ನಾಲಿಗೆ ಮತ್ತು ಮನದೊಳಗಿನ ಮಾತು ಎಲ್ಲ ಸಲ ಒಂದೇ ಆಗಿರುವುದಿಲ್ಲ!

4-687e818320805
Published on
ಒಮ್ಮೆ ಒಂದು ಕಾಲೇಜಿನಲ್ಲಿ, ನಿವೃತ್ತಿ ಹೊಂದಿದ ಶಿಕ್ಷಕರೊಬ್ಬರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಸಂಜೆ 5 ಗಂಟೆಗೆ ಸರಿಯಾಗಿ ಆರಂಭವಾಗಬೇಕಿದ್ದ ಆ ಕಾರ್ಯಕ್ರಮಕ್ಕೆ ಸಮಯ ಪರಿಪಾಲನೆಗೆ ಹೆಸರುವಾಸಿಯಾಗಿದ್ದ ಆ ಶಿಕ್ಷಕರು.

4.30 ಗಂಟೆಗೇ ಬಂದು ಬಿಟ್ಟಿದ್ದರು. ಸಮಯಕ್ಕೆ ಮುಂಚಿತ ವಾಗಿಯೇ, ಬಂದ ಅವರನ್ನು ಆಡಳಿತ ಮಂಡಳಿಯವರು, ವೇದಿಕೆಯ ಪರದೆಯ ಮುಂಭಾಗದಲ್ಲಿ ಕುರ್ಚಿ ಹಾಕಿ, ಸ್ವಲ್ಪ ಹೊತ್ತು ವಿಶ್ರಮಿಸುವಂತೆ ಸೂಚಿಸಿದರು. ಆಗಲಿ ಎನ್ನುತ್ತಾ ಕುಳಿತಿದ್ದ ಆ ಶಿಕ್ಷಕರನ್ನು ನೋಡದ ಕೆಲ ವಿದ್ಯಾರ್ಥಿಗಳು ಪರದೆಯ ಹಿಂಭಾಗದಲ್ಲಿ ಏನೇನೋ ಮಾತನಾಡಿಕೊಳ್ಳುತ್ತಿದ್ದರು. ಒಬ್ಬನೆಂದ :ಈ ಮುದುಕುಪ್ಪನಿಗೆ ನಿವೃತ್ತಿ ಆಗಿದ್ದೇ ಒಳ್ಳೆಯದಾಯಿತು. ದಿನಾ ನಮ್ಮ ತಲೆ ತಿನ್ನುತ್ತಿದ್ದ. ಇನ್ನೊಬ್ಬ : ಒಂದು ದಿನ ನಾನು ಕ್ಲಾಸಿಗೆ ತಡವಾಗಿ ಹೋಗಿದ್ದಕ್ಕೆ ಕ್ಲಾಸಿನ ಒಳಗೇ ಬಿಟ್ಟಿಲ್ಲ ನೋಡು. ಮತ್ತೊಬ್ಬ: ಮಕ್ಕಳಿಂದ ತರಕಾರಿ ಬೇರೆ ತರಿಸಿಕೊಳ್ಳುತ್ತಿದ್ದನಂತೆ. ಇಂತವರಿಗೆ ಸನ್ಮಾನ ಬೇರೆ! ದಂಡ ಪಿಂಡ.

