ಭ್ರಷ್ಟರ ಮೇಲೆ ಲೋಕಾ ಕೆಂಗಣ್ಣ್ಣು!

klr loka sumoto
ಕೋಲಾರ ನಗರದ ನಗರಸಭೆ ಕಚೇರಿಗೆ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಇತ್ತೀಚೆಗೆ ಭೇಟಿ ನೀಡಿ, ಕಡತಗಳನ್ನು ಪರಿಶೀಲಿಸಿದ್ದರು.
Published on

> ಕಿರುವಾರ ಎಸ್​. ಸುದರ್ಶನ್​ ಕೋಲಾರ

ಜಿಲ್ಲಾ ಕೇಂದ್ರದಲ್ಲಿರುವ ಕೆಲ ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟ್ರಾಚಾರ ಹೆಚ್ಚಾಗಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಲೋಕಾಯುಕ್ತ ಪೊಲೀಸರು ಸ್ವಯಂ ದೂರು ದಾಖಲಿಸಿ ಭ್ರಷ್ಟರಿಗೆ ಬಿಸಿ ಮುಟ್ಟಿಸಿದ್ದಾರೆ.

ರಾಜ್ಯ ಉಪ ಲೋಕಾಯುಕ್ತ ಬಿ.ವೀರಪ್ಪ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡವು ಮಾ.10ರಂದು, ನಗರದ ನಗರಸಭೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಎಪಿಎಂಸಿ, ತಾಲೂಕು ಕಚೇರಿ, ಜಿಲ್ಲಾ ಎಸ್​ಎನ್​ಆರ್​ ಆಸ್ಪತ್ರೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಆರ್​ಟಿಒ ಕಚೇರಿ, ಅಬಕಾರಿ ಇಲಾಖೆ, ಬೆಸ್ಕಾಂ, ಅರಣ್ಯ ಇಲಾಖೆ, ಸಬ್​ ರಿಜಿಸ್ಟ್ರಾರ್​ ಕಚೇರಿ, ಸರ್ವೇ ಇಲಾಖೆ, ಎಪಿಎಂಸಿ ಮಾರುಕಟ್ಟೆ, ಅಂಬೇಡ್ಕರ್​ ಅಭಿವೃದ್ಧಿ ನಿಗಮ ಸೇರಿ ವಿವಿಧ ಇಲಾಖೆಗಳಿಗೆ ಭೇಟಿ ನೀಡಿ, ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿತ್ತು.

ಭೇಟಿ ಸಂದರ್ಭದಲ್ಲಿ ಹಾಜರಾತಿ, ಸಿಬ್ಬಂದಿ ಮೊಬೈಲ್​ನಲ್ಲಿ ಯುಪಿಐನಲ್ಲಿ ಹಣಕಾಸು ವ್ಯವಹಾರ, ಕಡತಗಳ ನಿರ್ವಹಣೆ, ನಗದು ಘೋಷಣೆ ವಹಿ ಪಾಲನೆ ಮಾಡದಿರುವುದು, ಕಚೇರಿಗಳಲ್ಲಿ ಸಾರ್ವಜನಿಕರು ಕುಳಿತುಕೊಳ್ಳಲು ಅಸನದ ವ್ಯವಸ್ಥೆ ಮಾಡದಿರುವುದು, ಅರ್ಜಿಗಳ ವಿಲೇವಾರಿ ಬಾಕಿ, ಕರ್ತವ್ಯ ವಿಳಂಬ ಕುರಿತ ಲೋಪಗಳು ಕಂಡು ಬಂದಿದ್ದವು. ಈ ಹಿನ್ನೆಲೆಯಲ್ಲಿ 13 ಸ್ವಯಂ ದೂರು ದಾಖಲಿಸಿಕೊಂಡಿದ್ದು, 12 ಮಂದಿ ಎದುರುದಾರರಾಗಿದ್ದಾರೆ. ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳು ವಿಚಾರಣೆ ಎದುರಿಸಬೇಕಿದೆ.

