ಅರಸು ಜನಾಂಗದ ಅಭಿವೃದ್ಧಿಗೆ ಯುವಕರು ಮುಂದಾಗಬೇಕು

1
Published on

ಮೈಸೂರು: ಮೆಕ್ರೋ ಕೂಡ ಅಲ್ಲದ ನ್ಯಾನೋ ಕಮ್ಯೂನಿಟಿ ಆಗಿರುವ ಅರಸು ಜನಾಂಗದ ಅಭಿವೃದ್ಧಿಗೆ ಯುವಕರು ಮುಂದಾಗಬೇಕು ಎಂದು ಕಪ್ಪಡಿ, ಮಳವಳ್ಳಿ ಹಾಗೂ ಹೊನ್ನಾಯಕನಹಳ್ಳಿಯ ಪೀಠಾಧಿಪತಿ ಶ್ರೀ ವರ್ಚಸ್ವಿ ಶ್ರೀಕಂಠಸಿದ್ದಲಿಂಗರಾಜೇ ಅರಸ್ ಕರೆ ನೀಡಿದರು.

ಕರ್ನಾಟಕ ಅರಸು ಮಹಾಮಂಡಲಿ ಚಾರಿಟಬಲ್ ಟ್ರಸ್ಟ್ ವತಿಯಿಂದ ತ್ಯಾಗರಾಜ ರಸ್ತೆಯ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಚಾಮರಾಜೇಂದ್ರ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಜನ್ಮೋತ್ಸವ, ಯಶೋಗಾಥೆ- ಅರಸು ಜನಾಂಗದ ಸಾಧಕರು ಕೃತಿ ಬಿಡುಗಡೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಅರಸು ಜನಾಂಗದವರು ಬೆಂಗಳೂರು, ಮೆಸೂರು ಎಲ್ಲ ಸೇರಿ 50 ರಿಂದ 60 ಸಾವಿರ ಮಂದಿ ಇರಬಹುದು ಅಷ್ಟೇ. ಹೀಗಾಗಿ ನಾವು ಸೂಕ್ಷ್ಮ್ಮಾತಿಸೂಕ್ಷ್ಮ ವರ್ಗಕ್ಕೂ ಬರುವುದಿಲ್ಲ. ನ್ಯಾನೋ ಕಮ್ಯೂನಿಟಿಯಂತೆ ಇದ್ದೇವೆ. ಇಂತಹ ಜನಾಂಗದ ಬೆಳವಣಿಗೆಗೆ ಡಿ. ದೇವರಾಜ ಅರಸು ಕಾರಣ ಎಂದು ಅವರು ಹೇಳಿದರು.

ಆದರೆ ಇತ್ತೀಚೆಗೆ ಯುವಕರು ಜನಾಂಗದ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿಲ್ಲ.ಇನ್ನು ಮುಂದಾದರೂ ಹಿರಿಯರ ಮಾರ್ಗದರ್ಶನದಲ್ಲಿ ಈ ಕೆಲಸ ಮಾಡಬೇಕು ಎಂದು ಅವರು ಸಲಹೆ ಮಾಡಿದರು.

ಕೇವಲ ಆಸ್ತಿ, ಹಣದಿಂದಲೇ ಎಲ್ಲವೂ ಆಗುವುದಿಲ್ಲ. ಜನಾಂಗದಲ್ಲಿ ಒಗ್ಗಟ್ಟು, ಉತ್ತಮ ಸಂಪರ್ಕ ಮುಖ್ಯ. ಅಮೆರಿಕಾ, ಯುರೋಪ್ ಮತ್ತಿತರ ದೇಶಗಳಲ್ಲೂ ಅರಸು ಜನಾಂಗದವರು ಇದ್ದಾರೆ. ಅವರನ್ನು ಸೇರಿದಂತೆ ಎಲ್ಲರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕಿಸಬೇಕು ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net