

ಮಡಿಕೇರಿ: ಮಕ್ಕಳಲ್ಲಿ ನ್ಯೂಮೋನಿಯಾ ಶೇ.೧೫, ನಿರ್ಜಲೀಕರಣ ಶೇ.೧೦ ಮರಣಗಳು ಸಂಭವಿಸುತ್ತಿದ್ದು, ಇವುಗಳನ್ನು ತಡೆಗಟ್ಟಲು ಆಂದೋಲನದ ರೂಪದಲ್ಲಿ ಸಾಮಾಜಿಕ ಆಂದೋಲನದ ಅರಿವು ಕಾರ್ಯಕ್ರಮ ರೂಪಿಸುವುದು ಅಗತ್ಯವಿದೆ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಗೋಪಿನಾಥ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬೋದಕ ಆಸ್ಪತ್ರೆ) ವತಿಯಿಂದ ಜಿಲ್ಲಾ ಆಸ್ಪತ್ರೆ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಾಮಾಜಿಕ ಜಾಗೃತಿ ಮತ್ತು ನ್ಯೂಮೋನಿಯಾ ತಟಸ್ಥೀಕರಣ ಪ್ರಕ್ರಿಯೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
೫ ವರ್ಷದೊಳಗಿನ ಮಕ್ಕಳಲ್ಲಿ ಮರಣಕ್ಕೆ ಪ್ರಮುಖ ಕಾರಣವಾದ ನ್ಯೂಮೋನಿಯಾ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತೀ ವರ್ಷ ನ೧೨ ರಂದು ವಿಶ್ವ ನ್ಯೂಮೋನಿಯಾ ದಿನ ಆಚರಿಸಲಾಗುತ್ತಿದೆ. ಕಾಯಿಲೆಯ ರಕ್ಷಣೆ, ಬರದಂತೆ ತಡೆಯುವುದು, ಚಿಕಿತ್ಸೆ ನೀಡುವುದರ ಬಗ್ಗೆ ಜನಜಾಗೃತಿ ಮೂಡಿಸಲು ಆಚರಿಸಲಾಗುತ್ತದೆ ಎಂದರು.
ಯೂಮೋನಿಯಾ ಶೇ.೧೫, ನಿರ್ಜಲೀಕರಣ ಶೇ.೧೦ ಮರಣಗಳು ಸಂಭವಿಸುತ್ತಿವೆ. ಇವುಗಳನ್ನು ತಡೆಗಟ್ಟಲು ಆಂದೋಲನದ ರೂಪದಲ್ಲಿ ಸಾಮಾಜಿಕ ಆಂದೋಲನದ ಅರಿವು ಕಾರ್ಯಕ್ರಮ ರೂಪಿಸುವುದು ಅಗತ್ಯವಿದೆ. ಅಲ್ಲದೇ ಸೂಕ್ತ ತರಬೇತಿಯೊಂದಿಗೆ ವೈದ್ಯಕೀಯ ಸಿಬ್ಬಂದಿಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಹಾಗೂ ನವಜಾತ ಶಿಶುಗಳಲ್ಲಿ ಮತ್ತು ಬಾಲ್ಯಾವಸ್ಥೆಯಲ್ಲಿ ಕಂಡುಬರುವ ನ್ಯೂಮೋನಿಯಾ ಕುರಿತು ಪಾಲಕರಿಗೆ ಅರಿವು ಮೂಡಿಸುವುದು ಅತ್ಯಾವಶ್ಯಕ ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಚೇತನ್ ಮಾತನಾಡಿ, ನ್ಯೂಮೋನಿಯಾವು ಮಕ್ಕಳಲ್ಲಿ ಕಂಡುಬರುವ ಸೋಂಕು ಆಗಿದೆ. ಯೂನಿಸೆಫ್ ವರದಿಯಂತೆ ಸುಮಾರು ೭೧ ಮಕ್ಕಳಲ್ಲಿ ಒಂದು ಮಗು ನ್ಯೂಮೋನಿಯಾದಿಂದ ಬಳಲುತ್ತಿರುತ್ತದೆ. ಭಾರತದಲ್ಲಿ ಪ್ರತೀ ೩೦ ಸೆಕೆಂಡ್‌ಗೆ ಒಂದು ಮಗು ನ್ಯೂಮೋನಿಯಾದಿಂದ ಮರಣ ಹೊಂದುತ್ತಿದೆ. ಕರ್ನಾಟಕದಲ್ಲಿ ಶೇ.