ಜಗತ್ತಿಗೆ ಈಗ ಬೇಕಿರುವುದು ಯುದ್ಧ ಅಲ್ಲ, ಬುದ್ಧ...

ವಿಶೇಷ ಅಂಕಣ
ವಿಶೇಷ ಅಂಕಣ
Published on
ನಮ್ಮದು ಮೌಲ್ಯಾಧಾರಿತ ಚಿಂತನೆಗಳಿಗೆ ಕಳಸವಿಟ್ಟಂತೆ ಮಾನವೀಯ ಅನುಕಂಪ ಸಮಾನತೆಯೊಂದಿಗೆ ಸಹಬಾಳ್ವೆ ಮತ್ತು ವೈಜ್ಞಾನಿಕ ಚಿಂತನೆಯ ಅಗತ್ಯಗಳನ್ನು ಒತ್ತಿ ಹೇಳಿ, ಜಡತೆಯತ್ತ ಸಾಗುತ್ತಿದ್ದವರನ್ನು ಬಡಿದೆಬ್ಬಿಸಿದ್ದು ಭಗವಾನ್ ಗೌತಮ ಬುದ್ಧರ ವಿಶ್ವಚೈತನ್ಯಮಯ ಚಿಂತನೆಗಳು. ಶಾಂತಿ, ಸ್ನೇಹ, ಸಹಬಾಳ್ವೆ ಮತ್ತು ಜೀವಕಾರುಣ್ಯಗಳನ್ನು ಆದರ್ಶ ಮೌಲ್ಯಗಳೆಂದು ಬೋಧಿಸಿ ಇಡೀ ಜಗತ್ತಿಗೆ ಹೊಸ ಕಾಣಿಕೆ ನೀಡಿದ್ದು ಬುದ್ಧ. ಬುದ್ಧ ಬದುಕಿದ್ದ ಕಾಲದಲ್ಲಿ ಕೋಲಿಯನ್ನರು ಮತ್ತು ಶಾಕ್ಯರ ನಡುವೆ ರೋಹಿಣಿ ನದಿ ನೀರಿಗಾಗಿ ವ್ಯಾಜ್ಯ ತಲೆದೋರಿ ಶಾಕ್ಯರು ಕೋಲಿಯನ್ನರ ಮೇಲೆ ಯುದ್ಧ ಸಾರುವ ಕುರಿತು ಸಂಘದ ಸಭೆಯಲ್ಲಿ ಚರ್ಚೆ ನಡೆದಿದ್ದು ನೋಡಿ ‘ನೀರಿಗಾಗಿ ಯುದ್ಧ ಬೇಡ. ಯುದ್ಧ ಸೌಹಾರ್ದ ಸಮಾಜದ ಬದುಕಿಗೆ ಮಾರಕವಾದದ್ದು. ಅದನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಲ್ಲ’ ಎಂದು ಸಿದ್ಧಾರ್ಥ ವಾದಿಸುತ್ತಾನೆ. 