ಹೀಗೆ ತನ್ನ ಬಗ್ಗೆ ಏನೇನೋ ಆಡಿಕೊಳ್ಳುತ್ತಿದ್ದ ತನ್ನ ವಿದ್ಯಾರ್ಥಿಗಳ ಮಾತುಗಳನ್ನು ಕೇಳಿಸಿ ಕೊಂಡ ಮೇಷ್ಟ್ರಿಗೆ ಬಹಳ ಆಶ್ಚರ್ಯವು ದುಃಖವೂ ಆಯಿತು. ಎದುರು ಸಿಕ್ಕಿದಾಗಲೆಲ್ಲ ಭಕ್ತಿ ಭಾವದಿಂದ ಕೈ ಮುಗಿದು, ನಿಮ್ಮ ಕ್ಲಾಸಿಗಾಗಿಯೇ ಕಾಯುತ್ತಿದ್ದೇನೆ. ನಿಮ್ಮಂತಹ ಗುರುಗಳನ್ನು ಪಡೆಯಲು ನಾವು ಪುಣ್ಯ ಮಾಡಿರಬೇಕು ಸಾರ್ ಎಂದು ಹೇಳುತ್ತಿದ್ದ ಇದೇ ಹುಡುಗರು, ಹಿಂದಿನಿಂದ ಆಡಿದ ಮಾತುಗಳೇ ಬೇರೆ. ಅಂತೂ, ಸ್ವಲ್ಪ ಹೊತ್ತಿನಲ್ಲಿ ಸಮಾರಂಭ ಪ್ರಾರಂಭವಾಯಿತು. ಇದೇ ಹುಡುಗರು ಅವರನ್ನು ಕೈಹಿಡಿದು ಪೀಠದಲ್ಲಿ ಕುಳ್ಳಿರಿಸಿ, ಅವರನ್ನು ಹಾಡಿ ಹೊಗಳಿದರು. ಅವರ ಗುಣಗಾನ ಮಾಡಿದರು. ಕೊರಳಿಗೆ ಹಾರ ಹಾಕಿದರು, ತಲೆಗೆ ಪೇಟಾ ತೊಡಿಸಿದರು. ಹೂ ಹಣ್ಣನ್ನು ಕಾಣಿಕೆಯಾಗಿ ಕೊಟ್ಟು ಕಾಲಿಗೆ ಎರಗಿದರು. ಸನ್ಮಾನಕ್ಕೆ ಉತ್ತರ ವಾಗಿ ಗುರುಗಳು, ‘ಮನುಷ್ಯನ ಮನದೊಳಗಿನ ಮಾತೇ ಬೇರೆ; ನಾಲಿಗೆ ಯಿಂದಾಡುವ ಮಾತೇ ಬೇರೆ. ಇದು ಆತ್ಮವಂಚನೆಯಲ್ಲವೇ! ದೇವರು ನಿಮಗೆ ಒಳ್ಳೇದನ್ನೇ ಮಾಡಲಿ’ ಎಂದರು.

ಹೌದು, ಇದು ದಿನನಿತ್ಯದ ನಮ್ಮ ಜೀವನದಲ್ಲಿ ನಡೆಯುವ ಘಟನೆಗಳು. ಮನೆಗೆ ನೆಂಟರು, ಮಿತ್ರರು ಬರುತ್ತಾರೆ. ಬಂದಾಗ ಬಾಯಲ್ಲಿ ಬನ್ನಿ, ಬನ್ನಿ, ನೀವು ಬಂದಿದ್ದು ನಮಗೆ ಬಹಳ ಸಂತೋಷವಾಯಿತು ಎಂದು ಹೇಳಿದರೂ, ಮನದೊಳಗೆ ಹೇಳದೇ ಕೇಳದೇ ಬರುವ ಇವರಿಗೆ ಸಭ್ಯತೆ ಎಂಬುದು ಗೊತ್ತೇ ಇಲ್ಲವೇ? ಇಂತಹವರಿಗೆ ಅತಿಥಿ ಸತ್ಕಾರ ಬೇರೆ ಕೇಡು ಎಂದು ಗೊಣಗುತ್ತಿರುತ್ತಾರೆ.

ನೀನೆಷ್ಟು ಸುಂದರವಾಗಿದ್ದೀಯಾ! ಎಂದು ಹೆಂಡತಿಯನ್ನು ಹೊಗಳಿದರೂ, ನಾನು ಅವಸರ ಮಾಡಿಬಿಟ್ಟೆನೆಂದು ಕಾಣುತ್ತದೆ, ಇನ್ನು ಸ್ವಲ್ಪ ಕಾಯುತ್ತಿದ್ದರೆ, ಇವಳಿಗಿಂತ ಒಳ್ಳೆಯ ಹುಡುಗಿ ಸಿಗುತ್ತಿದ್ದಳೋ ಏನೋ! ಎಂದು ಒಳಗೊಳಗೆ ಗೊಣಗುವ ಗಂಡಸರೂ ಇಲ್ಲವೇ!

