

ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಇಡೀ ಜಗತ್ತಿಗೆ ತಲುಪಬೇಕು ಎಂಬ ಉದ್ದೇಶದಿಂದ ಸಂವಿಧಾನ ಪೀಠಿಕೆ ಓದನ್ನು ರಾಜ್ಯದಲ್ಲಿ ಕಡ್ಡಾಯಗೊಳಿಸಲಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ತಿ.ನರಸೀಪುರ ಪಟ್ಟಣದ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘ ಹಾಗೂ ಸೇವಾ ಸಂಸ್ಥೆ ಆವರಣದಲ್ಲಿ ಶನಿವಾರ ಸಂಸ್ಥೆಯ ತರಬೇತಿ ಕಟ್ಟಡ ಲೋಕಾರ್ಪಣೆ ಮತ್ತು ಸಹಕಾರ ಸಂಘದ ಸೂಪರ್ ಮಾರ್ಕೆಟ್ ಕಟ್ಟಡದ ಭೂಮಿ ಪೂಜೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನ ಪೀಠಿಕೆಯನ್ನು ಓದಿದರೆ ಯಾರೊಬ್ಬರೂ ಆಕ್ಷೇಪ ವ್ಯಕ್ತಪಡಿಸಲ್ಲ. ಸಂವಿಧಾನದ ಮಹತ್ವ ಯುವ ಜನತೆಯ ತಲೆಗೆ ಹೋಗಬೇಕು ಎಂದರು.
ಪ್ರಜಾಪ್ರಭುತ್ವ ರಾಷ್ಟ್ರಗಳು ವಿಶ್ವಸಂಸ್ಥೆ ಸಹಭಾಗಿತ್ವದಲ್ಲಿ ಸೆ.15ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸುವ ಹಿನ್ನೆಲೆ ಸಂವಿಧಾನ ಪೀಠಿಕೆಯನ್ನು ರಾಜ್ಯದಾದ್ಯಂತ ಓದಿಸಲಾಯಿತು. ದೇಶ ವಿದೇಶಗಳು ಸೇರಿದಂತೆ ಎರಡೂವರೆ ಕೋಟಿ ಜನರು ಆನ್‌ಲೈನ್ ನೋಂದಣಿ ಮಾಡಿಕೊಂಡು ಸಂವಿಧಾನದ ಪೀಠಿಕೆ ಓದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು.
ಅಂಬೇಡ್ಕರ್ ಹೆಸರಿನಲ್ಲಿ ಆರಂಭಗೊಂಡಿರುವ ಸಹಕಾರ ಸಂಘ ಹಾಗೂ ಸೇವಾ ಸಂಸ್ಥೆ 2012ರಿಂದಲೇ ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯ ಆರಂಭಿಸಿದೆ. ಮುಖ್ಯಮಂತ್ರಿಗಳ ಜತೆಗೆ ಸಂಸ್ಥೆಯ ಬೆೇಡಿಕೆಗಳನ್ನು ಈಡೇರಿಸಲು ಬದ್ಧನಾಗಿದ್ದೇನೆ ಎಂದು ಭರವಸೆ ನೀಡಿದ ಸಚಿವರು, ದಲಿತ ಸಮುದಾಯ ಸ್ವಾಭಿಮಾನದ ಬದುಕನ ನಡೆಸಲು ಪೂರಕವಾಗಿ ಕಾರ್ಯಕ್ರಮಗಳನ್ನ ರೂಪಿಸಲು ನನ್ನ ಅಧಿಕಾರದ ಅವಧಿಯಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ತಾಲೂಕು ಕೇಂದ್ರದಿಂದ ರಾಜ್ಯ ವ್ಯಾಪ್ತಿ ವಿಸ್ತಾರಗೊಳ್ಳುತ್ತಿರುವ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘ ಹಾಗೂ ಯುವ ಸಂಸ್ಥೆಯ ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಅಗತ್ಯ ನೆರವು ಒದಗಿಸಲು ರಾಜ್ಯ ಸರ್ಕಾರ ಬದ್ಧವಿದೆ. ಮೈಸೂರಿನಲ್ಲಿ ನಿವೇಶನ ಮತ್ತು ಅನುದಾನ ಕೋರಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘ ಹಾಗೂ ಸೇವಾ ಸಂಸ್ಥೆ ಅಧ್ಯಕ್ಷ ತುಂಬಲ ರಾಮಣ್ಣ ಮಾತನಾಡಿ, ರಾಜ್ಯ ಸರ್ಕಾರದ ಅನುದಾನದಲ್ಲಿಯೇ ಅಭಿವೃದ್ಧಿಗೊಳ್ಳುವ ಪ್ರತಿಷ್ಠಿತ ಸಂಸ್ಥೆಗಳ ಆಸ್ತಿಗಳನ್ನ ಆಯಾಯ ಸಮುದಾಯಗಳ ಸುಪರ್ದಿಗೆ ನೀಡುವಂತೆ ರಾಜ್ಯದಲ್ಲಿರುವ ಅಂಬೇಡ್ಕರ್ ಸಮುದಾಯ ಭವನಗಳ ಒಡೆತನವನ್ನು ದಲಿತರಿಗೆ ನೀಡಬೇಕು. ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ 50 ಲಕ್ಷ ರೂ. ಅನುದಾನದಲ್ಲಿ ಸೂಪರ್ ಮಾರ್ಕೆಟ್ ನಿರ್ಮಾಣ ಮಾಡಲಾಗುತ್ತಿದ್ದು, ಹೆಚ್ಚುವರಿಯಾಗಿ 2 ಕೋಟಿ ರೂ.ಗಳನ್ನು ಸಚಿವರು ನೀಡಬೇಕು. ಜಿಲ್ಲಾ ಕೇಂದ್ರ ಮೈಸೂರು ನಗರದಲ್ಲಿ 10 ಎಕರೆ ನಿವೇಶನ ಹಾಗೂ 10 ಕೋಟಿ ರೂ. ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಬೇಕು ಎಂದು ಮನವಿ ಸಲ್ಲಿಸಿದರು.
ಉರಿ ಪೆದ್ದಿಲಿಂಗ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ನಳಂದ ಬುದ್ಧ ವಿಹಾರದ ಬೋಧಿರತ್ನ ಬಂತೇಜಿ, ಮಾಜಿ ಮೇಯರ್ ಪುರುಷೋತ್ತಮ್, ದಲಿತ ಚಳವಳಿ ನಾಯಕರಾದ ಗೋಪಾಲ್, ಮಾವಳ್ಳಿ ಶಂಕರ್ ಹಾಗೂ ಬಿಎಸ್‌ಪಿ ರಾಜ್ಯ ಸಂಯೋಜಕ ಎಂ.ಕೃಷ್ಣಮೂರ್ತಿ ಮಾತನಾಡಿದರು.
ಬೌದ್ಧ ಭಿಕ್ಕುಗಳಾದ ಬೋಧಿದತ್ತ, ಸುಗತಪಾಲ್ ಬಂತೇಜಿ, ಕರ್ನಾಟಕ ಎಸ್‌ಸಿ, ಎಸ್‌ಟಿ ಗ್ರಾಜುಯೇಟ್ಸ್ ಅಸೋಸಿಯೇಷನ್ ಅಧ್ಯಕ್ಷ ಎಂ.ಸುರೇಶ್ ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಎಸ್.ಎನ್.ಸಿದ್ದಾರ್ಥ, ಮಾಜಿ ಸದಸ್ಯ ಜೆ.ಅಚ್ಯುತಾನಂದ , ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ, ಎಸ್‌ಸಿ, ಎಸ್‌ಟಿ ಹಿತರಕ್ಷಣಾ ಸಮಿತಿ ಸದಸ್ಯ ಸೋಸ್ಲೆ ಮಹದೇವಸ್ವಾಮಿ, ವಕೀಲ ಜಗದೀಶ್, ನಾಗಯ್ಯ ಹಾಗೂ ಮತ್ತಿತರರು ಹಾಜರಿದ್ದರು.