ಇದರಿಂದ ಕುಪಿತರಾದ ಸಿದ್ಧಾರ್ಥನ ದಾಯಾದಿಗಳು ‘ನೋಡು ಸಿದ್ಧಾರ್ಥ, ಕ್ಷತ್ರಿಯನಾದವನು ಕತ್ತಿ ಹಿಡಿದು ಯುದ್ಧ ಮಾಡಬೇಕು. ನೀನು ಯುದ್ಧ ಮಾಡಲು ಒಪ್ಪದಿದ್ದರೆ ನಿನ್ನ ತಾಯಿ-ತಂದೆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು, ಮೇಲಾಗಿ ಅವರಿಗೆ ಸಮಾಜದಿಂದ ಬಹಿಷ್ಕಾರ ಹಾಕಬೇಕಾಗುತ್ತದೆ’ ಎಂದು ಹೇಳಿದಾಗ, ಸಿದ್ಧಾರ್ಥ ಗೌತಮನು ‘ಯುದ್ಧ ವಿರೋಧಿಸಿದವ ನಾನು. ನೀವು ಶಿಕ್ಷೆ ನನಗೆ ವಿಧಿಸಬೇಕೇ ವಿನಃ ನನ್ನ ಹೆತ್ತವರು ಅಥವಾ ಒಡಹುಟ್ಟಿದವರಿಗೆ ಯಾಕೆ’ ಎಂದು ಪ್ರಶ್ನಿಸುತ್ತಾನೆ. ಆಗ ‘ಕೋಸಲ ರಾಜನ ಅನುಮತಿ ಇಲ್ಲದೆ ನಿನ್ನನ್ನು ಗಡಿಪಾರು ಮಾಡಲು ಆಗುವುದಿಲ್ಲ, ಮಾಡುವುದೇನು’ ಎಂದು ಸಂಘದ ಎಲ್ಲರೂ ಚಿಂತಿತರಾಗುತ್ತಾರೆ. ಆಗ ಸಿದ್ಧಾರ್ಥ ‘ನನ್ನಲ್ಲಿ ಒಂದು ಉಪಾಯವಿದೆ’ ಎನ್ನುತ್ತಾನೆ. ‘ಅದೇನು ಹೇಳು’ ಎನ್ನುತ್ತಾರೆ. ‘ನೀವು ಯುದ್ಧ ನಿಲ್ಲಿಸುವುದಾದರೆ ನಾನು ಸನ್ಯಾಸ ಸ್ವೀಕರಿಸಿ ಕಾಡಿಗೆ ಹೋಗುತ್ತೇನೆ’ ಎನ್ನುತ್ತಾನೆ. ‘ಹೌದು ನೀನು ಕಾಡಿಗೆ ಹೋಗಿ ಮುಂದೊಂದು ದಿನ ನಿನ್ನ ತಾಯಿ ಸಂಬಂಧಿಕರ ನೆರವಿನಿಂದ ನಮ್ಮ ಮೇಲೆ ದಾಳಿ ಮಾಡಿದರೆ?’ ಎಂದು ಸಂಶಯ ವ್ಯಕ್ತಪಡಿಸುತ್ತಾರೆ.

ಪ್ರತಿಯಾಗಿ ಸಿದ್ಧಾರ್ಥ ‘ನೋಡಿ, ನಾನು ನನ್ನ ನೆಲ-ಜಲ-ಜನರಿಗೆ ಎಂದಿಗೂ ಮೋಸ ಮಾಡಲಾರೆ’ ಎಂದು ಹೇಳುತ್ತಾನೆ. ‘ನೀನು ಸನ್ಯಾಸಿಯಾಗುವುದನ್ನು ನಿನ್ನ ತಾಯಿ ತಂದೆ ಒಪ್ಪದಿದ್ದರೆ?’ ಎಂದು ಕೇಳಿದಾಗ, ‘ಅದು ನನ್ನ ಸಮಸ್ಯೆ. ನಾನು ಬಗೆಹರಿಸಿಕೊಳ್ಳುತ್ತೇನೆ’ ಎಂದು ಹೇಳಿ ಹೆಂಡತಿ, ತಾಯಿ-ತಂದೆಯ ಒಪ್ಪಿಗೆ ಪಡೆದು ಸಿದ್ಧಾರ್ಥ ಕಾಡಿಗೆ ತೆರಳುತ್ತಾನೆ. ಇದು ಬಾಬಾಸಾಹೇಬರು ಸಂಶೋಧನೆ ಮಾಡಿ ಹೇಳಿದ ಮಾತು. ಸಿದ್ಧಾರ್ಥ ಹೆಣ, ರೋಗಿ, ವೃದ್ಧನನ್ನು ನೋಡಿ ಕಾಡಿಗೆ ಹೋಗಲಿಲ್ಲ. ಸಿದ್ಧಾರ್ಥ ಕಾಡಿಗೆ ಹೋದ ಮೇಲೆ ಯುದ್ಧ ನಿಲ್ಲುತ್ತದೆ. ಎರಡೂ ಸಂಸ್ಥಾನದವರು ಮಾತುಕತೆ ಮೂಲಕ ನದಿ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಂಡು ಸುಖವಾಗಿರುತ್ತಾರೆ. ಈ ಸುದ್ದಿಯು ಸನ್ಯಾಸಿಗಳ ಮೂಲಕ ಬುದ್ಧನಿಗೆ ತಿಳಿದರೂ ಮರಳಿಬರಲು ಒಪ್ಪುವುದಿಲ್ಲ. ದುಃಖಕ್ಕೆ ಕಾರಣ ಕಂಡು ಹಿಡಿದು ಪಂಚಶೀಲ ತತ್ವಗಳು, ಅಷ್ಟಾಂಗ ಮಾರ್ಗಗಳು, ಚತುರಾರ್ಯ ಸತ್ಯಗಳನ್ನು ಕಂಡುಹಿಡಿದು ಬೋಧಿ ಪಡೆದು ಸಿದ್ಧಾರ್ಥ ಬುದ್ಧನಾದ. 

