ಸಹೃದಯರು ಇರುವವರೆಗೆ ರಂಗಕಲೆ ಜೀವಂತ: ಬೆಳವಾಡಿ

belavadi
ಬಹುಮುಖಿ ಸಂಘಟನೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಕಾಶ್ ಬೆಳವಾಡಿ ರಂಗಭೂಮಿ-ತಂತ್ರಜ್ಞಾನ ಎಂಬ ವಿಷಯ ಕುರಿತು ಮಾತನಾಡಿದರು.
Published on

ಶಿವಮೊಗ್ಗ: ತಂತ್ರಜ್ಞಾನದ ಪರಿಣಾಮವಾಗಿ ರಂಗಭೂಮಿ ಸವಾಲು ಎದುರಿಸುತ್ತಿರುವುದು ಹೌದಾದರೂ ಸಹೃದಯ ಪ್ರೇಕ್ಷಕರು ಇರುವವರೆಗೂ ನಾಟಕ ಕಲೆಗೆ ಸಾವಿಲ್ಲ ಎಂದು ರಂಗಕರ್ಮಿ, ಚಿತ್ರನಟ ಪ್ರಕಾಶ್ ಬೆಳವಾಡಿ ಅಭಿಪ್ರಾಯಪಟ್ಟರು.

ಬಹುಮುಖಿ ಸಂಘಟನೆ ಬುಧವಾರ ಏರ್ಪಡಿಸಿದ್ದ 50ನೇ ಕಾರ್ಯಕ್ರಮದಲ್ಲಿ ರಂಗಭೂಮಿ-ತಂತ್ರಜ್ಞಾನ ವಿಷಯ ಕುರಿತು ಮಾತನಾಡಿದ ಅವರು, ತಂತ್ರಜ್ಞಾನ ಅನೇಕ ರಂಗಗಳ ಮೇಲೆ ಅನುಕೂಲ ಹಾಗೂ ಪ್ರತಿಕೂಲ ಪರಿಣಾಮ ಬೀರಿರುವುದು ವಾಸ್ತವ. ಇದಕ್ಕೆ ರಂಗಭೂಮಿಯೂ ಹೊರತಾಗಿಲ್ಲ ಎಂದರು.

ಸಿನಿಮಾ ಏಕಕಾಲದಲ್ಲಿ ಸಾವಿರಾರು ಪರದೆಗಳ ಮೇಲೆ ಪ್ರದರ್ಶನ ಆಗಬಹುದು. ಆದರೆ ನಾಟಕ ಮಾತ್ರ ಹೆಚ್ಚು ಸ್ಥಳೀಯ ಎನಿಸುತ್ತದೆ. ಇಲ್ಲಿ ಕಲಾವಿದ ಹಾಗೂ ಪ್ರೇಕ್ಷಕನ ನಡುವೆ ಒಂದು ಬಾಂಧವ್ಯ ಮೂಡಿರುತ್ತದೆ. ಜತೆಗೆ ಅದೇ ಪ್ರದೇಶದವರು ಕಲಾವಿದರಾಗುವ ಕಾರಣದಿಂದ ಹೆಚ್ಚು ಆಪ್ತವಾಗುತ್ತದೆ ಎಂದು ಹೇಳಿದರು.

ತಂತ್ರಜ್ಞಾನ ಎಂಬುದು ಎಂದಿಗೂ ದುಬಾರಿ. ಅದನ್ನು ಅಳವಡಿಸಿಕೊಳ್ಳಲು ಹೆಚ್ಚಿನ ಹಣ ಅವಶ್ಯ. ಹೀಗಾಗಿ ಸಿನಿಮಾಕ್ಕೆ ಮಾಡುವ ಖರ್ಚು ಸಹ ಹೆಚ್ಚಿರುತ್ತದೆ. ಆದರೆ ನಾಟಕ ಕಲೆಗೆ ಹೆಚ್ಚಿನ ತಂತ್ರಜ್ಞಾನದ ಅವಶ್ಯಕತೆಯಿಲ್ಲ. ತಂತ್ರಜ್ಞಾನದ ಹೊರತಾಗಿಯೂ ಉತ್ತಮ ನಾಟಕ ಮೂಡಿಬರಲು ಸಾಧ್ಯವಿದೆ ಎಂದು ತಿಳಿಸಿದರು.

ಸಿನಿಮಾ ಏಕಕಾಲಕ್ಕೆ ಸಾವಿರಾರು ಸ್ಕ್ರೀನ್‌ಗಳಲ್ಲಿ ಹತ್ತಾರು ದೇಶಗಳಲ್ಲಿ ಪ್ರದರ್ಶನಗೊಂಡು ಅದರ ಬಗ್ಗೆ ವಿಮರ್ಶೆ ಪ್ರಕಟವಾಗುವ ಮುನ್ನವೇ ಕೋಟ್ಯಂತರ ರೂ. ಗಳಿಸಿ ಬಿಡುತ್ತದೆ. ಆದರೆ ನಾಟಕ ಏಕಕಾಲದಲ್ಲಿ ಹತ್ತಾರು ಕಡೆಗಳಲ್ಲಿ ಪ್ರದರ್ಶನಗೊಳ್ಳುವುದು ಸಾಧ್ಯವಾಗುವುದೂ ಇಲ್ಲ. ಅದರಲ್ಲೂ ವಿಮರ್ಶಕರ ಕೈಗೆ ನಾಟಕ ಸಿಲುಕಿ ನಷ್ಟ ಅನುಭವಿಸುವ ಅಪಾಯವೇ ಹೆಚ್ಚು ಎಂದರು.

ಉಪನ್ಯಾಸಕ, ಬಹುಮುಖಿ ಸಂಘಟಕ ಪ್ರೊ.ಎಚ್.ಎಸ್.ನಾಗಭೂಷಣ ಅತಿಥಿಗಳನ್ನು ಪರಿಚಯಿಸಿ ಬಹುಮುಖಿಯ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net