

ಶಿವಮೊಗ್ಗ: ತೀರ್ಥಹಳ್ಳಿ ಉಪ ವಿಭಾಗದ ಡಿವೈಎಸ್ಪಿ ಆಗಿ ಗಜಾನನ ವಾಮನ ಸುತಾರ್ ಅವರನ್ನು ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರ ಹಾಲಿ ಡಿವೈಎಸ್ಪಿ ಈ.ಶಾಂತವೀರ ಅವರನ್ನು ಬಾಗಲಕೋಟೆ ಜಿಲ್ಲೆ ಜಮಖಂಡಿ ಉಪವಿಭಾಗದ ಡಿವೈಎಸ್ಪಿ ಆಗಿ ವರ್ಗಾವಣೆ ಮಾಡಿದೆ.
ಸಿಐಡಿಯಲ್ಲಿ ಪ್ರೊಬೇಷನರಿ ಡಿವೈಎಸ್ಪಿ ಆಗಿದ್ದ ಗಜಾನನ ಸುತಾರ್ ಅವರು ಸಹ ಶಿವಮೊಗ್ಗ ಜಿಲ್ಲೆಯ ಹಲವು ಪೊಲೀಸ್ ಠಾಣೆಯಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಕುಂಸಿ, ಭದ್ರಾವತಿ, ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆ, ವಿನೋಬನಗರದಲ್ಲಿ ಮೊದಲಾದ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿ ಬೆಂಗಳೂರಿನ ಸಿಐಡಿಗೆ ಪ್ರೊಬೇಷನರಿ ಡಿವೈಎಸ್ಪಿ ಆಗಿ ವರ್ಗಾವಣೆಗೊಂಡಿದ್ದರು.
ಅತ್ಯುತ್ತಮ ಸೇವೆ ಸಲ್ಲಿದ ಡಿವೈಎಸ್ಪಿ ಶಾಂತವೀರ ಶಂಕಿತ ಉಗ್ರರ ಪ್ರಕರಣದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ ಅಪರಾಧಿ ಲೋಕದವರಿಗೆ ಸಿಂಹಸ್ವಪ್ನವಾಗಿದ್ದರು. ಭದ್ರಾವತಿ ಡಿವೈಎಸ್ಪಿ ಜೀತೇಂದ್ರ ಕುಮಾರ್ ದಯಾಮ ದಾಖಲಿಸಿದ ಎಫ್‌ಐಆರ್ ಬೆನ್ನು ಹತ್ತಿದ ಡಿವೈಎಸ್ಪಿ ಶಾಂತವೀರ್ ತೀರ್ಥಹಳ್ಳಿಯಲ್ಲಿ ಮಾಜ್ ಮುನೀರ್‌ನನ್ನು ಬಂಧಿಸಿದ್ದರು. ನಂತರ ಮಂಗಳೂರಿನಲ್ಲಿ ಸಂಭವಿಸಿದ ಕುಕ್ಕರ್ ಬ್ಲಾಸ್ಟ್ ಘಟನೆಯಲ್ಲಿ ಆರೋಪಿಯ ಗುರುತು ಪತ್ತೆಹಚ್ಚುವಲ್ಲಿಯೂ ಸಹ ಶಾಂತವೀರ ಅವರ ಪಾತ್ರ ದೊಡ್ಡದಾಗಿತ್ತು.