ಇಂಥದ್ದೊಂದು ಮಹಾ ಉದಾಹರಣೆ ಇದ್ದರೂ ಜಗತ್ತು ಯುದ್ಧದ ಮಾರ್ಗ ತುಳಿಯುತ್ತಿದೆ. ಇರಾನ್, ಇಸ್ರೇಲ್, ಅಮೆರಿಕ ದೇಶಗಳು ಹಿಂಸೆಗೆ ಆದ್ಯತೆ ನೀಡುತ್ತಿವೆ. ಇದು ಯಾವ ಪುರುಷಾರ್ಥಕ್ಕೆ ಎಂಬ ಪ್ರಶ್ನೆ ಕಾಡದೆ ಇರದು. ಬುದ್ಧ ಮತ್ತು ಆನಂದನ ನಡುವೆ ನಡೆದ ಸಂವಾದವನ್ನು ನೆನಪಿಸಿಕೊಂಡರೆ ಶಾಂತಿ-ಸಹನೆ, ಸ್ನೇಹ ಮತ್ತು ಜೀವಕಾರುಣ್ಯ ಆದರ್ಶ ಮೌಲ್ಯಗಳೆಂದು ಬೋಧಿಸಿದ್ದ ಬುದ್ಧ ತನ್ನ ಭೌತಿಕ ಬದುಕಿನ ಕೊನೆಯ ಹಂತದಲ್ಲಿದ್ದಾಗ ಅವನ ಸುತ್ತಲೂ ಪ್ರಿಯ ಶಿಷ್ಯವೃಂದ ಕುಳಿತಿತ್ತು. ಶಿಷ್ಯ ಆನಂದ ಬುದ್ಧನನ್ನು ಪ್ರಶ್ನೆ ಮಾಡುತ್ತಿದ್ದ. ಬುದ್ಧ ‘ಏಕೆ ದುಃಖಿಸುವೆ’ ಎಂದು ಕೇಳಿದ. ಆನಂದ ‘ಗುರುವೇ ಜಗತ್ತಿನ ಜೀವಿಗಳಿಗೆ ಇರುವ ಜನನ ಮರಣಗಳಿಂದ ತಥಾಗತ ಹೊರತಾಗಿಲ್ಲ. 

ಹುಟ್ಟಿದ ಪ್ರತಿಯೊಂದು ಜೀವಿಗೂ ಮರಣ ಇರುವಂತೆ ತಥಾಗತನು ದೇಹತ್ಯಾಗ ಮಾಡಿ ಪರಿನಿರ್ವಾಣ ಹೊಂದುವನು. ಜಗತ್ತಿನ ಉದ್ಧಾರಕ್ಕೆ ತಥಾಗತನ ಇರುವಿಕೆ ಅನಿವಾರ್ಯ. ಲೋಕಕಲ್ಯಾಣಕ್ಕಾಗಿ ತಥಾಗತನ ಅಗತ್ಯ ಇನ್ನೂ ಇದೆ’ ಎಂದು ಅರಿಕೆ ಮಾಡಿದ. ‘ತಥಾಗತ ಯಾವುದಕ್ಕೂ ಅಂಟಿಕೊಂಡಿಲ್ಲ. ಜಗತ್ತಿನ ಉದ್ಧಾರ, ಲೋಕಕಲ್ಯಾಣ ಕೇವಲ ತಥಾಗತನ ಕಾರ್ಯವಾಗದೆ ಪ್ರತಿಯೊಬ್ಬರ ಕಾರ್ಯವಾಗಿದೆ. ಅದನ್ನು ಅರ್ಥ ಮಾಡಿಕೊಂಡು ದುಃಖದಿಂದ ವಿಮುಕ್ತರಾಗಬಹುದು’ ಎಂದು ಬುದ್ಧ ಹೇಳಿದ. ಆಗ ‘ಅರ್ಥವಾಯಿತು ಪೂಜ್ಯರೆ’ ಎಂದು ಆನಂದ ಹೇಳಿದ.

