

ಭುವನೇಶ್ವರ್: ಅಪ್ರಾಪ್ತನಿಗೆ ತನ್ನ ಬೈಕ್ ಓಡಿಸಲು ಕೊಟ್ಟ ವ್ಯಕ್ತಿಯೋರ್ವ ಪಜೀತಿಗೆ ಸಿಲುಕಿದ್ದಾರೆ.
ಓಡಿಶಾದ ಭದ್ರಕ್ ಜಿಲ್ಲೆಯಲ್ಲಿ ಘಟನೆ ನಡೆದಿದೆ.
ಅಪ್ರಾಪ್ತನೋರ್ವ ದ್ವಿಚಕ್ರವಾಹನದಲ್ಲಿ ಇಬ್ಬರು ಸ್ನೇಹಿತರನ್ನು ಕೂರಿಸಿಕೊಂಡು, ಹೆಲ್ಮೆಟ್ ಹಾಕದೆ ತಪ್ಪಾದ ದಿಕ್ಕಿನಲ್ಲಿ ಸಂಚಾರ ಮಾಡುತ್ತಿದ್ದ. ಈತನನ್ನು ಅಡ್ಡಗಟ್ಟಿದ ಟ್ರಾಫಿಕ್ ಪೊಲೀಸರು ಭರ್ಜರಿ ದಂಡ ಹಾಕಿದ್ದಾರೆ. ಆದರೆ ಚಲನ್ ವಿಧಿಸಿದ್ದು ಆ ಅಪ್ರಾಪ್ತನಿಗಲ್ಲ. ಆತನಿಗೆ ಬೈಕ್ ಕೊಟ್ಟ ಮಾಲೀಕನಿಗೆ...!
2019ರ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯಡಿ ಬೈಕ್ ಮಾಲೀಕನಿಗೆ ಹಾಕಿದ್ದು ಬರೋಬ್ಬರಿ 42,500 ರೂಪಾಯಿ ದಂಡ. ಅಪ್ರಾಪ್ತನಿಗೆ ಬೈಕ್ ಓಡಿಸಲು ಕೊಟ್ಟಿದ್ದಲ್ಲದೆ, ಆತ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದೇ ಇದಕ್ಕೆ ಕಾರಣ ಎಂದು ಟ್ರಾಫಿಕ್ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
42, 500 ರೂಪಾಯಿ ಒಟ್ಟು ದಂಡದಲ್ಲಿ ಸಾಮಾನ್ಯ ಅಪರಾಧಕ್ಕಾಗಿ 500 ರೂ., ಸೂಕ್ತ ದಾಖಲೆಗಳೇ ಇಲ್ಲದ ಬೈಕನ್ನು ಅಪ್ರಾಪ್ತನಿಗೆ ಓಡಿಸಲು ಕೊಟ್ಟಿದ್ದಕ್ಕೆ 5000 ರೂ., ಅಪ್ರಾಪ್ತನ ಬಳಿ ಯಾವುದೇ ಡ್ರೈವಿಂಗ್ ಲೈಸೆನ್ಸ್ ಇರದ ಕಾರಣಕ್ಕೆ 5000 ರೂ., ಅದರಲ್ಲೂ ವಾಹನ ದಟ್ಟಣೆ ಇರುವ ಸೂಕ್ಷ್ಮ ಪ್ರದೇಶದಲ್ಲಿ ಸಂಚಾರ ಮಾಡಿದ್ದಕ್ಕೆ 5000 ರೂ ಹಾಗೂ ಇಬ್ಬರನ್ನು ಕೂರಿಸಿಕೊಂಡಿದ್ದಕ್ಕೆ 1000 ಮತ್ತು ಹೆಲ್ಮೆಟ್ ಹಾಕದೆ ಇರುವುದಕ್ಕೆ 1000 ರೂ.ವಿಧಿಸಲಾಗಿದೆ.
ಹಾಗೇ ಇದನ್ನೊಂದು ಬಾಲಾಪರಾಧ ಎಂದು ಪರಿಗಣಿಸಿ ಮೋಟಾರು ವಾಹನ ಕಾಯ್ದೆಯಡಿ 25, 000 ರೂ. ಸೇರಿ ಒಟ್ಟು 42,500 ರೂಪಾಯಿ ಚಲನ್ ನೀಡಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಈ ಹಿಂದೆ ಕೂಡ ಅಪ್ರಾಪ್ತರಿಗೆ ಬೈಕ್ ಓಡಿಸಲು ಕೊಟ್ಟಿದ್ದ ಇಬ್ಬರಿಗೆ ತಲಾ 26,000 ರೂ.ದಂಡವನ್ನು ವಿಧಿಸಲಾಗಿತ್ತು. ಅಂಗುಲ್ ಹಾಗೂ ಕಟಕ್ ಜಿಲ್ಲೆಗಳಲ್ಲಿ ಪ್ರಕರಣ ನಡೆದಿತ್ತು ಎನ್ನಲಾಗಿದೆ. (ಏಜೆನ್ಸೀಸ್)