ಸೋಮವಾರಪೇಟೆ : ತಾಲೂಕಿನ ತಣ್ಣೀರುಹಳ್ಳ ಗ್ರಾಮದಲ್ಲಿ ಪತಿಯ ಕಿರುಕುಳದಿಂದ ಬೇಸತ್ತ ಪತ್ನಿ ತವರು ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.
ಗ್ರಾಮದ ಕೂಲಿ ಕಾರ್ಮಿಕ ನಾಗ ಅವರ ಪುತ್ರಿ ಸವಿತಾ(22) ಆತ್ಮಹತ್ಯೆ ಮಾಡಿಕೊಂಡವರು. ಮೇ 13ರಂದು ಮೈಸೂರು ಜಿಲ್ಲೆಯ ಇಲವಾಲ ಬಳಿಯ ಗುಂಗ್ರಾಲ್ ಛತ್ರ ಗ್ರಾಮದ ಶಶಿಕುಮಾರ್‌ಗೆ ಮದುವೆ ಮಾಡಿಕೊಡಲಾಗಿತ್ತು. ಮಗಳು ಮೂರು ತಿಂಗಳ ಗರ್ಭಿಣಿ ಆದರೂ ಅಳಿಯ ಕಿರುಕುಳ ಕೊಡುತ್ತಿದ್ದ ಬಗ್ಗೆ ಪುತ್ರಿ ತಂದೆಗೆ ದೂರವಾಣಿ ಮೂಲಕ ತಿಳಿಸಿದ್ದಳು. ನಂತರ ಗರ್ಭಪಾತವಾಗಿ, ತಣ್ಣೀರುಹಳ್ಳ ಗ್ರಾಮದ ನಮ್ಮ ಮನೆಯಲ್ಲಿ ಮಗಳಿಗೆ ಆರೈಕೆ ಮಾಡುತ್ತಿದ್ದರು. ಆದರೆ ಭಾನುವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿ ಶಶಿಕುಮಾರ್ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಮೃತಳ ತಂದೆ ನಾಗ ಪಟ್ಟಣದ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.