ಅಂತಾರಾಜ್ಯ, 9 ಅಂತರ್ ಜಿಲ್ಲೆಗಳಿಗಿಲ್ಲ ಬಸ್

ksrtc 22 mar 20
Published on

ಬೆಂಗಳೂರು: ಕರೊನಾ ಭೀತಿಯಿಂದಾಗಿ ರಾಜ್ಯಾದ್ಯಂತ ಸರ್ಕಾರಿ ಬಸ್ ಸೇವೆ ಸೋಮವಾರವೂ ಸ್ಥಗಿತಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಅದರ ಜತೆಗೆ ಮಾ.24ರಿಂದ ಅಂತಾರಾಜ್ಯ ಮತ್ತು ಲಾಕ್​ಡೌನ್ ಆಗಿರುವ 9 ಜಿಲ್ಲೆಗಳಿಗೆ ಅಂತರ್ ಜಿಲ್ಲಾ ಸಾರಿಗೆ ವ್ಯವಸ್ಥೆ ರದ್ದುಗೊಳಿಸಲಾಗುತ್ತಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಬಸ್​ಗಳು ಸೋಮವಾರ ಕಾರ್ಯನಿರ್ವಹಿಸದಂತೆ ಸರ್ಕಾರ ಆದೇಶಿಸಿದೆ. ಮಂಗಳವಾರದಿಂದ ರಾಜ್ಯದಿಂದ ಹೊರರಾಜ್ಯಗಳಿಗೆ ಸಂಚರಿಸುವ ಬಸ್​ಗಳ ಸೇವೆಯನ್ನೂ ಸ್ಥಗಿತಗೊಳಿಸಲಾಗುತ್ತದೆ. ಹಾಗೆಯೇ, ಲಾಕ್​ಡೌನ್ ಮಾಡಲಿರುವ 9 ಜಿಲ್ಲೆಗಳಿಗೆ ಸರ್ಕಾರಿ ಮತ್ತು ಖಾಸಗಿ ಸಾರಿಗೆ ಸೇವೆಗಳನ್ನು ಸ್ಥಗಿತಗೊಳಿಸಲು ಸರ್ಕಾರ ಆದೇಶಿಸಿದೆ. ಬಸ್ ಮತ್ತು ಸಾರಿಗೆ ವಾಹನಗಳು ಆ ಜಿಲ್ಲೆಗೆ ಪ್ರವೇಶಿಸುವಂತಿಲ್ಲ ಹಾಗೂ ಅಲ್ಲಿಂದ ಬೇರೆ ಜಿಲ್ಲೆಗೆ ಹೋಗುವಂತಿಲ್ಲ. ಆದರೆ, ಕೆಲವೊಂದು ಜಿಲ್ಲೆಗಳಿಗೆ ಲಾಕ್​ಡೌನ್ ಆಗಿರುವ ಜಿಲ್ಲೆಗಳ ಮೂಲಕವೇ ಸಂಚರಿಸಬೇಕಿದೆ. ಆ ಮಾರ್ಗ ತಪ್ಪಿಸಿ ಬೇರೆ ಯಾವ ಮಾರ್ಗದಲ್ಲಿ ಬಸ್​ಗಳು ತೆರಳಬೇಕು ಎಂಬುದರ ಬಗ್ಗೆ ಅಧಿಕಾರಿಗಳು ಗೊಂದಲಕ್ಕೊಳಗಾಗಿದ್ದು, ಆ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಸೋಮವಾರ ಆ ಬಗ್ಗೆ ಪ್ರಕಟಿಸಲಾಗುತ್ತದೆ.

ಎಸಿ ಬಸ್​ಗಳಿಗೆ ಬ್ರೇಕ್: ಸರ್ಕಾರದ ಆದೇಶದಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 4 ನಿಗಮಗಳ 18 ಸಾವಿರಕ್ಕೂ ಹೆಚ್ಚಿನ ಬಸ್ ಸೋಮವಾರ ಸ್ಥಗಿತಗೊಳ್ಳುತ್ತಿವೆ. ಅದರ ಜತೆಗೆ ಮಂಗಳವಾರದಿಂದ ಮಾ. 31ರವರೆಗೆ ಅಂತರ ರಾಜ್ಯ ಬಸ್​ಗಳು, ಹವಾನಿಯಂತ್ರಿತ ಬಸ್​ಗಳ ಸೇವೆಯೂ ನೀಡದಂತೆ ತಿಳಿಸಲಾಗಿದೆ. ಹೀಗಾಗಿ ಕೆಎಸ್​ಆರ್​ಟಿಸಿ, ಬಿಎಂಟಿಸಿ, ಈಶಾನ್ಯ ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಶೇ. 50 ಬಸ್​ಗಳು ಮಾತ್ರ ಮಂಗಳವಾರದಿಂದ ಸೇವೆ ನೀಡಲಿವೆ.

ಖಾಸಗಿ ವಾಹನಗಳ ಸಂಚಾರ: ಖಾಸಗಿ ಬಾಡಿಗೆ ವಾಹನಗಳು, ಒಲಾ, ಉಬರ್ ಸೇರಿ ಆಪ್ ಆಧಾರಿತ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿಲ್ಲ. ಹೀಗಾಗಿ ಅವು ಎಂದಿನಂತೆ ಸಂಚರಿಸಲಿವೆ.

2,620 ಬಸ್​ಗಳ ಸಂಚಾರವಿಲ್ಲ: ಹೊರರಾಜ್ಯಗಳಿಗೆ ಸೇವೆ ಸ್ಥಗಿತಗೊಳಿಸಿರುವುದರಿಂದ ಬಿಎಂಟಿಸಿ ಹೊರತುಪಡಿಸಿ ಉಳಿದ 3 ನಿಗಮಗಳ 2,620 ಬಸ್​ಗಳ ಸೇವೆ ಸ್ಥಗಿತಗೊಳುತ್ತಿದೆ.

17.12 ಕೋಟಿ ರೂ. ಆದಾಯ ಖೋತಾ: ಶನಿವಾರ ಒಂದೇ ದಿನ 2,532 ಕೆಎಸ್​ಆರ್​ಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ನಿಗಮಕ್ಕೆ 3.77 ಕೋಟಿ ರೂ. ಆದಾಯ ನಷ್ಟವಾಗಿದೆ. ಮಾ.1ರಿಂದ 21ರವರೆಗೆ ಪ್ರಯಾಣಿಕರ ಸಂಖ್ಯೆ ಕುಸಿತದಿಂದ ನಿಗಮಕ್ಕೆ ಒಟ್ಟು 28 ಕೋಟಿ ರೂ. ಆದಾಯ ಖೋತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net