ಊಟಕ್ಕೆ ಸಿದ್ಧರಾಗಿ 'ಅಂಬೆಗಾಲಿಡುವ ಬಾಣಸಿಗ' ಬಂದಿದ್ದಾನೆ!

kids cooking
Published on

ಇತ್ತೀಚೆಗೆ ಒಂದು ವರ್ಷದ ಮಗುವೊಂದರ ವಿಡಿಯೋಗಳು ಸಖತ್ ವೈರಲ್​ ಆಗುತ್ತಿದ್ದು, ನೋಡುಗರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿದೆ. ಭಕ್ಷ್ಯ ಭೋಜನದಲ್ಲಿ ಏನೆಲ್ಲ ಇರಲಿದೆಯೋ ಈವಿಡಿಯೋ ತುಣುಕಿನಲ್ಲೂ ಅಷ್ಟೇ ಗಮ್ಮತ್ತು ಇದೆ.

ಹೌದು, ಅಂಬೆಗಾಲಿಡುತ್ತಿರುವ ವಯಸ್ಸಲ್ಲಿ ಹಾಲುಗಲ್ಲದ ಕಂದ ಅಡುಗೆ ಮನೆಯಲ್ಲಿ ನಳಪಾಕ ಮಾಡುತ್ತಿದ್ದಾನೆ. ಈತನನ್ನು ನೋಡುತ್ತಿದ್ದರೆ ಎಂತಹವರಿಗೂ ಮುದ್ದು ಮಾಡಬೇಕೆನ್ನಿಸದೆ ಇರದು. ಅಡುಗೆ ಮನೆಯಲ್ಲಿ ಸೌಟ್​ ಹಿಡಿದು ವೆರೈಟಿ ತಿಂಡಿ ಮಾಡುತ್ತ ಬಾಯಿ ಚಪ್ಪರಿಕೊಂಡು ತಿನ್ನುವುದನ್ನ ನೋಡುವುದೇ ಒಂದು ಅದ್ಭುತ. ಅಂದಹಾಗೆ ಈ ಮಗು ವಯಸ್ಸು 1 ವರ್ಷ. ಹೆಸರು ಕೋಬ್.

ಮೈದಾ ಹಿಟ್ಟು ಕಲಸಲೆಂದು ಹೋದ ಪುಟಾಣಿಯು ನೀರಿನ ಮಗ್​ ಎತ್ತಲು ಬಲ ಸಾಲದೆ ಟೇಬಲ್​ ಮೇಲೇ ಚೆಲ್ಲಿ, ಅಲ್ಲೇ ಹಿಟ್ಟಿನ ಪುಡಿ ಹಾಕಿ ಚಂದದಿ ಆಡುತ್ತಿರುವುದು, ಐಸ್ ಕ್ರೀಂ ತಿನ್ನುವುದು, ಚಾಕೋಲೆಟ್ ಕೇಕ್‌ ತಯಾರಿ, ಬೀನ್ಸ್​ ಕತ್ತರಿಸದೇ ಹಾಗೇ ಹಾಕಿ ಬೇಯಿಸುವುದು, ಬಿಸ್ಕತ್ ಮಾಡುವುದು, ಅಬ್ಬಾ! ಒಂದಾ.. ಎರಡಾ..? ಮುಗ್ಧ ನಗೆ ಬೀರುತ್ತಾ, ತುಂಟಾಟದಲ್ಲೇ ಅಡುಗೆ ಮಾಡುವ ಪರಿ ವೀಕ್ಷಕರ ಪಾಲಿಗೆ ನಗೆಯ ಭಕ್ಷ್ಯ ಭೋಜನ. ಮಗುವಿನ ಜತೆಯಲ್ಲೇ ಇದ್ದು ಮಾರ್ಗದರ್ಶನ ನೀಡುವ ಪಾಲಕರು ಅವನ ತುಂಟಾಟವನ್ನೆಲ್ಲ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ಥೇಟ್​ ಬಾಣಸಿಗನಂತೆ ತಲೆಯ ಮೇಲೆ ಕೆಂಪು ಬಣ್ಣದ ಟೋಪಿ, ಬಟ್ಟೆ ಧರಿಸಿ ಮೇಜಿನ ಮೇಲೆ ನಿಂತು ನಳಪಾಕ ಪ್ರವೀಣನಂತೆ ಫೋಸ್​ ಕೊಡುತ್ತಿರುವ ಈತನ ವಿಡಿಯೋಗಳನ್ನು ಪಾಲಕರು ತಮ್ಮ "ಕೋಬ್ ಈಟ್ಸ್" ಎಂಬ ಇನ್​ಸ್ಟಾಗ್ರಾಂ ಖಾತೆಯಲ್ಲಿ 'ಅಂಬೆಗಾಲಿಡುವ ಬಾಣಸಿಗ’ ಎಂದು ಟ್ಯಾಗ್​ಲೈನ್​ ಕೊಟ್ಟು ಅಪ್ಲೋಡ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net