ಗಂಡನಿಗೆ ನಿಮ್ಮಂಥವರು ಸಿಕ್ಕಿದ್ದು ನನ್ನ ಪುಣ್ಯ ಏಳೇಳು ಜನುಮಕ್ಕೂ ನೀವೇ ನನ್ನ ಪತಿ ದೇವರಾಗಬೇಕು ಎಂದು ಹೇಳುವ ಹೆಂಡತಿ ಇಂತಹ ಕೋತಿಯನ್ನು ಕಟ್ಟಿಕೊಂಡು ನನ್ನ ಜೀವನ ಹಾಳಾಯ್ತು ಎಂದು ಮನದೊಳಗೇ ದುಃಖಿಸುವಾಕೆಯೂ ಆಗಿರಬಹುದಲ್ಲವೆ! ಅಂತೆಯೇ, ಹಾಗಿದ್ದರೆ, ಇದೇ ನನ್ ಏಳನೇ ಜನ್ಮವಾಗಲಿ ಎಂದು ಮೌನದಲ್ಲಿ ದೇವರನ್ನು ಪ್ರಾರ್ಥಿಸುವ ಗಂಡಂದಿರೂ ಇಲ್ಲವೇ?! ನಿಮ್ಮ ಭಾಷಣ ಅದ್ಭುತವಾಗಿತ್ತು ಎಂದು ಹೊಗಳಿದ ಜನ ಒಂದು ಗಂಟೆ ನಮ್ಮ ತಲೆ ತಿಂದ ಎಂದು ಹಿಂದಿನಿಂದ ಶಾಪ ಹಾಕಿದ್ದು ಉಂಟಲ್ಲವೇ? ಯಾರಾದರೂ ಸತ್ತಾಗ ಒಳ್ಳೇ ಮನುಷ್ಯ, ಪಾಪ ಸಾಯಬಾರದಿತ್ತು ಎಂದುಕೊಂಡವರು, ಸಾಯದೇ ಉಳಿದರೆ, ಲೋಫರ್ ನನ್ನ ಮಗ ಇನ್ನೂ ಸಾಯಲೇ ಇಲ್ಲ ನೋಡಿ ಎಂದು ಹೇಳಿಲ್ಲವೇ? ನೀವೇ ನಮಗೆ ಆದರ್ಶಪ್ರಾಯರು ಎಂದು ಕೊಂಡಾಡಿದ ಹಿಂಬಾಲಕರು ಹಿಂದಿನಿಂದ ದಂಡಪಿಂಡ ವೆಂದು ಹೇಳಿದ್ದಿಲ್ಲವೇ? ಹುಡುಕಿದರೆ ಇಂತಹ ಅನೇಕಾನೇಕ ಉದಾಹರಣೆಗಳು ನಮಗೆ ದಿನನಿತ್ಯ ಲಭ್ಯವಾಗುತ್ತಲೇ ಇರುತ್ತವೆ.

ತಾತ್ಪರ್ಯ ಇಷ್ಟೇ. ಎಷ್ಟೋಜನರು ಎಷ್ಟೋ ಸಂದರ್ಭಗಳಲ್ಲಿ ಬಾಯಲ್ಲಿ ಹೇಳುವುದೇ ಒಂದು, ಆದರೆ ಮನದೊಳಗೆ ಯೋಚಿಸುವುದೇ ಇನ್ನೊಂದು. ಕಾಯಾ- ವಾಚಾ- ಮನಸಾ ನಾವು ಶುದ್ಧವಾಗಿರಬೇಕು, ಒಂದೇ ಆಗಿರಬೇಕು ಎಂಬುದು ಸದಾಶಯವಾಗಿದ್ದರೂ ಇದನ್ನು ಪರಿಪಾಲಿಸುವವರು ವಿರಳ. ಆದರೆ ಇದು ಅಸಾಧ್ಯವೇನೂ ಅಲ್ಲ. ನಮ್ಮ ಯೋಚನೆ, ಮಾತು ಮತ್ತು ಕೃತಿ ಒಂದೇ ಆಗಿದ್ದಲ್ಲಿ ಆಗುವ ಆತ್ಮ ಸಂತೋಷಕ್ಕೆ ಎಣೆಯೇ ಇಲ್ಲ. ಇಲ್ಲವಾದರೆ ನಮಗೆ ನಾವೇ ದ್ರೋಹ ಬಗೆದಂತೆ. ಅಂತೆಯೇ ಮಿತ್ರರ ಹೊಗಳಿಕೆಯಲ್ಲಿ ಪೂರ್ತಿ ಸತ್ಯಾಂಶವಿರುವುದಿಲ್ಲ. ಹಾಗೂ ವೈರಿಗಳ ತೆಗಳಿಕೆಯೆಲ್ಲವೂ ಸುಳ್ಳಲ್ಲ. ಈ ವ್ಯತ್ಯಾಸವನ್ನು ಅರಿತುಕೊಂಡು ಬಾಳುವವನೇ ಜಾಣ!

(ಪ್ರತಿಕ್ರಿಯಿಸಿ: drputhuraya@yahoo.co.in)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net