

ರಿಪ್ಪನ್‌ಪೇಟೆ: ದಶಲಕ್ಷಣ ಪರ್ವ ಎನ್ನುವುದು ಆತ್ಮದ ಗುಣಗಳನ್ನು ತಿಳಿದುಕೊಳ್ಳಲು ಇರುವ ಮಾರ್ಗ. ಕ್ಷಮಾದಿ ದಶಲಕ್ಷಣ ಧರ್ಮಗಳು ಆತ್ಮದ ಲಕ್ಷಣಗಳು ಎಂದು ಹೊಂಬುಜ ಜೈನ ಮಠದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಹೊಂಬುಜ ಜೈನಮಠದಲ್ಲಿ ದಶಲಕ್ಷಣ ಮಹಾಪರ್ವದ ಮೊದಲನೆ ದಿನದ ಧಾರ್ಮಿಕ ಕಾರ್ಯಕ್ರದಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದ ಅವರು, ಮೊದಲನೆಯದು ಉತ್ತಮ ಕ್ಷಮೆಯಾಗಿದ್ದು, ಕ್ಷಮೆಯಿಂದ ನಾವು ಇನ್ನೊಬ್ಬರನ್ನು ಕ್ಷಮಿಸುವುದರೊಂದಿಗೆ ನಮಗೆ ಇನ್ನೊಬ್ಬರಿಂದ ಆದಂತಹ ಹಾನಿಯನ್ನು ಆ ಕ್ಷಣದಲ್ಲಿ ಮರೆತರೆ ನಮಗೆ ನಿಜವಾದಂತಹ ಕ್ಷಮಾಗುಣ ನಮ್ಮ ಧರ್ಮದಲ್ಲಿ ಇನ್ನಷ್ಟು ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ವಿಕೃತಿ ಮಾಡುವವರ ಜತೆ ಯಾವುದೇ ರೀತಿ ಸಂಬಂಧ ಇಟ್ಟುಕೊಳ್ಳಬಾರದು ಎಂಬುದೇ ಕ್ಷಮಾ ಧರ್ಮವಾಗಿದೆ. ನೂರಾರು ವರ್ಷ ತಪಸ್ಸು ಮಾಡಿದ ತಪಸ್ವಿಗಿಂತ ಕ್ಷಣ ಮಾತ್ರದಲ್ಲಿ ಯಾವುದೇ ಒಬ್ಬ ವ್ಯಕ್ತಿ ಮಾಡಿದ ತಪ್ಪನ್ನು ಕ್ಷಮಿಸುವವನೇ ನಿಜವಾದ ಮಹಾನ್ ವ್ಯಕ್ತಿ ಎಂದರು. ಶ್ರೀ ನೇಮಿನಾಥ ಸ್ವಾಮಿ, ಶ್ರೀ ಸರಸ್ವತಿ ದೇವಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಆದಿನಾಥ ಸ್ವಾಮಿ ಸಾನಿಧ್ಯದಲ್ಲಿ ಧಾರ್ಮಿಕ ವಿಧಾನಗಳು ಜರುಗಿದವು.