

ಅರಕಲಗೂಡು: ತಾಲೂಕಿನಲ್ಲಿ ಸುರಿದ ಧಾರಾಕಾರ ಮಳೆಗೆ ಒಣಗುತ್ತಿದ್ದ ಬೆಳೆಗಳು ಚೇತರಿಕೆ ಕಾಣಲಾರಂಭಿಸಿವೆ. ಗುರುವಾರ ತಡರಾತ್ರಿ ಶುರುವಾದ ಮಳೆ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಬೆಳಗಿನ ತನಕ ಅಬ್ಬರಿಸಿತು. ವರುಣನ ಕೃಪೆಯಿಂದಾಗಿ ಒಣಗುತ್ತಿದ್ದ ಬೆಳೆಗಳಿಗೆ ಜೀವ ಕಳೆ ಬಂದಂತಾಗಿದೆ.
ಕಳೆದ ಕೆಲ ದಿನಗಳಿಂದ ಅಲ್ಲಲ್ಲಿ ಮಳೆ ಮೋಡಗಳು ದಟ್ಟೈಸಿದ್ದರೂ ಜೋರು ಮಳೆ ಬೀಳದೆ ರೈತರಿಗೆ ನಿರಾಸೆ ಮೂಡಿಸುತ್ತಿತ್ತು. ಕೆಲವು ಕಡೆ ಚದುರಿದಂತೆ ಮಳೆ ಸಿಂಚನವಾದರೂ ಭೂಮಿ ಹದಗೊಳಿಸುವಷ್ಟು ಬಿದ್ದಿರಲಿಲ್ಲ. ನೀರಾವರಿ ಸೌಲಭ್ಯ ಹೊಂದಿರುವ ಕೆಲವೇ ರೈತರು ಹನಿ ನೀರಾವರಿ ಮೂಲಕ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿತ್ತು. ಮಳೆಯನ್ನೆ ನೆಚ್ಚಿಕೊಂಡಿರುವ ರೈತರಿಗೆ ಬೆಳೆಗಳನ್ನು ರಕ್ಷಿಸಿಕೊಳ್ಳುವುದು ಹೇಗೆ ಎನ್ನುವ ಚಿಂತೆಯಲ್ಲಿ ಮುಳುಗಿದ್ದರು. ಇದೀಗ ಗುಡುಗು ಸಹಿತ ಬಿದ್ದ ಮಳೆಗೆ ಅನ್ನದಾತರು ನಿಟ್ಟುಸಿರು ಬಿಡುವಂತಾಗಿದೆ.
ತಾಲೂಕಿನಲ್ಲಿ ಹಿಂಗಾರು ಬೆಳೆಯಾಗಿ ಪ್ರಮುಖ ಆಹಾರದ ಬೆಳೆಯಾದ ರಾಗಿ, ಮುಸುಕಿನ ಜೋಳ, ಅವರೆ, ಅಲಸಂದೆ, ಹುರುಳಿ ಮತ್ತಿತರ ದ್ವಿದಳ ಧಾನ್ಯಗಳನ್ನು ರೈತರು ಬೆಳೆದಿದ್ದಾರೆ. ಬಿತ್ತನೆ ವೇಳೆ ಹದವಾಗಿ ಸುರಿಯುತ್ತಿದ್ದ ಮಳೆ ಬೆಳವಣಿಗೆ ಹಂತದಲ್ಲಿ ಕೈಕೊಟ್ಟು ಅನ್ನದಾತರ ಆತಂಕಕ್ಕೆ ಕಾರಣವಾಗಿತ್ತು. ಮುಖ್ಯವಾಗಿ ಮುಂಗಾರು ಹಂಗಾಮಿನಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿ ರಾಮನಾಥಪುರ, ಕೊಣನೂರು ಹೋಬಳಿ ಭಾಗದಲ್ಲಿ ಹೆಚ್ಚಿನದಾಗಿ ಹೊಗೆಸೊಪ್ಪು ಕಟಾವು ನಂತರ ಆಹಾರದ ಬೆಳೆಯಾಗಿ ರಾಗಿ ಬಿತ್ತುವುದು ವಾಡಿಕೆ. ಜತೆಗೆ ತರಕಾರಿ ಬೆಳೆಗಳು ಹಾಗೂ ತೋಟದ ಬೆಳೆಗಳು ಕೂಡ ಬಾಡಲಾರಂಭಿಸಿದ್ದವು. ಕಸಬಾ, ದೊಡ್ಡಮಗ್ಗೆ ಹೋಬಳಿ ಭಾಗದಲ್ಲಿ ಆಲೂಗಡ್ಡೆ, ಮುಸುಕಿನ ಜೋಳದ ಬೆಳೆ ಬೆಳೆಚಿಾಗಿದೆ. ಹೆಚ್ಚಿನದಾಗಿ ಬಹುತೇಕ ಕಡೆ ರಾಗಿ ಬಿತ್ತನೆ ಮಾಡಿದ್ದು ಮಳೆಯಿಲ್ಲದೆ ಬೆಳೆ ಒಣಗುತ್ತಿತ್ತು. ಮಳೆ ಬಿದ್ದರೆ ರಾಗಿ ಫಸಲು ಕೈಗೆ ಸಿಗುವ ಆಶಾಭಾವನೆಯಿಂದ ರೈತರು ಮುಗಿಲಿನತ್ತ ದೃಷ್ಟಿ ನೆಟ್ಟಿದ್ದರು. ಮುಸುಕಿನ ಜೋಳದ ಬೆಳೆಗೆ ಭರ್ಜರಿ ಮಳೆ ಅವಶ್ಯಕತೆ ಇತ್ತು. ಮಳೆಯಿಲ್ಲದೆ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿತ್ತು. ಮಳೆಯನ್ನೇ ನೆಚ್ಚಿಕೊಂಡು ಇಂದಲ್ಲ ನಾಳೆ ಉತ್ತಮವಾಗಿ ಮಳೆ ಸುರಿಯಬಹುದು ಎನ್ನುವ ಆಶಾಭಾವನೆಯಲ್ಲಿಯೇ ರೈತರು ದಿನ ದೂಡುವಂತಾಗಿತ್ತು. ಕಳೆದೊಂದು ತಿಂಗಳಿನಿಂದ ಮಾಯವಾಗಿದ್ದ ಮಳೆ ಇದೀಗ ಹದವಾಗಿ ಸುರಿದಿರುವುದು ರೈತರ ಸಂತಸಕ್ಕೆ ಕಾರಣವಾಗಿದೆ.
ಮುಂಗಾರಿನಲ್ಲಿ ಅತಿಯಾಗಿ ಬಿದ್ದ ಮಳೆಯಿಂದಾಗಿ ಅಪಾರ ಹಣ ವ್ಯಯಿಸಿ ಬೆಳೆದಿದ್ದ ತಂಬಾಕು, ಮುಸುಕಿನ ಜೋಳ ಮತ್ತಿತರ ಬೆಳೆಗಳು ಅತಿವೃಷ್ಟಿ ಹೊಡೆತಕ್ಕೆ ಸಿಲುಕಿ ಬೆಳೆ ನಷ್ಟ ಉಂಟಾಗಿತ್ತು. ಕಾವೇರಿ ಮತ್ತು ಹೇಮಾವತಿ ನದಿ ಉಕ್ಕಿ ಹರಿದು ಪ್ರವಾಹದಿಂದ ನದಿ ಪಾತ್ರದಲ್ಲಿ ಬೆಳೆಗಳು ನಾಶವಾಗಿದ್ದವು. ಶುಂಠಿ ಫಸಲು ಕೊಳೆ ರೋಗಕ್ಕೆ ತುತ್ತಾಗಿತ್ತು. ಅಳಿದುಳಿದ ಅಲ್ಪ ಪ್ರಮಾಣದ ಫಸಲು ರೈತರ ಕೈಸೇರಿದ್ದರೂ ಬೆಲೆ ಕುಸಿತದ ಹೊಡೆತ ಅನುಭವಿಸವಂತಾಗಿತ್ತು. ಹವಾಮಾನ ವೈಪರೀತ್ಯದಿಂದಾಗಿ ಮುಂಗಾರಿನಲ್ಲಿ ಅತಿಯಾಗಿ ಸುರಿದ ಮಳೆ ಹಿಂಗಾರಿನಲ್ಲಿ ದುರ್ಬಲಗೊಂಡಿದ್ದರ ಪರಿಣಾಮವಾಗಿ ಹಿಂಗಾರು ಬೆಳೆಗಳೂ ಸಹ ಕೈ ಕೊಡುವ ಚಿಂತೆಯಲ್ಲಿದ್ದ ರೈತರಿಗೆ ಈಗ ಬಿದ್ದ ಮಳೆ ವರದಾನವಾಗಿದೆ.
