

ಶಿವಮೊಗ್ಗ: ರಾಜ್ಯದಲ್ಲಿ ಅರಣ್ಯ ಸಂಬಂಧಿ 670 ಅಕ್ರಮ ಕೈಗಾರಿಕೆಗಳು ಹಾಗೂ ಸಾಮಿಲ್‌ಗಳಿವೆ. ಅರಣ್ಯ ಇಲಾಖೆ ಇವುಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರುವುದು ಅಕ್ಷಮ್ಯ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಅಕ್ರಮ ಕೈಗಾರಿಕೆಗಳ ಬಗ್ಗೆ ಅರಣ್ಯ ಸಚಿವರ ಗಮನಕ್ಕೆ ತಂದಿದ್ದರೂ ಮೌನವಾಗಿದ್ದಾರೆ. ಸಣ್ಣ ರೈತರು ಒಂದೆರಡು ಎಕರೆ ಒತ್ತುವರಿ ಮಾಡಿಕೊಂಡಿದ್ದರೂ ಅವರನ್ನು ಒಕ್ಕಲೆಬ್ಬಿಸಲಾಗುತ್ತದೆ. ಆದರೆ ಕೋಟ್ಯಂತರ ಹಣ ಹೂಡಿ ವ್ಯವಸ್ಥಿತವಾಗಿ ಅರಣ್ಯ ಲೂಟಿ ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸುತ್ತಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಅಕ್ರಮ ಕೈಗಾರಿಕೆಗಳ ಮೂಲಕ ಅರಣ್ಯವನ್ನು ಕೊಳ್ಳೆ ಹೊಡೆಯುತ್ತಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು. ಹಾಸನ ಜಿಲ್ಲೆಯಲ್ಲಿ ನೇತ್ರಾವತಿ ನದಿಯ ಉಪನದಿಗಳಲ್ಲಿ ವಿದ್ಯುತ್ ಉತ್ಪಾದನೆಗೆ 24 ಘಟಕಗಳಿಗೆ 2010ರಲ್ಲಿ ಸರ್ಕಾರ ಅನುಮತಿ ನೀಡಿತ್ತು. ಉಪನದಿಗಳಿಗೆ ಒಡ್ಡು ಕಟ್ಟಿ ಒಂದೂವರೆ ಕಿ.ಮೀ. ದೂರ ಸುರಂಗ ಮಾಡಿ, ಅದರಲ್ಲಿ ನೀರು ಹರಿಸಿ ವಿದ್ಯುತ್ ಉತ್ಪಾದನೆಗೆ ಅವಕಾಶ ನೀಡಲಾಗಿತ್ತು. ಇದರಿಂದ ನೂರಾರು ಎಕರೆ ಕಾಡು ನಾಶವಾಗಿತ್ತು. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರಿಂದ ಎಲ್ಲ ಘಟಕಗಳನ್ನು ರದ್ದು ಮಾಡಲಾಗಿದೆ ಎಂದರು.
ಹಾಸನದಲ್ಲಿ 45 ಅಕ್ರಮ ಸಾಮಿಲ್‌ಗಳಿದ್ದವು. ಅರಣ್ಯ ಇಲಾಖೆ ಅನುಮತಿ ಇರಲಿಲ್ಲ. ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಕ ಪ್ರಶ್ನಿಸಲಾಗಿತ್ತು. ನ್ಯಾಯಾಲಯ ಎಲ್ಲ ಸಾಮಿಲ್‌ಗಳನ್ನು ಮುಚ್ಚುವಂತೆ ಮೌಖಿಕ ಆದೇಶ ನೀಡಿದೆ. ಅಕ್ರಮ ಸಾಮಿಲ್‌ಗಳು ಶಿವಮೊಗ್ಗ ಜಿಲ್ಲೆಯಲ್ಲೂ ಇರಬಹುದು. ಜಿಲ್ಲಾಧಿಕಾರಿ ಹಾಗೂ ಅರಣ್ಯಾಧಿಕಾರಿಗಳು ಪರಿಶೀಲಿಸಿ ಕ್ರಮ ಜರುಗಿಸಬೇಕು. ನೀಲಗಿರಿ ಬೆಳೆಸದಂತೆ ಆದೇಶವಿದ್ದರೂ ಕೆಲ ಅಧಿಕಾರಿಗಳು ನೀಲಗಿರಿ ಬೆಳೆಸಲು ಪರೋಕ್ಷವಾಗಿ ಪ್ರಚೋದನೆ ನೀಡುತ್ತಿದ್ದಾರೆ ಎಂದು ದೂರಿದರು.
ರೈತ ಸಂಘದ ಗೌರವಾಧ್ಯಕ್ಷ ಮಂಜುನಾಥ ಗೌಡ, ಜಿಲ್ಲಾಧ್ಯಕ್ಷ ಮಂಜುನಾಥ, ಪ್ರಮುಖರಾದ ಸುರೇಶ್ ನಾಯ್ಕ, ಚಂದ್ರಶೇಖರ ಜಮಖಂಡಿ, ಅರುಣ್‌ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.