‘ತಥಾಗತನ ಆರಾಧಿಸುವ ಜಗತ್ತಿಗೆ ತಥಾಗತನ ಮಾರ್ಗದರ್ಶನದಲ್ಲಿ ಮುನ್ನಡೆಯುವ ಸಂಘಕ್ಕೆ ಏನಾದರೂ ತಿಳಿಸುವುದಿದ್ದರೆ ಅಂತಿಮ ಸಂದೇಶ ನೀಡಿ’ ಎಂದಾಗ ‘ತಥಾಗತನು ಏನೆಲ್ಲ ಬೋಧಿಸಿದನೋ ಅದೆಲ್ಲ ಪಾಲಿಸಬೇಕಾದ ಸತ್ಯಗಳೇ. ನಾವು ಹೇಳಿದ್ದೆಲ್ಲವನ್ನೂ ತಾವು ಕೂಲಂಕಷವಾಗಿ ಪರಿಶೀಲಿಸಿರಿ. ನಾನು ಮಾಡಿದ ಬೋಧನೆಗಳು ಕಾಲದ ನಿಯಮಕ್ಕನುಗುಣವಾಗಿಯೇ ಇವೆ. ಅವುಗಳನ್ನು ಪುರಸ್ಕರಿಸುವ-ಪರಿಷ್ಕರಿಸುವ ಹಾಗೂ ತಿರಸ್ಕರಿಸುವ ಸಂಪೂರ್ಣ ಹಕ್ಕು ತಮಗಿದೆ’ ಎಂದು ಬುದ್ಧ ಹೇಳಿದ. ಇದು ಬುದ್ಧನ ಪ್ರಜಾಪ್ರಭುತ್ವದ ಚಿಂತನೆ. ದುರದೃಷ್ಟ, ಇಂದು ಜಗತ್ತಿನಲ್ಲಿ ಭಾರತವನ್ನೂ ಒಳಗೊಂಡಂತೆ ಸರ್ವಾಧಿಕಾರಿ ಧೋರಣೆ ಹೆಚ್ಚಾಗಿ ಪರಸ್ಪರರಲ್ಲಿ ದ್ವೇಷ, ಅಸೂಯೆ ತಾಂಡವವಾಡುತ್ತಿದೆ. ಧರ್ಮ-ಅಧರ್ಮಗಳ ನಡುವೆ ಭಿನ್ನತೆ, ಮನುಷ್ಯ-ಮನುಷ್ಯನ ನಡುವೆ ಅಸೂಯೆ ತಲೆದೋರಿ ಶಾಂತಿ ಎಂಬುದು ಇಲ್ಲವಾಗಿದೆ.