೧೬ ನ್ಯೂಮೋನಿಯಾ ಕಾಯಿಲೆಯಿಂದ ಮಕ್ಕಳ ಮರಣ ಸಂಭವಿಸುತ್ತಿದೆ. ಬಡ ತೋಟ ಕಾರ್ಮಿಕರು ಅನಕ್ಷರಸ್ಥರಿಗೆ ಕಾಯಿಲೆ ಬಗ್ಗೆ ಸಂಪೂರ್ಣ ಮಾಹಿತಿ ಇರುವುದಿಲ್ಲ. ಅವರು ಮೂಢನಂಬಿಕೆಗೆ ಮಾರು ಹೋಗಿ ರೋಗವನ್ನು ನಿರ್ಲಕ್ಷಿಸಿ ಶಿಶು ಮರಣಕ್ಕೆ ಕಾರಣವಾಗುತ್ತಿದ್ದಾರೆ. ಇದಕ್ಕಾಗಿ ಇಲಾಖೆಯ ಎಲ್ಲಾ ಹಂತದ ಸಿಬ್ಬಂದಿಗಳು ಜನರಿಗೆ ಅರಿವು ಮೂಡಿಸಿ ಪ್ರಾರಂಭದಲ್ಲಿಯೇ ರೋಗ ಪತ್ತೆ ಹಚ್ಚಿ ಕಾಯಿಲೆ ತಡೆಗಟ್ಟುವುದು ಅತೀ ಮುಖ್ಯ ಎಂದು ತಿಳಿಸಿದರು.
ಕೊ.ವೈ.ವಿ.ಸಂ. ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಪುರುಷೋತ್ತಮ ಮಾತನಾಡಿ, ನ್ಯೂಮೋನಿಯಾ ಕಾಯಿಲೆಯು ಅವಧಿ ಪೂರ್ವ ಜನನ ಮತ್ತು ಕಡಿಮೆ ತೂಕದ ಮಕ್ಕಳಲ್ಲಿ ಕಂಡುಬರುತ್ತದೆ. ಗರ್ಭಿಣಿ ಅವಧಿಯಲ್ಲಿ ನೈಸರ್ಗಿಕ ರೋಗ ನಿರೋಧಕ ಶಕ್ತಿ ಕುಂಠಿತವಾಗುವುದರಿಂದ ಮಕ್ಕಳಲ್ಲಿ ಸೋಂಕು ಹೆಚ್ಚಾಗಿ ಸಾವಿಗೆ ಕಾರಣವಾಗಬಹುದು. ಸ್ವಚ್ಚವಾದ ನೀರು, ನೈರ್ಮಲ್ಯ ಹಾಗೂ ಸೋಪಿನಿಂದ ಕೈತೊಳೆಯುವುದರಿಂದ ನೂಮೋನಿಯಾ ರೋಗವನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಎನ್.ಆನಂದ್, ಜಿಲ್ಲಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ದಿವ್ಯರಾಣಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್.ಪಾಲಾಕ್ಷ, ತಾಲೂಕು ಆರೋಗ್ಯಾಧಿಕಾರಿಗಳು, ಡಿಎನ್‌ಓ, ಶುಶ್ರೂಷಣಾಧಿಕಾರಿಗಳು, ವೈದ್ಯಾಧಿಕಾರಿಗಳು, ಜಿ.ಆ.ಕು.ಕ ಕಚೇರಿಯ ಎನ್‌ಎಚ್‌ಎಂ ವಿಭಾಗದ ಅಧಿಕಾರಿ/ ಸಿಬ್ಬಂದಿಗಳು, ತಾ.ಆ.ಕಚೇರಿಯ ಅಧಿಕಾರಿ/ ಸಿಬ್ಬಂದಿಗಳು ಹಾಗೂ ಮಕ್ಕಳ ಪಾಲಕರು ಮತ್ತು ತಾಯಂದಿರು ಹಾಜರಿದ್ದರು.