ಗುಂಡಿಬಿದ್ದ ರಸ್ತೆಯಲ್ಲಿ ಸಂಚಾರಕ್ಕೆ ತೊಡಕು

25-KGL-1,,,,
ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿ ಸಂಚಾರಕ್ಕೆ ತೊಡಕಾಗಿರುವುದು.
Published on

ಕೊಳ್ಳೇಗಾಲ: ತಾಲೂಕಿನ ಮಧುವನಹಳ್ಳಿ ಗ್ರಾಮದ ರಸ್ತೆಯಲ್ಲಿ ಡಾಂಬರು ಕಿತ್ತು ಹೋಗಿ ಅಪಾಯಕಾರಿ ಗುಂಡಿಗಳು ನಿರ್ಮಾಣವಾಗಿದ್ದು ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ.

ಮಧುವನಹಳ್ಳಿ ಗ್ರಾಮದ ಜಿ.ವಿ.ಗೌಡ ನೀರಿನ ಟ್ಯಾಂಕ್‌ನಿಂದ ಆಂಜನೇಯಪುರ ಬೈಪಾಸ್ ರಸ್ತೆವರೆವಿಗೂ ನೂರಾರು ಗುಂಡಿ, ಹೊಂಡಗಳಿದ್ದು. ವಾಹನಗಳ ಸುಗಮ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ. ಬೈಕ್ ಸೇರಿದಂತೆ ಸಣ್ಣ ವಾಹನಗಳ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ಈ ರಸ್ತೆ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸೇರಿದೆ.

ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ಮುಖ್ಯ ರಸ್ತೆಯಾಗಿರುವುದರಿಂದ ವಾಹನ ಸಂಚಾರ ಅತಿ ಹೆಚ್ಚಾಗಿರುತ್ತದೆ. ಕೆಲವು ತಿಂಗಳಿನಿಂದಲೂ ಗುಂಡಿಬಿದ್ದ ರಸ್ತೆಯಲ್ಲಿ ಜನರು ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿದ್ದಾರೆ. ಬೈಕ್, ಆಟೋ, ಕಾರಿನ ಸವಾರರು ಅದ್ವಾನವಾಗಿರುವ ರಸ್ತೆಯಲ್ಲಿ ಶಪಿಸುತ್ತಲೇ ತೆರಳುತ್ತಾರೆ. ಮಧುವನಹಳ್ಳಿ ಗ್ರಾಪಂ ಅತಿ ದೊಡ್ಡ ಪಂಚಾಯಿತಿಯಾಗಿದ್ದರೂ 13 ಸಾವಿರಕ್ಕೂ ಹೆಚ್ಚು ಜನರು ವಾಸವಿದ್ದಾರೆ. ಆದರೆ ಯೋಗ್ಯವಾದ ರಸ್ತೆಯ ಭಾಗ್ಯವಿಲ್ಲದಿರುವುದು ಜನರ ಅಕ್ರೋಶಕ್ಕೆ ಕಾರಣವಾಗಿದೆ.

ಹಳೇ ರಸ್ತೆ ಕಡಗಣನೆ: ಕೆಲವು ತಿಂಗಳ ಹಿಂದಷ್ಟೇ ಮಧುವನಹಳ್ಳಿ ಹೊರವಲಯದಲ್ಲಿ ಬೈಪಾಸ್ ರಸ್ತೆ ನಿರ್ಮಾಣವಾಗಿದೆ. ಕಾರಣ ಬೆಂಗಳೂರು, ಮಳವಳ್ಳಿ, ಕನಕಪುರ, ಮೈಸೂರು, ಚಾಮರಾಜನಗರದಿಂದ ಬರುವ ವಾಹನಗಳು ನರೀಪುರ ಬೈಪಾಸ್ ಜಂಕ್ಷನ್ ಮೂಲಕ ಮಧುವನಹಳ್ಳಿ ಬೈಪಾಸ್ ಮೇಲೆ ಮಹದೇಶ್ವರ ಬೆಟ್ಟ, ತಮಿಳುನಾಡಿಗೆ ಸಂಚರಿಸುತ್ತಿವೆ. ಮೊದಲಾದರೆ ಪ್ರತಿಯೊಂದು ವಾಹನವು ಕೊಳ್ಳೇಗಾಲ ಮಾರ್ಗವಾಗಿ ಮಧುವನಹಳ್ಳಿ ಮೂಲಕ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದವು. ಬೈಪಾಸ್ ರಸ್ತೆ ನಿರ್ಮಾಣವಾದ ಬಳಿಕ ವಾಹನಗಳು ಬೈಪಾಸ್ ರಸ್ತೆಯಲ್ಲಿ ಹೆಚ್ಚು ಸಂಚಾರ ಮಾಡತೊಡಗಿವೆ. ಹಾಗಾಗಿ, ಹಳೇ ಮುಖ್ಯ ರಸ್ತೆಗಳ ಅಭಿವೃದ್ಧಿಯನ್ನು ಕಡೆಗಣಿಸಲಾಗುತ್ತಿದೆ. ಗುಂಡಿಗಳು ಬಿದ್ದು ಶೋಚನೀಯ ಸ್ಥಿತಿಯಲ್ಲಿದ್ದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂಬುದು ಮಧುವನಹಳ್ಳಿ ಗ್ರಾಮಸ್ಥರ ಅಳಲಾಗಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿ ಪ್ರತಿಕ್ರಿಯಿಸಿ, ಸದ್ಯದಲ್ಲಿಯೇ ಮಧುವನಹಳ್ಳಿ ರಸ್ತೆ ಗುಂಡಿಗಳಿಗೆ ತೇಪೆ ಹಾಕುವ ಕಾಮಗಾರಿ ನಡೆಯಲಿದೆ ಎಂದರು.

ಸಚಿವ ಸಂಪುಟ ಸಭೆ ಉದ್ದೇಶಕ್ಕೆ ರಸ್ತೆ ತೇಪೆ: ಕಳೆದ 6 ತಿಂಗಳ ಹಿಂದಷ್ಟೇ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪು ಸಭೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಮಧುವನಹಳ್ಳಿ ರಸ್ತೆ ಗುಂಡಿಗಳಿಗೆ ತೆಪೆ ಹಾಕಲಾಗಿತ್ತು. ನಂತರ ಒಂದು ತಿಂಗಳ ಬಳಿಕ ತೇಪೆ ಹಾಕಿದ ಡಾಂಬರು ಕಿತ್ತು ಹೋಗಿ ಯಥಾಸ್ಥಿತಿ ಗುಂಡಿಗಳು ನಿರ್ಮಾಣವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net