದ ವರ್ತಿಸಬೇಕಾದ ಜವಾಬ್ದಾರಿ ಹೊಂದಿರುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net