ಸಾರ್ವಜನಿಕ ಹೊಣೆಗಾರಿಕೆಯ ಪ್ರಜ್ಞೆ ಕಡಿಮೆ

Botanical program
ನಗರದ ಟಿ. ಶೀನಪ್ಪ ಶೆಟ್ಟಿ ವೃತ್ತದಲ್ಲಿ ಪರಿಸರ ಜಾಗೃತಿ ಕುರಿತದ ಸಸ್ಯೋದ್ಯಾನ ಕಾರ್ಯಕ್ರಮವನ್ನು ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ ಉದ್ಘಾಟಿಸಿದರು. ಎನ್.ಗೋಪಿನಾಥ, ರವಿ ಪಾಟೀಲ್, ಎಚ್.ಎಸ್.ಪುಷ್ಪಲತಾ, ವಿನುತಾ ಇದ್ದರು.
Published on

ಶಿವಮೊಗ್ಗ: ಸಾರ್ವಜನಿಕ ಹೊಣೆಗಾರಿಕೆಯ ಪ್ರಜ್ಞೆ ಕಡಿಮೆಯಾಗುತ್ತಿರುವುದರಿಂದ ಕುಡಿಯುವ ನೀರು, ಬಳಸುವ ಭೂಮಿ ಮತ್ತು ಮರಗಿಡಗಳ ನಾಶ ಹೆಚ್ಚುತ್ತಿದೆ. ಅದನ್ನು ಉಳಿಸುವ ಬಗ್ಗೆ ಜಾಗೃತಿಯನ್ನು ಉದ್ದೀಪನಗೊಳಿಸಬೇಕಿದೆ ಎಂದು ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ ಹೇಳಿದರು.

ನಗರದ ಟಿ. ಶೀನಪ್ಪ ಶೆಟ್ಟಿ ವೃತ್ತದಲ್ಲಿ ಶನಿವಾರ ಸಾಗರ ಯುಥ್ ಫೋರ್ಸ್‌ ಅಸೋಸಿಯೇಶನ್‌ನಿಂದ ಪರಿಸರ ಜಾಗೃತಿ ಕುರಿತದ ಸಸ್ಯೋದ್ಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಪರಿಸರ ರಕ್ಷಣೆ ಜಾಗತಿಕ ಮಟ್ಟದಲ್ಲಿ ಚರ್ಚೆಗೊಳಗಾಗಿದೆ. ಎಲ್ಲರೂ ಇದಕ್ಕಾಗಿ ಹೋರಾಡುತ್ತಿದ್ದಾರೆ. ನಾಗರಿಕ ಬದುಕಿಗೆ ಪರಿಸರದ ಉಳಿವು ಅಗತ್ಯ. ಪರಿಸರ ನಾಶದಿಂದ ಈಗಾಗಲೇ ಸಾಕಷ್ಟು ಪರಿಣಾಮ ಎದುರಿಸುತ್ತಿದ್ದೇವೆ. ಪರಿಸರ ಉಳಿಸುವ ಬಗ್ಗೆ ಇನ್ನಾದರೂ ಚಿಂತನೆ ನಡೆಸಿ ಕಾರ್ಯೋನ್ಮುಖರಾಗಬೇಕು. ಹೆಚ್ಚು ಉತ್ತೇಜನ ಕೊಡಬೇಕು ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ ಮಾತನಾಡಿ, ನನ್ನದೇ ಗಿಡ ಎಂದು ಭಾವಿಸಿ ಪ್ರತಿಯೊಬ್ಬರೂ ಕುಂಡದಲ್ಲಿರುವ ಗಿಡವನ್ನು ಖರೀದಿಸಿ ಅಂಗಡಿ ಎದುರು ಇಟ್ಟು ಬೆಳೆಸಬೇಕು. ನಗರದಲ್ಲಿ ಪ್ರತಿ ಅಂಗಡಿಯವರಲ್ಲಿ ಈ ಬ್ಗಗೆ ಜಾಗೃತಿ ಮೂಡಿಸಲಾಗುವುದು. ಚೇಂಬರ್ ಆಫ್ ಕಾಮರ್ಸನಿಂದ 100 ಅಂಗಡಿಯವರು ಗಿಡ ಖರೀದಿಸುವ ಬಗ್ಗೆ ಅರಿವು ಮೂಡಿಸುವುದಾಗಿ ಭರವಸೆ ನೀಡಿದರು.
ಸುಡಾ ಮಾಜಿ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಮಾತನಾಡಿ, ಪ್ರತಿಯೊಂದು ಅಂಗಡಿಯವರು ಒಂದೊಂದು ಗಿಡವನ್ನು ಖರೀದಿಸಿ ಬೆಳೆಸಿದರೆೆ ಎಷ್ಟೋ ಪ್ರಮಾಣದ ಆಮ್ಲಜನಕ ಪಡೆಯಬಹುದು, ಸೌಂದರ್ಯೀಕರಣವೂ ಆಗುವುದು ಎಂದರು.
ದೊಡ್ಡಪೇಟೆ ಠಾಣೆ ಇನ್ಸ್‌ಪೆಕ್ಟರ್ ರವಿ ಪಾಟೀಲ್ ಮಾತನಾಡಿ, ಶಿವಮೊಗ್ಗದಂತಹ ಪ್ರದೇಶದಲ್ಲಿ ಬೇಸಿಗೆಯ ಬಿಸಿಲು ನೋಡಿ ಇದು ಮಲೆನಾಡೇ ಎಂಬ ಪ್ರಶ್ನೆ ತನ್ನಲ್ಲಿ ಉದ್ಭವಿಸಿತ್ತು. ಎಸಿಯಂತಹ ವಾತಾವರಣ ಇರಬೇಕಾದ ಜಾಗದಲ್ಲಿ ಮರಗಿಡಗಳನ್ನು ಕಡಿಯಲಾಗಿದೆ. ಇನ್ನಾದರೂ ಗಿಡ ಬೆಳೆಸಿ ಉತ್ತಮ ಪರಿಸರ ನಿರ್ಮಿಸಬೇಕಿದೆ. ಪ್ರತಿಯೊಂದನ್ನೂ ಖರೀದಿಸಿ ಮನೆ ಬಾಗಿಲಿಗೆ ತರಿಸುವಷ್ಟು ಆಲಸ್ಯ ಮನುಷ್ಯನಿಗೆ ಬಂದಿದೆ ಎಂದರು.
ಯುಥ್ ಫೋರ್ಸ್‌ ಅಸೋಸಿಯೇಶನ್ ಅಧ್ಯಕ್ಷೆ ಎಚ್.ಎಸ್.ಪುಷ್ಪಲತಾ ಪ್ರಾಸ್ತಾವಿಕ ಮಾತನಾಡಿದರು. ಸಾಗರದ ವಿನುತಾ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅತಿಥಿಗಳು ಸಹಿತ ಹಲವರು ಗಿಡಗಳನ್ನು ಖರೀದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net