ಚಂದ್ರು ಅಪಹರಣ, ಕೊಲೆ ಪ್ರಕರಣ: ಸುಪಾರಿ ನೀಡಿದ್ದ ಪತ್ನಿ, ಆಕೆಯ ಪ್ರಿಯಕರ

arrested
Published on

ಬೆಂಗಳೂರು: ಇತ್ತೀಚೆಗೆ ನಡೆದಿದ್ದ ಕ್ಯಾಬ್ ಚಾಲಕ ಚಂದ್ರಶೇಖರ್ ಕಿಡ್ನಾಪ್ ಮತ್ತು ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಚಾರಣೆ ವೇಳೆ ಚಂದ್ರಶೇಖರ್ ಪತ್ನಿ ಮತ್ತು ಆಕೆಯ ಪ್ರಿಯಕರ ಸುಪಾರಿಕೊಟ್ಟು ಕೊಲೆ ಮಾಡಿಸಿರುವುದು ಪತ್ತೆಯಾಗಿದೆ.

ಚಿಕ್ಕಬ್ಯಾಲಕೆರೆ ನಿವಾಸಿ ಚಂದ್ರಶೇಖರ್‌ನನ್ನು(೪೦) ಈಕೆಯ ಪತ್ನಿ ವನಜಾಕ್ಷಿ ಮತ್ತು ಆಕೆಯ ಪ್ರಿಯಕರ ನಾಗರಾಜ್ ೧ ಲಕ್ಷಕ್ಕೆ ಸುಪಾರಿ ಕೊಟ್ಟು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ನಾಗರಾಜ್, ಪರಿಚಿತ ನಂದನ್ ಎಂಬಾತನಿಗೆ ೧ ಲಕ್ಷಕ್ಕೆ ಸುಪಾರಿ ನೀಡಿ ೩೦ ಸಾವಿರ ಅಡ್ವಾನ್ಸ್ ನೀಡಿದ್ದ. ಸುಪಾರಿ ನೀಡಿದ್ದ ಹಿನ್ನೆಲೆಯಲ್ಲಿ ನಂದನ್ ಮತ್ತು ಆತನ ಸಹಚರರು ಚಂದ್ರುಶೇಖರ್‌ನನ್ನು ನಗರದಲ್ಲಿ ಅಪಹರಿಸಿ ಕನಕಪುರ ಸಮೀಪದ ಸಾತನೂರು ಬಳಿ ಕೊಲೆ ಮಾಡಿ ಮೃತದೇಹ ಎಸೆದಿದ್ದರು. ಇದೀಗ ಸೋಲದೇವನಹಳ್ಳಿ ಪೊಲೀಸರ ವಿಚಾರಣೆಯಲ್ಲಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸುಮಾರು ೭-೮ ವರ್ಷಗಳಿಂದ ಕ್ಯಾಬ್ ಚಾಲನೆ ಮಾಡಿಕೊಂಡು ಜೀವನ ನಡೆಸುತ್ತಿದ್ದ ಚಂದ್ರಶೇಖರ್‌ನನ್ನು ಇತ್ತೀಚೆಗೆ ದುಷ್ಕರ್ಮಿಗಳು ಕಾರಿನಲ್ಲಿ ಅಪಹರಣ ಮಾಡಿದ್ದರು. ಈ ಸಂಬಂಧ ಚಂದ್ರಶೇಖರ್ ಪಾಲಕರು, ಸೋಲದೇವನಹಳ್ಳಿ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಆತನಿಗಾಗಿ ಎಲ್ಲೆಡೆ ಶೋಧ ಕಾರ್ಯ ನಡೆಸಲಾಗಿತ್ತು. ಈ ಮಧ್ಯೆ ಕಳೆದ ಶನಿವಾರ ಮಧ್ಯಾಹ್ನ ಸಾತನೂರು ಬಳಿಯ ಕಬ್ಬಾಳು ಗ್ರಾಮದ ಬಳಿ ಕಾರಿನಲ್ಲಿ ಅಪರಿಚಿತ ಮೃತದೇಹ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ತೆರಳಿದ ಪೊಲೀಸರು, ಪರಿಶೀಲಿಸಿದಾಗ ಮೃತ ವ್ಯಕ್ತಿ ಚಂದ್ರಶೇಖರ್ ಎಂಬುದು ಗೊತ್ತಾಗಿತ್ತು. ಅಪಹರಿಸಿದ ದುಷ್ಕರ್ಮಿಗಳು, ಚಂದ್ರಶೇಖರ್‌ನನ್ನು ಕಾರಿನಲ್ಲೇ ಮಾರಕಾಸ್ತ್ರಗಳಿಂದ ಇರಿದು ಹತ್ಯೆಗೈದು, ಬಳಿಕ ಕಲ್ಲಿನಿಂದ ತಲೆಯನ್ನು ಜಜ್ಜಿರುವುದು ಕಂಡು ಬಂದಿತ್ತು. ಈ ಸಂಬಂಧ ಸಾತನೂರು ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net