ಆಡಿದಂತೆ ನಡೆಯುವುದೇ ನಿಜವಾದ ಧರ್ಮ: ರಂಭಾಪುರಿ ಶ್ರೀ

rambapuri sree programme
ಶಿವಮೊಗ್ಗ ತಾಲೂಕಿನ ಬಿ.ಬೀರನಹಳ್ಳಿ ಗ್ರಾಮದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಧರ್ಮೋಪದೇಶ ಮಾಡಿದರು. ಡಾ. ನಾಗಭೂಷಣ ಶಿವಾಚಾರ್ಯರು, ಡಾ. ಕೇದಾರ ಶಿವಶಾಂತವೀರ ಶಿವಾಚಾರ್ಯರು ಇದ್ದರು.
Published on

ಶಿವಮೊಗ್ಗ: ಮನುಷ್ಯನ ಉಜ್ವಲ ಭವಿಷ್ಯಕ್ಕೆ ಧರ್ಮಾಚರಣೆ ಅಗತ್ಯ ಇದೆ. ಆಡುವ ಮಾತು ಧರ್ಮವಲ್ಲ. ಆಡಿದಂತೆ ನಡೆಯುವುದೇ ನಿಜವಾದ ಧರ್ಮ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.

ತಾಲೂಕಿನ ಬಿ.ಬೀರನಹಳ್ಳಿ ಗ್ರಾಮದಲ್ಲಿ ಗುರುವಾರ ಇಷ್ಟಲಿಂಗ ಪೂಜೆ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಬದುಕಿಗೆ ಬೆಳಕು ಕೊಡುವ ಶಕ್ತಿ ಧರ್ಮಕ್ಕೆ ಇದೆ ಹೊರತು ಬೇರೆ ಯಾವುದಕ್ಕೂ ಇಲ್ಲ ಎಂದರು.
ವೀರಶೈವ ಧರ್ಮ ಅತ್ಯಂತ ಪ್ರಾಚೀನ ಧರ್ಮವಾಗಿದ್ದು ಇದಕ್ಕೊಂದು ಭವ್ಯ ಪರಂಪರೆ ಇತಿಹಾಸ ಇದೆ. ಸಕಲ ಜೀವಾತ್ಮರಿಗೆ ಸದಾ ಒಳಿತನ್ನೇ ಬಯಸಿದ ವೀರಶೈವ ಧರ್ಮ ಆಯಾ ಕಾಲಘಟ್ಟಗಳಲ್ಲಿ ಬೆಳೆದುಕೊಂಡು ಬಂದಿದೆ. ಆದರೆ ಎಷ್ಟೋ ಜನರು ಧರ್ಮವನ್ನು ಜಾತಿಗೆ ಜೋಡಿಸಿ ಧರ್ಮದ ವಿಶಾಲ ತತ್ವಕ್ಕೆ ಅಪಚಾರ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಜಾತಿ ಎಂದೂ ಧರ್ಮವಾಗಲಾರದು. ಧರ್ಮದಲ್ಲಿರುವ ದೂರದೃಷ್ಟಿ ಜಾತಿಯಲ್ಲಿ ಇಲ್ಲ. ಧರ್ಮ ಸಂಸ್ಕೃತಿ ಎತ್ತಿ ಹಿಡಿಯುವ ವಿಶಾಲ ಮನೋಭಾವ ಎಲ್ಲರಲ್ಲೂ ಬೆಳೆದು ಬರಬೇಕಾಗಿದೆ. ಶ್ರೀ ಜಗದ್ಗುರು ರಂಭಾಪುರಿ ಧರ್ಮಪೀಠ ನಿರಂತರವಾಗಿ ಶ್ರಮಿಸುತ್ತಿದೆ. ನಗರ ಮತ್ತು ಹಳ್ಳಿ ಪ್ರದೇಶಗಳಲ್ಲದೆ ಎಲ್ಲ ಕಡೆ ಸಂಚರಿಸಿ ಜನಜಾಗೃತಿ ಉಂಟುಮಾಡುತ್ತಿದೆ ಎಂದರು.
ಸಮಾರಂಭಕ್ಕೂ ಮುನ್ನ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಪೂಜಾ ನೆರವೇರಿಸಿದರು. ಮಳಲಿಮಠದ ಡಾ. ನಾಗಭೂಷಣ ಶಿವಾಚಾರ್ಯರು ಹಾಗೂ ಚನ್ನಗಿರಿ ಹಿರೇಮಠದ ಡಾ. ಕೇದಾರ ಶಿವಶಾಂತವೀರ ಶಿವಾಚಾರ್ಯರು ಧರ್ಮೋಪದೇಶ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net