ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಯುವತಿಗೆ ನಿಂದನೆ: ಚಾಲಕನ ಬಂಧಿಸಿದ ಪೊಲೀಸರು

Arrest Kaidhi
Published on

ಬೆಂಗಳೂರು: ಆಟೋ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಕೋಪಗೊಂಡು ಯುವತಿಯನ್ನ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆರೋಪಡಿ ಆಟೋ ಚಾಲಕನೊಬ್ಬನನ್ನು ಮಾಗಡಿರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಲಸಂದ್ರ ನಿವಾಸಿ ಮುತ್ತುರಾಜ್ ಬಂಧಿತ ಆರೋಪಿ.
ಮಾಗಡಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಜ್‌ಕುಮಾರ್ ರಸ್ತೆಯಲ್ಲಿ ಸೆ.೨ರಂದು ಈ ಘಟನೆ ನಡೆದಿದೆ. ಯುವತಿ ಹಾಗೂ ಆಕೆಯ ಸ್ನೇಹಿತೆ ಇಬ್ಬರೂ ಓಲಾ ಆಟೋವನ್ನು ಬುಕ್ ಮಾಡಿದ್ದರು. ಸಕಾಲಕ್ಕೆ ಆಟೋ ಬಾರದ ಹಿನ್ನೆಲೆ ಯುವತಿ ಮತ್ತೊಂದು ಆಟೋವನ್ನು ಬುಕ್ ಮಾಡಿದ್ದಳು. ಆ ಆಟೋ ಮುಂಚಿತವಾಗಿ ಬಂದಿದ್ದು ಆ ಆಟೋವನ್ನು ಹತ್ತಿದ್ದ ಯುವತಿ, ಈ ಹಿಂದೆ ಬುಕ್ ಮಾಡಿದ್ದ ಆಟೋವನ್ನು ರದ್ದು ಮಾಡಿದ್ದಳು. ಇದನ್ನು ಗಮನಿಸದ ಆಟೋ ಚಾಲಕ ಯುವತಿ ಇದ್ದ ಆಟೋವನ್ನು ಹಿಂಬಾಲಿಸಿ ಆಟೋ ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾನೆ. ಪೊಲೀಸರಿಗೆ ದೂರು ನೀಡುತ್ತೇವೆ ಎಂದಾಗಲೂ ಆಯ್ತು ನಡಿ ಪೊಲೀಸ್ ಠಾಣೆಗೆ ಹೋಗೋಣ ಅಂತಾ ಬೆದರಿಸಿದ್ದಾನೆ. ಇನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ವಿಡಿಯೋವನ್ನು ಮಾಡಿಕೊಂಡಿದ್ದ ಯುವತಿ, ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡು ಬೆಂಗಳೂರು ನಗರ ಪೊಲೀಸರಿಗೆ ಟ್ಯಾಗ್ ಮಾಡಿದ್ದಳು. ಘಟನೆ ಬೆಳಕಿಗೆ ಬರುತ್ತಿದ್ದಂತೆ ಪರಿಶೀಲಿಸಿದ ಪೊಲೀಸರು, ಆಟೋ ಚಾಲಕ ಮುತ್ತುರಾಜ್ ಕರೆಯಿಸಿ ವಿಚಾರಣೆ ನಡೆಸಿ ಬಳಿಕ ಬಂಧಿಸಿದ್ದಾರೆ. ಯುವತಿಗೂ ಪೊಲೀಸರು ನೊಟಿಸ್ ನೀಡಿ ವಿಚಾರಣೆಗೆ ಬರಲು ಸೂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಾಲಕ ನಿಂದಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷಿತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇದರ ಬೆನ್ನಲ್ಲೆ ಆಟೋ ಚಾಲಕನನ್ನು ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net