ಮಾಜಿ ಮೇಯರ್ ನಾರಾಯಣಸ್ವಾಮಿ ಮನೆಯಲ್ಲಿ ಕಳ್ಳತನ : ಆರೋಪಿಗಳ ಬಂಧನಕ್ಕೆ ಎರಡು ತಂಡ ರಚನೆ

Crime Logo
Published on

ಬೆಂಗಳೂರು: ಮಾಜಿ ಮೇಯರ್ ಆರ್.ನಾರಾಯಣಸ್ವಾಮಿ ಮನೆಯಲ್ಲಿ ಕಳ್ಳತನ ಪ್ರಕರಣದ ಆರೋಪಿಗಳನ್ನು ಬಂಧಿಸಲು ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ.

ನಾರಾಯಣಸ್ವಾಮಿ ಅವರ ಮನೆಯಲ್ಲಿ ಕೆಲಸಕ್ಕಿದ್ದ ಸೆಕ್ಯೂರಿ ಗಾರ್ಡ್ ನೇಪಾಳ ಮೂಲದ ನರಬಹುದ್ದೂರ್ ಶಾಯಿ ಸೇರಿ ಮೂವರು ಸೇರಿ ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯ ವೇಳೆ ಪತ್ತೆಯಾಗಿದೆ. ಆರೋಪಿಗಳ ಪತ್ತೆಗೆ ಎರಡು ಟೀ ರಚಿಸಲಾಗಿದ್ದು, ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದ್ದು ಸದ್ಯದಲ್ಲಿಯೇ ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಜಯನಗರದ ಆರ್‌ಎಂವಿ ೨ನೇ ಹಂತದಲ್ಲಿರುವ ನಾರಾಯಣಸ್ವಾಮಿ ಮನೆಯಲ್ಲಿ ಏ.೧೮ರಂದು ಈ ಘಟನೆ ನಡೆದಿದೆ. ೪ ಲಕ್ಷ ರೂ. ನಗದು, ೯೯.೭೫ ಲಕ್ಷ ರೂ. ಮೌಲ್ಯದ ೧ ಕೆ.ಜಿ.೪೨೫ ಗ್ರಾಂ ತೂಕದ ಚಿನ್ನಾಭರಣಗಳು, ೧೮.೯೨ ಲಕ್ಷ ರೂ. ಮೌಲ್ಯದ ೨೨ ಕೆ.ಜಿ. ಬೆಳ್ಳಿವಸ್ತುಗಳು, ೬.೫೦ ಲಕ್ಷ ರೂ. ಮೌಲ್ಯದ ಮೂರು ವಾಚ್‌ಗಳು ಸೇರಿದಂತೆ ಒಟ್ಟು ೧.೨೯ ಕೋಟಿ ರೂ. ಮೌಲ್ಯದ ಬೆಲೆಬಾಳುವ ವಸ್ತುಗಳು ಕಳ್ಳತನವಾಗಿದೆ. ಈ ಸಂಬಂಧ ಮಾಜಿ ಮೇಯರ್ ನಾರಾಯಣಸ್ವಾಮಿ ನೀಡಿದ ದೂರಿನ ಮೇರೆಗೆ ಸೆಕ್ಯೂರಿ ಗಾರ್ಡ್ ನೇಪಾಳ ಮೂಲದ ನರಬಹುದ್ದೂರ್ ಶಾಯಿ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚುನಾವಣಾ ಪ್ರಚಾರಕ್ಕೆ ತೆರಳಿದ ವೇಳೆ ಕೃತ್ಯ:
ನಾರಾಯಣಸ್ವಾಮಿ ಅವರು ಏ.೧೮ರಂದು ಬೆಳಗ್ಗೆ ೭.೩೦ಕ್ಕೆ ಮನೆಯಿಂದ ಜಾಲಹಳ್ಳಿಗೆ ಚುನಾವಣಾ ಪ್ರಚಾರಕ್ಕೆ ತೆರಳಿದ್ದರು. ಈ ವೇಳೆ ಅವರ ಪತ್ನಿ ಮತ್ತು ಪುತ್ರ ತಮಿಳುನಾಡಿನ ತಿರುವಣ್ಣಾಮಲೈ ದೇವಸ್ಥಾನಕ್ಕೆ ತೆರಳಿದ್ದರು. ಪ್ರಚಾರ ಮುಗಿಸಿ ಮಧ್ಯಾಹ್ನ ೩ ಗಂಟೆಗೆ ಮನೆಗೆ ಬಂದಿರುವ ನಾರಾಯಣಸ್ವಾಮಿ ಊಟ ಮಾಡಿ, ಸೆಕ್ಯೂರಿ ಗಾರ್ಡ್ ನರಬಹುದ್ದೂರ್ ಶಾಯಿಗೂ ಊಟ ನೀಡಿದ್ದಾರೆ. ನಂತರ ಮನೆಗೆ ಬೀಗ ಹಾಕಿಕೊಂಡು ಮಧ್ಯಾಹ್ನ ೩.೩೦ಕ್ಕೆ ನಾರಾಯಣಸ್ವಾಮಿ ಮತ್ತೆ ಚುನಾವಣಾ ಪ್ರಚಾರಕ್ಕೆ ತೆರಳಿದ್ದಾರೆ. ಚುನಾವಣಾ ಪ್ರಚಾರ ಮುಗಿಸಿಕೊಂಡು ರಾತ್ರಿ ೮ ಗಂಟೆಗೆ ಮನೆಗೆ ವಾಪಾಸ್ ಬಂದಾಗ, ಮನೆಯ ಹಿಂಬದಿ ಬಾಗಿಲು ತೆರೆದಿರುವು ಕಂಡು ಬಂದಿದೆ. ಈ ವೇಳೆ ಸೆಕ್ಯೂರಿಟಿ ನರಬಹುದ್ದೂರ್ ಶಾಯಿಯನ್ನು ಕರೆದಿದ್ದು, ಆತ ಎಲ್ಲಿಯೂ ಕಂಡು ಬಂದಿಲ್ಲ. ಆತನ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಬಂದಿದೆ.

ಮನೆಯ ಒಳಗೆ ತೆರಳಿ ನೋಡಿದಾಗ ಮನೆಯ ಮೂರು ರೂಮ್‌ನ ವಾರ್ಡ್‌ರೂಬ್‌ಗಳು ತೆರೆದಿದ್ದು, ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಂದ್ದಿರುವುದು ಕಂಡು ಬಂದಿದೆ. ವಾರ್ಡ್‌ರೂಬ್‌ನಲ್ಲಿ ಇರಿಸಿದ್ದ ನಗದು, ಚಿನ್ನಾಭರಣಗಳು, ಬೆಳ್ಳಿವಸ್ತುಗಳು ಸೇರಿದಂತೆ ಬೆಲೆಬಾಳುವಸ್ತುಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ನಾಪತ್ತೆಯಾಗಿರುವ ಸೆಕ್ಯೂರಿಗಾರ್ಡ್ ನರಬಹುದ್ದೂರ್ ಶಾಯಿಯೇ ಕಳ್ಳತನ ಮಾಡಿದ್ದಾನೆ ಎಂದು ಶಂಕಿಸಿ ದೂರು ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net