ಲೋಕಾಯುಕ್ತರ ಭೇಟಿ ಇದೇ ಮೊದಲಲ್ಲ. ಈ ಹಿಂದೆಯೂ ಸರ್ಕಾರಿ ಹಾಸ್ಟೆಲ್​, ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರು. ಆಗ ಅವ್ಯವಸ್ಥೆಯನ್ನು ಕಂಡು ಸರಿಪಡಿಸಿಕೊಳ್ಳುವಂತೆ ಸೂಚಿಸಿದ್ದರು. ಆದರೂ ಜಿಲ್ಲಾ ಎಸ್​ಎನ್​ಆರ್​ ಆಸ್ಪತ್ರೆ ಸೇರಿ ಕೆಲ ಇಲಾಖೆಯ ಅಧಿಕಾರಿಗಳು ಉದಾಸೀನ ತೋರಿದ್ದು, ಈಗ ವಿಚಾರಣೆ ಎದುರಿಸುವ ಸನ್ನಿವೇಶ ಸೃಷ್ಟಿಯಾಗಿದೆ.

* ಆರ್​ಟಿಒ ಇಲಾಖೆಯಲ್ಲಿನ ಅಕ್ರಮ ಉಲ್ಲೇಖ

ಎ್​ಸಿ, ವಿಮೆ ಅವಧಿ ಮುಗಿದಿರುವ 51 ಶಾಲಾ ವಾಹನಗಳು ಹಾಗೂ ಇತರ 15,007 ವಾಹನಗಳ ವಿರುದ್ಧ ಕ್ರಮಕೈಗೊಂಡಿಲ್ಲ. ಈ ಕುರಿತು ಕೇವಲ ವಾಹನಗಳ ಮಾಲೀಕರಿಗೆ ನೋಟಿಸ್​ ನೀಡಿದ್ದು, ವಾಹನ ಜಪ್ತಿ ಮಾಡಿಲ್ಲ. ಹೀಗೆ ಹಲವು ಲೋಪಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಆರ್​ಟಿಒ ಅಧಿಕಾರಿ ವೇಣುಗೋಪಾಲ ರೆಡ್ಡಿ ವಿರುದ್ಧ ದೂರು ದಾಖಲಾಗಿದೆ.

* ಅಕ್ರಮ ಖಾತೆ

ಕರ್ನಾಟಕ ಮುನ್ಸಿಪಲ್​ ಕಾಪೋರ್ರೇಷನ್​ ಕಾಯ್ದೆ ಉಲ್ಲಂನೆ ಹಾಗೂ ಅನಧಿಕೃತ ಕಟ್ಟಡ ನಿರ್ಮಿಸಿರುವವರಿಗೆ ಕೇವಲ ದಂಡ ವಿಧಿಸಿ, ನಿಯಮಾನುಸಾರ ಕಠಿಣ ಕ್ರಮ ಜರುಗಿಸದೆ ಕರ್ತವ್ಯಲೋಪ ಎಸಗಿದ ಆರೋಡದಡಿ ಪೌರಾಯುಕ್ತ ಪ್ರಸಾದ್​ ರೆಡ್ಡಿ ಮೇಲೆ ದೂರು ದಾಖಲಾಗಿದೆ.

