

ವಿದೇಶ ಪ್ರವಾಸ ಎಂದಾಕ್ಷಣ ಭಾರಿ ಮೊತ್ತದ ಖರ್ಚು ಮತ್ತು ಹೆಚ್ಚು ದಿನಗಳು ಬೇಕು ಎಂಬ ಭಾವನೆ ಸಹಜ. ಆದರೆ, ಪುಟ್ಟ ದ್ವೀಪರಾಷ್ಟ್ರ ವಿಯೆಟ್ನಾಂ ಪ್ರವಾಸವನ್ನು ಕಡಿಮೆ ಖರ್ಚಿನಲ್ಲಿ, ಕಡಿಮೆ ದಿನಗಳಲ್ಲಿ ಮಾಡಲು ಸಾಧ್ಯ. ಈಗಂತೂ ಬೆಂಗಳೂರಿನಿಂದ ಹೋ ಚಿ ಮಿನ್ ಸಿಟಿಗೆ ವಿಯೆಟ್ಜೆಟ್ ನೇರ ವಿಮಾನಸಂಪರ್ಕವಿದೆ. ನೈಸರ್ಗಿಕ ಸೌಂದರ್ಯ, ವಾಸ್ತು ವೈಭವ ಮತ್ತು ವಿಶಿಷ್ಟ ಆಹಾರಸಂಸ್ಕೃತಿಯಿಂದ ವಿಯೆಟ್ನಾಂಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ.
ಸುರಕ್ಷಿತ-ಸುಶಿಕ್ಷಿತ ದೇಶಗಳಿಗೆ ಭೇಟಿ ನೀಡುವುದೆಂದರೆ ನಿಜಕ್ಕೂ ಸಂಭ್ರಮವೇ ಸರಿ. ಇನ್ನು ಕಡಿಮೆ ಖರ್ಚಿನ ವಿದೇಶ ಪ್ರವಾಸವೆಂದರೆ ಅದು ಸ್ವರ್ಗ. ಮನಸೆಳೆಯುವ ವಾತಾವರಣ, ಕಣ್ಣು ಹಾಯಿಸಿದಷ್ಟೂ ಹಸಿರು, ಮನಕ್ಕೆ ಮುದನೀಡುವ ಕಡಲ ತಡಿ, ಆಕರ್ಷಕ ವಾಸ್ತು ವೈಭವದ ಕಟ್ಟಡಗಳು, ಎಲ್ಲಕ್ಕಿಂತ ಮಿಗಿಲಾದ ಶಿಸ್ತಿನ ಜತೆಗೆ ಶುಚಿತ್ವ... ಹೀಗೆ ಎಲ್ಲ ವಿಷಯಗಳಲ್ಲೂ ಚಿತ್ತಾಕರ್ಷಿಸುತ್ತ ಭಾರತೀಯರಿಗೆ ನೆಚ್ಚಿನ ಪ್ರವಾಸಿತಾಣವಾಗುತ್ತಿದೆ ದ್ವೀಪರಾಷ್ಟ್ರ ವಿಯೆಟ್ನಾಂ. ಪ್ರಪಂಚದ ಸುರಕ್ಷಿತ ರಾಷ್ಟ್ರಗಳ ಪಟ್ಟಿಯಲ್ಲಿ ಟಾಪ್ ಟೆನ್ನಲ್ಲಿರುವ ವಿಯೆಟ್ನಾಂಗೆ ಭಾರತೀಯ ಪ್ರವಾಸಿಗರು ಅಪಾರ ಪ್ರಮಾಣದಲ್ಲಿ ಲಗ್ಗೆಯಿಡುತ್ತಿದ್ದಾರೆ. ನಮ್ಮ ಕರ್ನಾಟಕ ಕರಾವಳಿಯ ವಾತಾವರಣ ವಿಯೆಟ್ನಾಂನಲ್ಲೂ ಸಿಗೋ ಕಾರಣಕ್ಕೆ ಸಹಜವಾಗಿಯೇ ಕನ್ನಡಿಗರೂ ಆಕರ್ಷಿತರಾಗುತ್ತಿದ್ದಾರೆ. ನಮ್ಮ ರೂಪಾಯಿಗೆ ತುಲನೆ ಮಾಡಿದರೆ ವಿಯೆಟ್ನಾಂ ಹಣದ ಮೌಲ್ಯ ತೀರಾ ಕಡಿಮೆ ಇರುವುದು ಭಾರತೀಯರಿಗೆ ಈ ವಿದೇಶ ಪ್ರವಾಸ ಪಾಕೆಟ್ ಫ್ರೆಂಡ್ಲಿಯಾಗಿರೋದು ಕೂಡ ಈ ಒಲವಿಗೆ ಕಾರಣ.
