

ಬೆಂಗಳೂರು ಗ್ರಾಮಾಂತರ: ರೈತಾಪಿ ವರ್ಗದ ಜನರ ಆರ್ಥಿಕ ಪ್ರಗತಿಗಾಗಿ ಕುರಿಮೇಕೆ ಸಾಕಣೆಗೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ, ಆದರೆ ರೈತರಿಗೆ ತಾವು ಸಾಕಿರುವ ಕುರಿ-ಮೇಕೆಗಳ ರಕ್ಷಣೆಯೇ ಸವಾಲಾಗಿ ಪರಿಣಮಿಸಿದೆ.
ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕುರಿ-ಮೇಕೆ ಕಳ್ಳರ ಹಾವಳಿ ಮಿತಿಮೀರಿದ್ದು, ರೈತರು ಕುರಿಸಾಕಣೆ ಸಹವಾಸವೇ ಬೇಡವೆಂಬ ಮನಸ್ಥಿತಿ ತಲುಪುವಂತಾಗಿದೆ. ವರ್ಷಾನುಗಟ್ಟಲೆ ಸಾವಿರಾರು ರೂ.ವೆಚ್ಚ ಮಾಡಿ ಸಾಕಿದ ಕುರಿ-ಮೇಕೆಗಳನ್ನು ರಾತ್ರೋರಾತ್ರಿ ದುಷ್ಕರ್ಮಿಗಳು ಅಪಹರಿಸುತ್ತಿರುವ ಪ್ರಕರಣಗಳು ಹೆಚ್ಚಿದ್ದು, ರೈತರಿಗೆ ದಿಕ್ಕು ದೋಚದಂತಾಗಿದೆ.
ಸರಣಿ ಕಳವು:
ದೊಡ್ಡಬಳ್ಳಾಪುರ ತಾಲೂಕಿನ ಲಿಂಗನಹಳ್ಳಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಮುಸುಕುಧಾರಿ ಕಳ್ಳರು, ಪ್ರಭಾಕರ್ ಎಂಬುವರಿಗೆ ಸೇರಿದ 5 ಕುರಿ ಹಾಗೂ 3 ಮೇಕೆಗಳನ್ನು ಅಪಹರಿಸಿದ್ದಾರೆ. ಕೃತ್ಯಕ್ಕೂ ಮೊದಲು ಮನೆಯ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿ ಯಾರೂ ಹೊರಬರದಂತೆ ಮಾಡಿದ್ದಾರೆ. ಬೆಳಗ್ಗೆ ಎಂದಿನಂತೆ ಎದ್ದು ಕುರಿಕೊಟ್ಟಿಗೆ ಬಳಿ ಹೋದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕಳೆದ 6 ತಿಂಗಳ ಅವಧಿಯಲ್ಲಿ ಇಂಥ 9 ಪ್ರಕರಣಗಳು ನಡೆದಿವೆ. ಆದರೆ ಇದುವರೆಗೆ ಕಳ್ಳರು ಪೊಲೀಸರ ಬಲೆಗೆ ಬಿದ್ದಿಲ್ಲ. ಇಂಥ ಕಳ್ಳರ ಸೆರೆಗೆ ಪೊಲೀಸರೂ ನಿರ್ಲಕ್ಷ್ಯ ತೋರಿಸುತ್ತಿರುವುದರಿಂದ ಕಳ್ಳರು ರಾಜಾರೋಷವಾಗಿ ಕೃತ್ಯ ಮುಂದುವರೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸಿಸಿ ಕ್ಯಾಮರಾದಲ್ಲಿ ಸೆರೆ:
ಮುಸುಕುಧಾರಿ ಕಳ್ಳರು, ಪ್ರಭಾಕರ್ ಎಂಬುವರ ಮನೆಗೆ ಹೊರಗಿನಿಂದ ಚಿಲಕ ಹಾಕಿ ಕೊಟ್ಟಿಗೆಯಲ್ಲಿದ್ದ ಕುರಿ ಮೇಕೆಗಳನ್ನು ಕಳವು ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.