ಎಲ್ಲರನ್ನೂ ಒಗ್ಗೂಡಿಸುವ ವಿಶ್ವಮಾನ್ಯ ಯೋಗ

vv yoga
ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ವಿವಿಧ ಯೋಗ ಸಂಘಟನೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಯೋಗ ದಿನಾಚರಣೆಯನ್ನು ಅನಿಲ್‌ಕುಮಾರ್ ಎಚ್.ಶೆಟ್ಟರ್ ಉದ್ಘಾಟಿಸಿದರು. ಬೆಲಗೂರು ಮಂಜುನಾಥ್ ಮತ್ತಿತರರಿದ್ದರು.
Published on

ಶಿವಮೊಗ್ಗ: ಪ್ರತಿನಿತ್ಯ ತಪ್ಪದೇ ಯೋಗದ ವಿವಿಧ ಆಸನಗಳನ್ನು ಮಾಡುವವರೂ ಅಲ್ಲಿದ್ದರು. ಮುಂಬರುವ ದಿನಗಳಲ್ಲಿ ನಿತ್ಯ ಯೋಗ ಮಾಡಬೇಕೆಂದು ಸಂಕಲ್ಪ ತೊಟ್ಟವರೂ ಆಗಮಿಸಿದ್ದರು. ಎರಡು ತಾಸಿನ ಕಾರ್ಯಕ್ರಮದಲ್ಲಿ ಹತ್ತಾರು ಆಸನಗಳನ್ನು ಮಾಡುವ ಮೂಲಕ 250ಕ್ಕೂ ಹೆಚ್ಚು ಮಂದಿ ಯೋಗದ ಮಹತ್ವವನ್ನು ಅನಾವರಣಗೊಳಿಸಿದರು.

‘ವಿಜಯವಾಣಿ’ ಮಾಧ್ಯಮ ಸಹಯೋಗದಲ್ಲಿ ಕಣಾದ ಯೋಗ ರೀಸರ್ಚ್ ಫೌಂಡೇಷನ್ ಮತ್ತಿತರ ಸಂಘಟನೆಗಳ ಆಶ್ರಯದಲ್ಲಿ ಶನಿವಾರ ವಿನೋಬನಗರ ಶುಭ ಮಂಗಳ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಚ್ಚುಕಟ್ಟಾಗಿ ನೆರವೇರಿತು.

ಬೆಳಗ್ಗೆ 5.50ಕ್ಕೆ ಆರಂಭವಾದ ಯೋಗ ದಿನಾಚರಣೆ ಮುಕ್ತಾಯವಾಗಿದ್ದು 7.45ಕ್ಕೆ. ಶಂಖನಾದ, ನಂತರ ದೀಪ ಪ್ರಜ್ವಲನದ ಮೂಲಕ ಯೋಗ ದಿನಾಚರಣೆಗೆ ಚಾಲನೆ ದೊರೆಯಿತು. ವಿವಿಧ ಯೋಗ ತರಬೇತುದಾರರ ಸೂಕ್ತ ಸೂಚನೆಗಳೊಂದಿಗೆ ನೆರೆದಿದ್ದವರು ವಿವಿಧ ಆಸನಗಳನ್ನು ಪ್ರದರ್ಶಿಸಿದರು.

ಮಕ್ಕಳು, ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಯುವಕ-ಯುವತಿಯರು, ವಿವಿಧ ಯೋಗ ಕೇಂದ್ರಗಳ ಯೋಗಪಟುಗಳು ಸೇರಿದಂತೆ ಎಲ್ಲ ವಯೋಮಾನದವರು ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಪೂರ್ವನಿಯೋಜಿತದಂತೆ ಎಲ್ಲ ಆಸನಗಳು ನಿಗದಿತ ಸಮಯಕ್ಕೆ ಮುಗಿದು ಸಮಯ ಪರಿಪಾಲನೆ ಸಾಕಾರಗೊಂಡಿತು. ಗೃಹ ರಕ್ಷಕ ದಳದ 100 ಸಿಬ್ಬಂದಿ ಭಾಗವಹಿಸಿ ಆಸನಗಳನ್ನು ಪ್ರದರ್ಶಿಸಿದ್ದು ವಿಶೇಷವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net