ಸೇವೆಯಿಂದ ಮೂಡಲಿದೆ ಜೀವನ ಮೌಲ್ಯ

nss
ಎನ್‌ಎಸ್‌ಎಸ್ ಸ್ವಯಂ ಸೇವಕರಿಗೆ ಆಯೋಜಿಸಿದ್ದ ಎರಡು ದಿನಗಳ ನಾಯಕತ್ವ ತರಬೇತಿ ಕಾರ್ಯಾಗಾರವನ್ನು ಪ್ರೊ.ಜಿ.ಬಿ.ಶಿವರಾಜು ಉದ್ಘಾಟಿಸಿದರು. ಡಾ.ಶುಭಾ ಮರವಂತೆ, ದಿವ್ಯಾ, ಡಾ.ಪ್ರಕಾಶ್ ಮರ‌್ಗನಳ್ಳಿ, ಪ್ರೊ.ಟಿ.ಅವಿನಾಶ್, ಡಾ.ಹಾಲಮ್ಮ ಮುಂತಾದವರಿದ್ದರು.
Published on

ಶಿವಮೊಗ್ಗ: ಬದುಕಿಗೆ ಶಿಸ್ತು ಎಂಬ ಬೇಲಿ ಅವಶ್ಯ. ಇಂತಹ ಶಿಸ್ತನ್ನು ಎನ್‌ಎಸ್‌ಎಸ್ ಕಲಿಸುತ್ತದೆ. ಸೇವೆಯೇ ಜೀವನ ಎನ್ನುವ ಮೌಲ್ಯವನ್ನು ಕಲಿಸಿಕೊಡುವುದು ಎನ್‌ಎಸ್‌ಎಸ್. ಸಹನೆ, ಶಾಂತಿ, ಸೌಹಾರ್ದ, ಆಧ್ಯಾತ್ಮ, ರಾಷ್ಟ್ರಭಕ್ತಿ, ನಾಯಕತ್ವ ಗುಣ ಮುಂತಾದ ಉತ್ತಮ ಸಂಗತಿಗಳು ಎನ್‌ಎಸ್‌ಎಸ್‌ನಿಂದ ಸಿಗುತ್ತದೆ ಎಂದು ಗಾಂಧಿ ಸ್ಮಾರಕ ನಿಧಿ ಕಾರ್ಯಕ್ರಮದ ನಿರ್ದೇಶಕ ಪ್ರೊ.ಜಿ.ಬಿ.ಶಿವರಾಜು ಅಭಿಪ್ರಾಯಪಟ್ಟರು.

ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆ, ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಸಂಯುಕ್ತಾಶ್ರಯದಲ್ಲಿ ಎನ್‌ಎಸ್‌ಎಸ್ ಸ್ವಯಂ ಸೇವಕರಿಗೆ ಆಯೋಜಿಸಿದ್ದ ಎರಡು ದಿನಗಳ ವಿಶ್ವವಿದ್ಯಾಲಯ ಮಟ್ಟದ ನಾಯಕತ್ವ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸೇವೆಯೇ ಜೀವನ. ಆ ಮನೋಭಾವವನ್ನು ಸ್ವಯಂ ಸೇವಕರು ಉಳಿಸಿಕೊಳ್ಳಬೇಕಾಗಿದೆ. ಭಾರತ ನಿಜಕ್ಕೂ ಪವಿತ್ರಭೂಮಿ. ಇಂತಹ ಭಾರತದಲ್ಲಿ ಹುಟ್ಟಿದ ಮಕ್ಕಳು ಧನ್ಯರು. ನಮ್ಮ ನಡವಳಿಕೆಗಳನ್ನು ಉತ್ತಮಪಡಿಸುವ ಮೂಲಕ ರಾಷ್ಟ್ರಭಕ್ತಿ ಹೆಚ್ಚಿಸಿಕೊಳ್ಳಬೇಕು ಎಂದರು.

ಕಾಲೇಜಿನ ಪ್ರಾಚಾರ್ಯ ಪ್ರೊ.ಟಿ.ಅವಿನಾಶ್ ಮಾತನಾಡಿ, ಎನ್‌ಎಸ್‌ಎಸ್‌ಗೆ ಸೈದ್ಧಾಂತಿಕ ತಳಹದಿಯಿದೆ. ಇದು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಅಧ್ಯಾಪಕರಲ್ಲೂ ಸೇವೆ, ಮೌಲ್ಯವನ್ನು ಕಲಿಸಿ, ಜ್ಞಾನದ ಅರಿವನ್ನು ವಿಸ್ತರಿಸುತ್ತದೆ. ನಮ್ಮ ಕಾಲೇಜಿನಲ್ಲಿ ಎನ್‌ಎಸ್‌ಎಸ್‌ಗೆ ಆದ್ಯತೆ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಗಾಂಧಿ ಅಧ್ಯಯನ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದರು.

ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಶುಭಾ ಮರವಂತೆ ಮಾತನಾಡಿ, ಮಕ್ಕಳು ಎನ್‌ಎಸ್‌ಎಸ್‌ನ್ನು ಪ್ರೀತಿಸಬೇಕಾಗಿದೆ. ಒಳ್ಳೆಯ ಆಲೋಚನೆಗಳು ಇಂತಹ ಶಿಬಿರದಿಂದ ಸಿಗುತ್ತವೆ. ಪ್ರೀತಿ, ಕರುಣೆ, ಸಹನೆ, ಸಂಸ್ಕೃತಿ, ಸಹಕಾರ ಸೇವೆ ಇವೆಲ್ಲವೂ ಎನ್‌ಎಸ್‌ಎಸ್‌ನ ಪ್ರತಿರೂಪವೇ ಆಗಿದೆ. ಮುಂದಿನ ದಿನಗಳಲ್ಲಿ ಗಾಂಧಿ ಪಾರ್ಕ್‌ನಲ್ಲಿ 21 ದಿನಗಳ ಕಾಲ ಎನ್‌ಎಸ್‌ಎಸ್ ಘಟಕ ಕೆಲಸ ಮಾಡಲಿದೆ. ಅಲ್ಲೊಂದು ಗಾಂಧಿ ಧ್ಯಾನ ಮಂದಿರ ನಿರ್ಮಾಣ ಮಾಡುವ ಕನಸಿದೆ. ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಶಾಸಕರ ಜತೆ ಈ ಬಗ್ಗೆ ಮಾತನಾಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮ ಸಂಚಾಲಕ ಡಾ.ಪ್ರಕಾಶ್ ಮರ‌್ಗನಳ್ಳಿ, ಪ್ರಮುಖರಾದ ಡಾ. ಕುಂದನ್ ಬಸವರಾಜ್, ಎಂ.ಪರಶುರಾಮ್, ಡಾ. ಹಾಲಮ್ಮ, ದಿವ್ಯಾ, ರುದ್ರಮುನಿ, ಮೋಹನ್‌ಕುಮಾರ್, ಜಿ.ಆರ್.ಲವ, ಎನ್.ಕುಮಾರ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net