ಬುದ್ಧನ ನಿರ್ಮಾಣ ನಂತರ ಅನೇಕ ಮಹಾರಾಜರು ಬಂದರು. ಚಕ್ರವರ್ತಿ ಅಶೋಕ ಕಳಿಂಗ ಯುದ್ಧದಿಂದ ಹೊರಬಂದು ಯುದ್ಧದಿಂದ ಮುಕ್ತನಾದ. ಬೌದ್ಧ ಧಮ್ಮ ಸ್ವೀಕರಿಸಿ ದೇಶಾದ್ಯಂತ 84 ಸಾವಿರ ಸ್ತೂಪಗಳನ್ನು ನಿರ್ವಿುಸಿದ. ಸಹಸ್ರಾರು ವರ್ಷಗಳಿಂದ ಬೆಳೆದು ಬಂದಿದ್ದ ಭಾರತೀಯ ಚಿಂತನೆಯಲ್ಲಿ ಬುದ್ಧ ಉಪದೇಶ ಮಾಡಿದ ಮಾನವೀಯ ಮೌಲ್ಯಗಳು ದೃಢವಾಗಿ ಬೇರು ಬಿಟ್ಟು ಬೋಧಿ ವೃಕ್ಷದಂತೆ ಹರಡಿದವು. ಸ್ವಾತಂತ್ರ್ಯಾನಂತರದಲ್ಲಿ ಬಾಬಾಸಾಹೇಬರು ಬುದ್ಧ ಧಮ್ಮವನ್ನು ಪುನಃ ದೇಶಕ್ಕೆ ಮರಳಿ ತಂದರು. ಬೌದ್ಧ ಧಮ್ಮ ಭಾರತದ ನೆಲದಲ್ಲಿ ಹುಟ್ಟಿದರೂ ಜಗತ್ತಿನ ಅನೇಕ ದೇಶಗಳ ಜನರು ಬುದ್ಧನನ್ನು ಅನುಸರಿಸುವ ಮೂಲಕ ಶಾಂತಿ, ಸಹಬಾಳ್ವೆ, ಭ್ರಾತೃತ್ವದಿಂದ ಬದುಕುತ್ತಿದ್ದಾರೆ. ಜಗತ್ತಿನ ಶಾಂತಿಗಾಗಿ ಯಾವುದನ್ನು ಬುದ್ಧ ಬೋಧಿಸಿದ್ದನೋ ಅದನ್ನು ಪುನಃ ನೆನಪಿಸಲು ಕಲಬುರಗಿಯಲ್ಲಿ ಬುದ್ಧ ವಿಹಾರ ತಲೆ ಎತ್ತಿದೆ.

ದೆಹಲಿಯಲ್ಲಿ ಮಹಾತ್ಮ ಗಾಂಧೀಜಿಯವರ ದಂಡಿಯಾತ್ರೆ ನೆನಪಿನ ಪ್ರತಿಮೆಗಳು ಇವೆ. ಗಾಂಧೀಜಿಯವರನ್ನು ಹಿಂಬಾಲಿಸುತ್ತಿರುವ 11 ಮುಖಂಡರು, ಅವರ ಪ್ರತಿಮೆಗಳು ಅವು. ಅದೇ ಸಾಹೇಬ್ ಸ್ತೂಪ ನಿರ್ವಣಕ್ಕೆ ಪ್ರೇರಣೆ ಆಯಿತು. ಬಾಬಾಸಾಹೇಬ್ ಅಂಬೇಡ್ಕರ್ 1956ರಲ್ಲಿ ಬೌದ್ಧಧರ್ಮ ಸ್ವೀಕಾರ ಮಾಡಿ ಈ ದೇಶದಲ್ಲಿ ಬೌದ್ಧಧಮ್ಮಕ್ಕೆ ಮರುಜೀವ ಕೊಟ್ಟಿದ್ದಲ್ಲದೆ ಆ ತತ್ವಕ್ಕೆ ಒಂದು ನೆಲೆ ತಂದುಕೊಟ್ಟು ಪ್ರಚಾರದ ಕೆಲಸ ಮಾಡಿದರು. ಅವರು ಹೇಳಿದ್ದು ನೋಡಿದರೆ ಭಾರತ ಬೌದ್ಧಮಯವಾಗಬೇಕು! ಹಾಗಾದರೆ ಮಾತ್ರ ದೇಶ ಒಂದಾಗಿರುತ್ತದೆ. ಬಾಬಾಸಾಹೇಬರು ಹೆಜ್ಜೆ ಹಾಕುತ್ತಿರಬೇಕಾದರೆ ಅವರ ಹಿಂದೆ ನಾವೆಲ್ಲ ನಡೆಯಬೇಕು ಎನ್ನುವ ಸಂಕೇತದಂತೆ ಹನ್ನೊಂದು ಪಂಚಲೋಹದ ಪ್ರತಿಮೆಗಳನ್ನು ಬುದ್ಧ ವಿಹಾರದಲ್ಲಿ ಸ್ಥಾಪಿಸಲಾಗಿದೆ.