ಅಂತೆಯೇ, ಖರೀದಿ ಕರಾರಿನ ಮೇರೆಗೆ 408 ಪ್ರಕರಣಗಳಲ್ಲಿ ಅಕ್ರಮ ಖಾತೆ ಸಂಬಂಧ ವರದಿ ತಯಾರಿಸಿ ಜಿಲ್ಲಾಧಿಕಾರಿ ಸಮಕ್ಷಮ ಪ್ರಾಧಿಕಾರಕ್ಕೆ ವರದಿ ನೀಡಿದ್ದಾರೆ. ಜತೆಗೆ, ಕೆಲ ಅರ್ಜಿಗಳಿಗೆ ಎಲ್ಲ ದಾಖಲಾತಿ ಪೂರೈಸಿದ್ದರೂ ಖಾತೆ ನೀಡದಿರುವುದು, ಭೂ ಪರಿವರ್ತನೆಯಾಗಿ ಬಡಾವಣೆಗೆ ಅನುಮತಿ ನೀಡಿದ್ದರೂ ಖಾತೆ ಮಾಡಿಕೊಡದಿರುವುದು, ಅರ್ಜಿ ಸ್ವೀಕರಿಸದೆ ಬಿಲ್​ ಕಲೆಕ್ಟರ್​ ನಟರಾಜ್​ ಖಾತೆ ನೀಡಲು ಕಡತ ಸೃಷ್ಟಿಸಿರುವುದು ಹಾಗೂ ಅರ್ಜಿಗಳನ್ನು ಬಾಕಿ ಉಳಿಸಿಕೊಂಡಿರುವ ಆರೋಡದಡಿ ಹೊಣೆಗಾರರನ್ನಾಗಿಸಲಾಗಿದೆ.

* ಆರ್​ಆರ್​ಟಿಯಲ್ಲಿ 360 ಅರ್ಜಿ ಬಾಕಿ

ತಹಸೀಲ್ದಾರ್​ ಕಚೇರಿಯ ಆರ್​ಆರ್​ಟಿ ಶಿರಸ್ತೇದಾರ್​ ಭಾಸ್ಕರ್​ ಮೊಬೈಲ್​ನಲ್ಲಿ 5 ಬ್ಯಾಂಕ್​ ಖಾತೆಗಳಲ್ಲಿ ವಹಿವಾಟು ನಡೆಸಿದ್ದಾರೆ. 361 ಆರ್​ಆರ್​ಟಿ ಅರ್ಜಿಗಳು ಬಾಕಿ ಉಳಿಸಿಕೊಂಡಿರುವುದೂ ಕಂಡು ಬಂದಿದೆ. ಯುಪಿಐನಲ್ಲಿ ಸಾವಿರಾರು ರೂ. ವಹಿವಾಟು ನಡೆಸಿರುವುದನ್ನು ಕಂಡು ಲೋಕಾಯುಕ್ತರೇ ಅಚ್ಚರಿಗೊಂಡಿದ್ದರು.

* ನಕಲಿ ಜಾಬ್​ ಕಾರ್ಡ್​ ಸೃಷ್ಟಿ

ಮೇಲಧಿಕಾರಿಗಳ ಅನುಮತಿ ಇಲ್ಲದೆ ಕಂಪ್ಯೂಟರ್​ ಆಪರೇಟರ್​ ನೇತ್ರಾವತಿಗೆ 6 ತಿಂಗಳಿಂದ 12 ಸಾವಿರ ವೇತನವನ್ನು ನರೇಗಾ ಯೋಜನೆಯಡಿ ನಕಲಿ ಬಾಜ್​ ಕಾರ್ಡ್​ ಸೃಷ್ಟಿಸಿ ನೀಡಿರುವುದು ಕಂದು ಬಂದಿದ್ದು, ಜಿಲ್ಲಾ ಪ್ರಭಾರ ವಲಯ ಅರಣ್ಯಾಧಿಕಾರಿ ಮನೋಹರ್​ ವಿರುದ್ಧ ಸ್ವಯಂ ದೂರು ದಾಖಲಾಗಿದೆ.

