

ಬೆಂಗಳೂರು: ವಾಯು ವಿಹಾರ ಮಾಡುತ್ತಿದ್ದ ಯುವತಿ ಬಳಿ ನಾಯಿ ಹೆಸರು ಕೇಳಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಈಜಿಪುರ ನಿವಾಸಿ ವಿಕ್ಟರ್ ಆಲ್ಫನ್ ರಾಜ್ (20) ಬಂಧಿತ. ಸಂತ್ರಸ್ತ 20 ವರ್ಷದ ಯುವತಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಕೊಂಡು ವಿಕ್ಟರ್‌ನನ್ನು ಬಂಧಿಸಿ ಕೋರ್ಟ್‌ಗೆ ಹಾಜರು ಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿ.23ರ ಸಂಜೆ 7.30ರಲ್ಲಿ ಕೋರಮಂಗಲದ ಸೆಟ್ ಬೆಡ್ ರಸ್ತೆಯಲ್ಲಿ ಯುವತಿ, ನಾಯಿ ಹಿಡಿದು ವಾಕಿಂಗ್ ಮಾಡುತ್ತಿದ್ದಳು. ಹಿಂಬಾಲಿಸಿ ಬಂದ ಯುವಕ, ಆಕೆಯನ್ನು ಅಡ್ಡಗಟ್ಟಿ ನಿನ್ನ ಹೆಸರು ಏನು ಎಂದು ಕೇಳಿದ್ದಾನೆ. ಅದಕ್ಕೆ, ಮೌನವಾಗಿ ಮುಂದೆ ಸಾಗಿದ್ದಾಳೆ. ಮತ್ತೆ ಹತ್ತಿರ ಹೋದ ಯುವಕ, ಹೋಗಲಿ ನಿನ್ನ ನಾಯಿ ಹೆಸರು ಆದರೂ ಹೇಳುವಂತೆ ಕೇಳಿದ್ದಾನೆ. ಇದರಿಂದ ಬೇಸರಗೊಂಡ ಯುವತಿ, ಹತ್ತಿರದಲ್ಲಿಯೇ ಇದ್ದ ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದಾಳೆ.
ಅವರು ಸಹಾಯಕ್ಕೆ ಬಂದು ವಿಕ್ಟರ್‌ನನ್ನು ಹಿಡಿದು ಪ್ರಶ್ನಿಸಿದ್ದಾರೆ. ಅಷ್ಟೊತ್ತಿಗೆ ಯುವತಿ, ತನ್ನ ತಂದೆಯೂ ದೂರು ನೀಡಿದ್ದಳು. ಸ್ಥಳಕ್ಕೆ ಬಂದು ಸಂತ್ರಸ್ತೆ ತಂದೆ ಆರೋಪಿಯನ್ನು ಕೇಳಿದಾಗ ಮಾತಿಗೆ ಮಾತು ಬೆಳೆದಿದೆ. ವಿಕೋಪಕ್ಕೆ ತಿರುಗಿ ಆರೋಪಿ, ಯುವತಿಯ ತಂದೆ ಮೇಲೆ ಹಲ್ಲೆ ನಡೆಸಿದ್ದ. ನೊಂದ ಸಂತ್ರಸ್ತೆ ತಂದೆ, ದೂರು ಸಲ್ಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.