ದುಶ್ಚಟಕ್ಕೆ ದಾಸರಾಗುತ್ತಿರುವ ಯುವಜನತೆ

sahyadri
ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಪೊಲೀಸ್ ಇಲಾಖೆಯಿಂದ ಬುಧವಾರ ಏರ್ಪಡಿಸಿದ್ದ ಮಾದಕ ವಸ್ತು ವಿರೋಧಿ ದಿನಾಚರಣೆಯನ್ನು ಜಿ.ಕೆ.ಮಿಥುನ್‌ಕುಮಾರ್ ಉದ್ಘಾಟಿಸಿದರು. ಡಾ. ಕೆ.ಎನ್.ಮಂಜುನಾಥ್, ಅನಿಲ್‌ಕುಮಾರ್ ಭೂಮರಡ್ಡಿ, ಸೈಯದ್ ಸನಾವುಲ್ಲಾ ಇದ್ದರು.
Published on

ಶಿವಮೊಗ್ಗ: ಇತ್ತೀಚಿನ ವರ್ಷಗಳಲ್ಲಿ ಯುವಜನತೆ ಮಾದಕ ವಸ್ತುಗಳತ್ತ ಆಕರ್ಷಿತರಾಗುತ್ತಿದ್ದು, ಕುತೂಹಲಕ್ಕಾಗಿ ಮಾದಕ ವಸ್ತುಗಳ ಚಟವನ್ನು ಅಂಟಿಸಿಕೊಂಡು ನಂತರ ಅದಕ್ಕೆ ದಾಸರಾಗಿ ಭವಿಷ್ಯ ಹಾಳುಮಾಡಿಕೊಳ್ಳುತ್ತಿದ್ದಾರೆ ಎಂದು ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಹೇಳಿದರು.

ಜಿಲ್ಲಾ ಪೊಲೀಸ್ ಇಲಾಖೆಯಿಂದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಜನರು ಮಾದಕ ವಸ್ತುಗಳಿಂದ ದೂರವಿದ್ದು, ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಆದರೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವಸ್ತುಗಳ ಗೀಳಿಗೆ ಬೀಳುತ್ತಿರುವುದು ದುರದೃಷ್ಟಕರ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಮಾದಕ ವಸ್ತುಗಳ ವಿರುದ್ಧ ಜಾಗೃತರಾಗಬೇಕು. ಪೊಲೀಸ್ ಇಲಾಖೆ ಜತೆಗೆ ಪಾಲಕರು, ಶಿಕ್ಷಕರು, ಸಂಘ ಸಂಸ್ಥೆಗಳು ಸೇರಿ ಮಾದಕ ವಸ್ತುಗಳ ವಿರುದ್ಧ ಸಮರ ಸಾರಿದಾಗ ತಡೆಯಲು ಸಾಧ್ಯ. ಯಾರಾದರೂ ದುಶ್ಚಟಕ್ಕೆ ಬಲಿಯಾದವರು ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.
ಎಎಸ್‌ಪಿ ಅನಿಲ್‌ಕುಮಾರ್ ಭೂಮರಡ್ಡಿ ಮಾತನಾಡಿ, ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದ್ದು, ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದವರು ಗಾಂಜಾ ಬೆಳೆದ ನಿದರ್ಶನವಿದೆ. ವಿದ್ಯಾವಂತರೇ ಮಾದಕ ವ್ಯಸನಿಗಳಾಗಿ ಸಮಾಜಕ್ಕೆ ಕಂಟಕವಾಗುತ್ತಿದ್ದಾರೆ. ಸಮಾಜದ ಹಿತ ಕಾಪಾಡುವವರೇ ಈ ರೀತಿಯಾದರೆ ಭವಿಷ್ಯದ ಗತಿ ಏನು ಎಂದು ಪ್ರಶ್ನಿಸಿದರು.
ಕಾಲೇಜಿನ ಪ್ರಾಚಾರ್ಯ ಸೈಯದ್ ಸನಾವುಲ್ಲಾ, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಕೆ.ಎನ್.ಮಂಜುನಾಥ್, ಡಿವೈಎಸ್‌ಪಿ ಬಾಬು ಅಂಜನಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net