* ವೇತನಕ್ಕಿಂತ ಹೆಚ್ಚು ವಹಿವಾಟು

ಗುತ್ತಿಗೆದಾರರಾದ ಯಮ್ಮಸಲ್ಮಾ ಅವರಿಗೆ ಸಂಬಂಧಿಸಿದ ಕಡತವನ್ನು ಮತ್ತೊಬ್ಬ ಗುತ್ತಿಗೆದಾರ ಲಯೀಕ್​ ಅಹ್ಮದ್​ ಎಂಬಾತ ಪಡೆದುಕೊಂಡು ಹೋಗಿದ್ದ. ಆದರೆ ಅಧಿಕಾರಿಗಳು ಅದನ್ನು ವಶಪಡಿಸಿಕೊಳ್ಳಲು ಮುಂದಾಗಿಲ್ಲ. ಲೈನ್​ಮನ್​ ವೇಣುಕುಮಾರ್​ ಮೊಬೈಲ್​ನಲ್ಲಿ ಯುಪಿಐ ಪರಿಶೀಲಿಸಿದಾಗ ವೇತನಕ್ಕಿಂತ ಹೆಚ್ಚು ವಹಿವಾಟು ಮಾಡಿರುವುದು, ಕಚೇರಿಯಲ್ಲಿ ಬಯೋಮೆಟ್ರಿಕ್​ ಹಾಜರಾತಿ ಅಳವಡಿಸದ ಸಹಾಯಕ ಕಾರ್ಯಪಾಲಕ ಶ್ರೀನಿವಾಸಲು ಈಗ ವಿಚಾರಣೆ ಎದುರಿಸಬೇಕಿದೆ.

* ಅಬಕಾರಿ ನಿಯಮ ಉಲ್ಲಂನೆ

ಶ್ರೀನಿವಾಸಪುರ ತಾಲೂಕಿನ ಚಲ್ದಿಗಾನಹಳ್ಳಿ ಸಮೀಪದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಹತ್ತಿರ ಭೂಪರಿವರ್ತನೆಗೊಳ್ಳದ ಸರ್ವೇ ನಂಬರ್​ ಜಮೀನನಲ್ಲಿ ಎಂ.ಶ್ರೀನಿವಾಸ್​ಗೆ ಸಿಎಲ್​&9 ಮತ್ತು ಸನತ್​ ಕುಮಾರ್​ಗೆ ಸಿಎಲ್​&7 ಹಾಗೂ ದೀಪಿಕ ಎಂಬುವರಿಗೆ ಪರವಾನಗಿ ನೀಡುವಲ್ಲಿ ನಿಯಮಗಳನ್ನು ಉಲ್ಲಂಘಿಸಿರುವ ಸಂಬಂಧ ಅಬಕಾರಿ ಉಪಾಧೀಕ್ಷಕ ಎಂ.ಶ್ರೀನಿವಾಸಮೂರ್ತಿ ಆರೋಪಿತರಾಗಿದ್ದಾರೆ.

* ಯಾರ್ಯಾರ ವಿರುದ್ಧ ದೂರು...?

ಪೌರಾಯುಕ್ತ ಎಸ್​.ಪ್ರಸಾರ್​ ರೆಡ್ಡಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ವೇಣುಗೋಪಾಲ ರೆಡ್ಡಿ, ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಉಪ ನಿರ್ದೇಶಕ ಎನ್​.ರವಿಚಂದ್ರ, ಡಾ.ಅಂಬೇಡ್ಕರ್​ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಎಂ.ಆರ್​.ಪ್ರತಿಮಾ, ತಹಸೀಲ್ದಾರ್​ ಡಾ.ಎಂ.ನಯನಾ, ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಜಿಲ್ಲಾ ವಿಮಾಧಿಕಾರಿ ಜಿ.ಎಚ್​.ಶ್ರೀನಿವಾಸ್​, ಉಪವಲಯ ಅರಣ್ಯಾಧಿಕಾರಿ ಮನೋಹರ್​, ಬೆಸ್ಕಾಂ ಸಹಾಯಕ ಕಾರ್ಯಪಾಲಕ ಶ್ರೀನಿವಾಸಲು, ಜಿಲ್ಲಾ ಎಸ್​ಎನ್​ಆರ್​ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಜಗದೀಶ್​, ಉಪ ನೋಂದಣಾಧಿಕಾರಿ (ಪ್ರಭಾರ) ಶಿವರಾಜು, ಭೂ ದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ, ಎಪಿಎಂಸಿ ಮಾರುಕಟ್ಟೆಯ ಸಹಾಯಕ ನಿರ್ದೇಶಕ ರವಿಕುಮಾರ್​ ವಿರುದ್ಧ ಉಪಲೋಕಾಯುಕ್ತರು ದೂರು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net