

ಬೆಂಗಳೂರು: ಲಾಕ್ಡೌನ್ ವೇಳೆ ಮನೆ ಬೀಗ ಒಡೆದು ನಗದು ಹಾಗೂ ಚಿನ್ನಾಭರಣ ದೋಚಿದ್ದ ಕಳ್ಳನನ್ನು ಸದ್ದ್ದುಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರ್.ಟಿ.ನಗರ ನಿವಾಸಿ ಸೈಯದ್ ಮಸೂದ್ (36) ಬಂಧಿತ. ಆರೋಪಿಯಿಂದ 171 ಗ್ರಾಂ ಚಿನ್ನ, 6 ಲಕ್ಷ ರೂ ಹಾಗೂ ಕೃತ್ಯ ಬಳಸಿದ್ದ ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಬಿಟಿಎಂ ಲೇಔಟ್ನ ಬಿಇಎಂ ಕಾಲನಿ ನಿವಾಸಿ ಅಬ್ದಲ್ ರಶೀದ್ ಎಂಬುವರು ಮನೆ ಬಾಗಿಲಿಗೆ ಬೀಗ ಹಾಕಿಕೊಂಡು ಕುಟುಂಬದ ಜತೆ ಊರಿಗೆ ತೆರಳಿದ್ದರು. ಏ.27ರಂದು ವಾಪಸ್ ಆದ ಬಳಿಕ ಮನೆ ಬಾಗಿಲು ಮುರಿದು ಚಿನ್ನಾಭರಣ, ನಗದು ಹಾಗೂ ಆಸ್ತಿಪತ್ರವಿದ್ದ ಬ್ಯಾಗ್ ಕಳ್ಳತನ ಮಾಡಿಕೊಂಡು ಹೋಗಿರುವುದು ಗೊತ್ತಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಬೈಕ್ನಿಂದ ಕಳ್ಳನ ಸುಳಿವು: ಸಿಸಿ ಕ್ಯಾಮರಾಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ, ಕಳ್ಳತನ ಮಾಡಿ ಬೈಕ್ನಲ್ಲಿ ಪರಾರಿಯಾದವನ ಮುಖಚಹರೆ ಸಿಕ್ಕಿತ್ತು. ಇದನ್ನು ಆಧರಿಸಿ ತನಿಖೆ ಮುಂದುವರಿಸಿದಾಗ, ಕೃತ್ಯಕ್ಕೂ ಮುನ್ನ ಹಲವು ಬಾರಿ ಬಂದು ಹೋಗಿರು ವುದು ಕಂಡುಬಂದಿತ್ತು. ಬಳಿಕ ಆರೋಪಿ ಪರಾರಿ ಯಾಗಿದ್ದ ಮಾರ್ಗದಲ್ಲಿನ ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ತನಿಖೆ ಕೈಗೊಂಡ ಪೊಲೀಸರಿಗೆ, ಗುರಪ್ಪನಪಾಳ್ಯದಲ್ಲಿರುವ ಸಹೋದರಿ ಮನೆಗೆ ಬಂದು ಹೋಗಿರುವುದು ಖಚಿತವಾಗಿತ್ತು. ಈ ಕುರಿತು ಮಾಹಿತಿ ಪಡೆದು ಆರ್.ಟಿ. ನಗರದಲ್ಲಿ ನೆಲೆಸಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಮನೆಯಲ್ಲೇ ಬಚ್ಚಿಟ್ಟಿದ್ದ
ವಾಹನ ಚಾಲಕನಾಗಿರುವ ಸೈಯದ್ ಬಿಟಿಎಂ ಲೇಔಟ್ನಲ್ಲಿರುವ ಸಹೋದರಿ ಮನೆಗೆ ಬಂದಿದ್ದಾಗ, ಕಳ್ಳತನ ಮಾಡುವ ಮನೆ ಗುರುತಿಸಿಕೊಂಡಿದ್ದ. ಮನೆಗೆ ಬೀಗ ಹಾಕಿರುವುದನ್ನು ನೋಡಿಯೇ, ಯಾರೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಕೃತ್ಯ ಎಸಗಿದ್ದ. ಲಾಕ್ಡೌನ್ ಹಿನ್ನೆಲೆಯಲ್ಲಿ ಕದ್ದ ಚಿನ್ನಾಭರಣವನ್ನು ಮಾರಾಟ ಮಾಡಲು ಸಾಧ್ಯವಾಗದೆ ಪತ್ನಿ ಹಾಗೂ ಮಕ್ಕಳಿಗೂ ಗೊತ್ತಾಗದಂತೆ ಮನೆಯಲ್ಲೇ ಬಚ್ಚಿಟ್ಟಿದ್ದ. ಮನೆ ಮೇಲೆ ದಾಳಿ ನಡೆಸಿದಾಗ ಕೃತ್ಯ ಒಪ್ಪಿಕೊಂಡು ಕದ್ದ ಚಿನ್ನಾಭರಣವಿದ್ದ ಬ್ಯಾಗ್ ಒಪ್ಪಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.