

ಬೆಂಗಳೂರು: ಬೆಂಗಳೂರು-ಕನಕಪುರ ರಸ್ತೆ ತಲಘಟ್ಟಪುರ ಸಮೀಪದ ನೈಸ್ ರೋಡ್ ಪಕ್ಕದಲ್ಲಿ 2 ಬಾಕ್ಸ್ ಮತ್ತು 1 ಟ್ರ್ಯಾಲಿ ಬ್ಯಾಗ್‌ನಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳ ಮೌಲ್ಯ ಬರೋಬ್ಬರಿ 10 ಕೋಟಿ ರೂ. ಎಂದು ಪೊಲೀಸರು ಅಂದಾಜು ಮಾಡಿದ್ದಾರೆ. ಆದರೆ, ಈ ಎಲ್ಲ ನೋಟುಗಳು ಜೆರಾಕ್ಸ್ ಪ್ರತಿಗಳು ಮತ್ತು ಬಿಳಿ ಕಾಗದ ಎಂದು ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಬೆಂಗಳೂರು-ಕನಕಪುರ ಹೆದ್ದಾರಿಯ ನೈಸ್ ರಸ್ತೆ ಪಕ್ಕದಲ್ಲಿ ಬಾಕ್ಸ್ ಮತ್ತು ಟ್ರ್ಯಾಲಿ ಬ್ಯಾಗ್‌ನಲ್ಲಿ ಹಣ ಕಂಡು ಸ್ಥಳೀಯರು ಪೊಲೀಸ್ ಕಂಟ್ರೋಲ್ ರೂಮ್ 112ಗೆ ಕರೆ ಮಾಡಿ ಮಾಹಿತಿ ನೀಡಿದರು.
ಜನರು ಗುಂಪು ಸೇರಿದ ಪರಿಣಾಮ ಸಂಚಾರ ದಟ್ಟಣೆ ಸಹ ಉಂಟಾಗಿತ್ತು. ವಿಷಯ ತಿಳಿದ ಹೊಯ್ಸಳ ವಾಹನಗಳು ಮತ್ತು ಸಂಚಾರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಬಾಕ್ಸ್ ಮತ್ತು ಬ್ಯಾಗ್‌ಗಳನ್ನು ವಶಕ್ಕೆ ಪಡೆದು ಠಾಣೆಗೆ ತರಲಾಗಿದೆ.
ಪರಿಶೀಲನೆ ನಡೆಸಿದಾಗ ಜೆರಾಕ್ಸ್ ಪ್ರತಿಗಳು ಆಗಿದ್ದು, 10 ಕೋಟಿ ರೂ. ಮೌಲ್ಯದ ನಕಲಿ ನೋಟು ಎಂದು ಅಂದಾಜು ಮಾಡಲಾಗಿದೆ. ಜತೆಗೆ ರೈಸ್‌ಪುಲ್ಲಿಂಗ್‌ಗೆ ಬಳಸುವ ಚೊಂಬುಗಳು ಸಹ ಪತ್ತೆಯಾಗಿವೆ. ಇಲ್ಲಿಗೆ ಈ ಬಾಕ್ಸ್ ಮತ್ತು ಬ್ಯಾಗ್ ಹೇಗೆ ಬಂದು.
ಇದರ ವಾರಸುದಾರರು ಯಾರೆಂದು ತನಿಖೆ ಕೈಗೊಳ್ಳಲಾಗಿದೆ. ವಿಶೇಷ ತಂಡ ಬ್ಯಾಗ್ ಪತ್ತೆಯಾದ ಸುತ್ತಲ ಪ್ರದೇಶದಲ್ಲಿ ಸಿಸಿ ಕ್ಯಾಮರಾ ಪರಿಶೀಲನೆ ನಡೆಸುತ್ತಿದ್ದು, ಕಿಡಿಗೇಡಿಗಳನ್ನು ಬಂಧಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.