------
ಹುಳುಬಾಧೆಗೆ ತತ್ತರಿಸಿದ್ದ ರೈತರು
ಕಳೆದೊಂದು ತಿಂಗಳಿನಿಂದ ಹುಳುಗಳ ಹಾವಳಿಗೆ ಸಿಲುಕಿದ್ದ ಭತ್ತದ ಪೈರುಗಳು ಅನ್ನದಾತರ ನಿದ್ದೆಗೆಡಿಸಿತ್ತು. ತಾಲೂಕಿನಲ್ಲಿ ಹೇಮಾವತಿ, ಹಾರಂಗಿ, ಕಾವೇರಿ ನದಿ ಪಾತ್ರದ ಸಾವಿರಾರು ಅಚ್ಚುಕಟ್ಟಿನಲ್ಲಿ ರೈತರು ಭತ್ತದ ಬೆಳೆ ಬೆಳೆದಿದ್ದಾರೆ. ಭತ್ತದ ನಾಟಿ ಮಾಡಿ ಒಂದು ತಿಂಗಳು ಕಳೆದಿದ್ದು ಬೆಳೆ ಸಾಕಷ್ಟು ಕಡೆ ಕೀಟಬಾಧೆಗೆ ತುತ್ತಾಗಿ ಬೆಳವಣಿಗೆ ಮೇಲೆ ಹೊಡೆತ್ತ ನೀಡಿತ್ತು. ಔಷಧ ಸಿಂಪಡಣೆ ಮಾಡಿದರೂ ರೋಗ ನಿಯಂತ್ರಣಕ್ಕೆ ಬಂದಿರಲಿಲ್ಲ. ಮಳೆ ಅಬ್ಬರಿಸದಿದ್ದರೆ ಬೆಳೆ ಕಳೆದುಕೊಳ್ಳುವ ಆತಂಕ ರೈತರಲ್ಲಿ ಮನೆಮಾಡಿತ್ತು. ಈಗ ಬಿದ್ದ ಮಳೆಗೆ ಭತ್ತದ ಬೆಳೆಗೆ ಅನುಕೂಲಕರವಾಗಲಿದೆ ಎನ್ನುತ್ತಾರೆ ಅನ್ನದಾತರು.
-----
ಮಳೆ ವಿವರ
ತಾಲೂಕಿನಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಮಳೆ ಮಾಪಕದಲ್ಲಿ ಬಸವಾಪಟ್ಟಣದಲ್ಲಿ 53.4 ಮಿಮೀ ಅಧಿಕ ಮಳೆಯಾಗಿದೆ. ಕಸಬಾ 45.8 ಮಿಮೀ, ಮಲ್ಲಿಪಟ್ಟಣ 24.0, ದೊಡ್ಡಮಗ್ಗೆ 30.8, ಕೊಣನೂರು 32.5, ದೊಡ್ಡಬೆಮ್ಮತ್ತಿ 26.2, ರಾಮನಾಥಪುರ 42.6 ಮಿ.ಮೀ. ಮಳೆಯಾಗಿದೆ.