ಬೆಂಗಳೂರಿನಿಂದ ವಿಯೆಟ್ಜೆಟ್ ನೇರ ವಿಮಾನವೇರಿದರೆ ಮುಂಜಾನೆಯೇ ಹೋ ಚಿ ಮಿನ್ ಸಿಟಿ ತಲುಪಿ ಆ ಇಡೀ ದಿನ ನಗರ ನೋಡಲು ಸಾಕಾಗುತ್ತದೆ. ವಿಯೆಟ್ನಾಂ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಹೋ ಚಿ ಮಿನ್ ಹೆಸರನ್ನು ಈ ಹಿಂದಿನ ಸೈಗಾನ್ ನಗರಕ್ಕೆ ಮರುನಾಮಕರಣ ಮಾಡಲಾಗಿದ್ದು ಇಲ್ಲಿನ ಹೋ ಚಿ ಮಿನ್ ಪ್ರತಿಮೆ ಇರುವ ಪ್ರದೇಶ ಅತ್ಯಾಕರ್ಷಕವಾಗಿದೆ. ಸಂಜೆಯ ನಡಿಗೆಗೆ ಅತಿ ದೊಡ್ಡ ರಸ್ತೆ ಇದ್ದು ದೊಡ್ಡ ಮೈದಾನದಂತೆ ಭಾಸವಾಗುತ್ತದೆ. ಕರಾವಳಿಯಂತೆ ಆಗಾಗ ಒಂದಷ್ಟು ಸಮಯ ಮಳೆ ಹನಿಗಳು ಬಿದ್ದರೂ ಇಡೀ ದಿನ ಈ ರಸ್ತೆಯಲ್ಲಿ ಕಳೆದಿದ್ದೇ ಗೊತ್ತಾಗುವುದಿಲ್ಲ. ಸಣ್ಣ ಸಂಗೀತ ಹಿನ್ನೆಲೆ ಮತ್ತಷ್ಟು ಮುದ ಅನುಭವ ನೀಡುತ್ತದೆ. ರಾತ್ರಿಯಿಡೀ ಈ ನಗರ ಎಚ್ಚರವಾಗಿರುವುದು ಈ ಪ್ರದೇಶದಲ್ಲೇ. ಒಪೇರಾ ಹೌಸ್ನ ನೃತ್ಯರೂಪಕವೂ ಚಿತ್ತಾಕರ್ಷಿಸುತ್ತದೆ. ರಾತ್ರಿ ನಗರ ಪ್ರದಕ್ಷಿಣೆಗೆ ಡಬಲ್ ಡೆಕ್ಕರ್ ಬಸ್ಸುಗಳ ವ್ಯವಸ್ಥೆಯಿದ್ದು ಸುಮಾರು 50 ನಿಮಿಷಗಳಲ್ಲಿ ಹೊ ಚಿ ಮಿನ್ ಸಿಟಿಯ ಪ್ರಮುಖ ಪ್ರದೇಶಗಳನ್ನು ತಂಗಾಳಿಯಲ್ಲಿ ವೀಕ್ಷಿಸಬಹುದು. ಫ್ರೆಂಚ್ ಕುರುಹುಗಳು ಇಂದಿಗೂ ಅಲ್ಲಿದ್ದು ಗಗನಚುಂಬಿ ಕಟ್ಟಡಗಳು, ದೀಪಾಲಂಕೃತ ತೂಗುಸೇತುವೆ ಗಮನಸೆಳೆಯುತ್ತವೆ. ರಾತ್ರಿಯಿಡೀ ಜಗಮಗಿಸುವ ನಗರದಲ್ಲಿ ಫುಟ್ಪಾತ್ಗಳೇ ಭರ್ಜರಿ ರೆಸ್ಟೋರೆಂಟ್ಗಳು. ಭಾರತೀಯ ಶೈಲಿಯ ಆಹಾರಕ್ಕೆ ಬನಾರಸ್, ತಲ್ಸಾ, ದಾಲ್ಚಿನ್ನಿ ರೆಸ್ಟೋರೆಂಟ್ಗಳಿವೆ. ಕಾಲಾವಕಾಶವಿದ್ದರೆ ಹೋ ಚಿ ಮಿನ್ನಿಂದ ವಿಯೆಟ್ನಾಂ ರಾಜಧಾನಿ ಹನೋಯ್ ಹಾಗೂ ಡಾ ನಾಂಗ್ ನಗರಗಳಿಗೂ ಸುಲಭವಾಗಿ ಭೇಟಿ ನೀಡಬಹುದು.
2024ರಲ್ಲಿ ಸುಮಾರು 5.01 ಲಕ್ಷ ಭಾರತೀಯ ಪ್ರವಾಸಿಗರು ವಿಯೆಟ್ನಾಂಗೆ ಭೇಟಿ ನೀಡಿದ್ದು, ಕಳೆದ ಎರಡು ವರ್ಷಗಳಲ್ಲಿ ಭಾರತೀಯ ಪ್ರವಾಸಿಗರ ಸಂಖ್ಯೆ 2.6ಪಟ್ಟು ಹೆಚ್ಚಳವಾಗಿದೆಯಂತೆ. ವಿಯೆಟ್ನಾಂ ಮೂಲಕ ಆಸ್ಟ್ರೇಲಿಯಾ, ಬಾಲಿ, ಕೌಲಾಲಂಪುರ, ಸಿಂಗಾಪುರ ಮುಂತಾದ ಸ್ಥಳಗಳಿಗೆ ಸುಲಭ ಸಂಪರ್ಕವಿರುವ ಕಾರಣ ಅನೇಕರು ಈ ಮೂಲಕ ಪ್ರಯಾಣಿಸಲು ಆಸಕ್ತಿ ತೋರುತ್ತಿದ್ದಾರೆ. ಒಟ್ಟಾರೆ ಮೂರ್ನಾಲ್ಕು ದಿನಗಳ ಬಿಡುವು ಮಾಡಿಕೊಂಡು ವಿಯೆಟ್ ಜೆಟ್ ಏರಿದರೆ ಭರ್ಜರಿ ಪ್ರವಾಸಕ್ಕೆ ಮೋಸವಿಲ್ಲ.