ಬೌದ್ಧ ಧರ್ಮದಲ್ಲಿ ಎರಡು ರೀತಿಯ ವಿಹಾರಗಳಿವೆ. ಒಂದು ನಾಗಾರ್ಜುನ ಕಾಲದಲ್ಲಿ ಪ್ರಾರಂಭವಾದ ಬುದ್ಧ ವಿಹಾರ. ಅದು ವಿಶೇಷವಾಗಿ ಸಿಲೋನ್, ಥಾಯ್ಲೆಂಡ್, ಜಪಾನ್, ಚೀನಾ, ಬರ್ವಗಳಲ್ಲಿ ವಿಹಾರಗಳ ರೂಪದಲ್ಲಿ ಮಾಡಿದ್ದು, ಅಶೋಕನ ಕಾಲದಲ್ಲಿ ಸ್ತೂಪ ಮಾತ್ರ ಇದ್ದವು. ಅದಕ್ಕಾಗಿ ಕಲಬುರಗಿ ಬುದ್ಧ ವಿಹಾರದಲ್ಲಿ ಒಂದೆಡೆ ಸ್ತೂಪ, ಇನ್ನೊಂದೆಡೆ ವಿಹಾರ ಸಮ್ಮಿಳಿತವಾಗಿದೆ. ಸಂಶೋಧನೆ ನಡೆಯಬೇಕು ಎಂದುಕೊಂಡು ಪಾಲಿ ಮತ್ತು ಸಂಸ್ಕೃತ ಅಂತಾರಾಷ್ಟ್ರೀಯ ತೌಲನಿಕ ಅಧ್ಯಯನ ಕೇಂದ್ರವೂ ಸ್ಥಾಪಿಸಲಾಗಿದೆ.

ಜನರಿಗೆ ವೈಚಾರಿಕತೆ-ವೈಜ್ಞಾನಿಕತೆ ಬೇಕಾಗಿಲ್ಲ. ಮೂಢನಂಬಿಕೆ, ಅಂಧಶ್ರದ್ಧೆ ಇಂಥವುಗಳಲ್ಲೇ ಹೆಚ್ಚಿನ ಆಸಕ್ತಿ ಇದೆ. ಬುದ್ಧ ಪ್ರಾಣಿ ಬಲಿ ಕೊಡುವುದನ್ನು ವಿರೋಧಿಸಿದ. ಜನರು ಅದನ್ನೂ ಮುಂದುವರಿಸಿದ್ದಾರೆ. ಜನರು ಪರಸ್ಪರ ಕಲಹ ಮಾಡುತ್ತಾರೆ, ಯುದ್ಧವನ್ನು ಬೆಂಬಲಿಸುತ್ತಾರೆ, ಮಾಡುವುದೇನು? ಜಗತ್ತಿನ ಜನರಿಗೆ ಬುದ್ಧನ ಸಂದೇಶ ತಲುಪಿಸಬೇಕು. ಎಲ್ಲಿ ಬುದ್ಧ ತಲುಪಿದ್ದಾನೆಯೋ ಆ ದೇಶಗಳಲ್ಲಿ ಯುದ್ಧ ಇಲ್ಲವಾಗಿದೆ, ಪ್ರಗತಿ ಹೆಚ್ಚಿದೆ. ಎಲ್ಲಿ ಬುದ್ಧನ ಮಹತ್ವ ತಿಳಿದಿಲ್ಲವೋ ಅಲ್ಲಿಯವರು ಯುದ್ಧದ ಹಾದಿ ಹಿಡಿಯುತ್ತಾರೆ, ಹಿಡಿದಿದ್ದಾರೆ. ಹೀಗಾಗಿ ವಿಶ್ವಕ್ಕೆ ಶಾಂತಿ ನೀಡುವುದು ಬುದ್ಧನ ತತ್ತ್ವ ಚಿಂತನೆಗಳು. ಅವುಗಳನ್ನು ಪಾಲಿಸುವತ್ತ ಮುನ್ನಡೆಯೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net